ಜೆಡಿಎಸ್‌ಗೆ ನೂತನ ರಾಜ್ಯಾಧ್ಯಕ್ಷ, ಕಾರ್ಯಾಧ್ಯಕ್ಷರ ನೇಮಕ

Update: 2019-07-04 14:40 GMT

ಬೆಂಗಳೂರು, ಜು.4: ಜೆಡಿಎಸ್ ಪಕ್ಷಕ್ಕೆ ನೂತನ ರಾಜ್ಯಾಧ್ಯಕ್ಷರನ್ನಾಗಿ ಸಕಲೇಶಪುರ ವಿಧಾನಸಭಾ ಕ್ಷೇತ್ರದ ಹಿರಿಯ ಶಾಸಕ ಎಚ್.ಕೆ.ಕುಮಾರಸ್ವಾಮಿಯನ್ನು ಆಯ್ಕೆ ಮಾಡಿರುವುದಾಗಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಘೋಷಿಸಿದರು.

ಗುರುವಾರ ನಗರದ ಜೆಡಿಎಸ್ ಕಚೇರಿ(ಜೆ.ಪಿ.ಭವನ)ದಲ್ಲಿ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೇವೇಗೌಡ, ಎಚ್.ವಿಶ್ವನಾಥ್ ರಾಜೀನಾಮೆಯಿಂದ ತೆರವಾಗುತ್ತಿರುವ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್.ಕೆ.ಕುಮಾರಸ್ವಾಮಿ ಹಾಗೂ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಮಾಜಿ ಶಾಸಕ ಮಧು ಬಂಗಾರಪ್ಪರನ್ನು ಆಯ್ಕೆ ಮಾಡಿರುವುದಾಗಿ ತಿಳಿಸಿದರು.

ಅದೇ ರೀತಿ ಮಧು ಬಂಗಾರಪ್ಪರಿಂದ ತೆರವಾಗುತ್ತಿರುವ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ಆಯ್ಕೆ ಮಾಡಿರುವುದಾಗಿ ದೇವೇಗೌಡ ಹೇಳಿದರು.

ಐದು ಬಾರಿ ಶಾಸಕರಾಗಿ ಆಯ್ಕೆಯಾಗಿ, ಒಂದು ಬಾರಿ ಸಚಿವರಾಗಿ ಕೆಲಸ ಮಾಡಿದ ಅನುಭವ ಹೊಂದಿರುವ ಎಚ್.ಕೆ.ಕುಮಾರಸ್ವಾಮಿ, ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಲಿದ್ದಾರೆ ಎಂಬ ವಿಶ್ವಾಸವಿದೆ. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ನಾನು ಪರಾಭವಗೊಂಡ ಹಿನ್ನೆಲೆಯಲ್ಲಿ ನೈತಿಕ ಹೊಣೆ ಒತ್ತು ವಿಶ್ವನಾಥ್ ರಾಜೀನಾಮೆ ನೀಡಿದರು. ಇದೀಗ ಅವರ ಸ್ಥಾನಕ್ಕೆ ಎಚ್.ಕೆ.ಕುಮಾರಸ್ವಾಮಿಯನ್ನು ನೇಮಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.

ಹಿರಿಯ ಉಪಾಧ್ಯಕ್ಷರಾಗಿ ಶಾಸಕ ಕೆ.ಗೋಪಾಲಯ್ಯ, ಉಪಾಧ್ಯಕ್ಷರಾಗಿ ಆರ್.ಮಂಜುನಾಥ್‌ರನ್ನು ನೇಮಕ ಮಾಡಲಾಗಿದೆ. ಯುವ ಜನತಾದಳ ವಿಭಾಗಕ್ಕೆ ಅಧ್ಯಕ್ಷರಾಗಿ ನಿಖಿಲ್ ಕುಮಾರಸ್ವಾಮಿ, ಕಾರ್ಯಾಧ್ಯಕ್ಷರಾಗಿ ಎನ್.ಎಂ.ನೂರ್ ಅಹ್ಮದ್, ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಶರಣಗೌಡ ಕಂದಕೂರ್, ಹಿರಿಯ ಉಪಾಧ್ಯಕ್ಷರಾಗಿ ನರಸಿಂಹಮೂರ್ತಿ, ರಾಜ್ಯ ಬೂತ್ ಸಮಿತಿಯ ಅಧ್ಯಕ್ಷರಾಗಿ ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು ಹಾಗೂ ಜೆಡಿಎಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರನ್ನಾಗಿ ಬೆಳಗಾವಿ ಜಿಲ್ಲೆಯ ನಾಸೀರ್ ಭಗವಾನ್‌ರನ್ನು ನೇಮಕ ಮಾಡಲಾಗಿದೆ ಎಂದು ದೇವೇಗೌಡ ಹೇಳಿದರು.

ಈ ವೇಳೆ ಮಾತನಾಡಿದ ಜೆಡಿಎಸ್ ನಿರ್ಗಮಿತ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್, ಹಿರಿಯ ಶಾಸಕ ಎಚ್.ಕೆ.ಕುಮಾರಸ್ವಾಮಿಗೆ ಪಕ್ಷದ ಸಾರಥ್ಯವನ್ನು ವಹಿಸಿರುವುದು ಸಂತಸ ತಂದಿದೆ. ಕುಮಾರಸ್ವಾಮಿ ಹಾಗೂ ಮಧು ಬಂಗಾರಪ್ಪ ರಾಜ್ಯದಲ್ಲಿ ಪಕ್ಷವನ್ನು ಕಟ್ಟಲು ಶ್ರಮಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾನು ಸೋತರೂ ನನ್ನ ಪಥ ಸೋತಿಲ್ಲವೆಂದು ದೇವೇಗೌಡರು ಪಕ್ಷ ಸಂಘಟನೆ ಮಾಡಿದ್ದಾರೆ. ಯುವಕರ ತಂಡವನ್ನು ಕಟ್ಟಿ ರಾಜ್ಯ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಚಾಲನೆ ನೀಡಿದ್ದಾರೆ. ಪಕ್ಷದಲ್ಲಿ ಮಾನವ ಸಂಪನ್ಮೂಲಗಳ ಬಳಕೆ ಆಗಬೇಕು. ಪ್ರತಿಭಾನ್ವಿತರನ್ನು ಹುಡುಕಿ ಅಧಿಕಾರ ಕೊಡಬೇಕು ಎಂದು ಅವರು ಸಲಹೆ ನೀಡಿದರು.

ಯುವ ಜನತಾದಳ ವಿಭಾಗದ ಅಧ್ಯಕ್ಷರಾಗಿ ಆಯ್ಕೆಯಾದ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಪಕ್ಷದ ಮುಖಂಡರು ಚಿಕ್ಕ ವಯಸ್ಸಿನಲ್ಲಿ ನನಗೆ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಅದನ್ನು ನಾನು ಸಮರ್ಥವಾಗಿ ನಿರ್ವಹಿಸುತ್ತೇನೆ. ಲೋಕಸಭಾ ಚುನಾವಣೆಯ ಸೋಲಿನ ಬಳಿಕ ಎಚ್.ಡಿ.ದೇವೇಗೌಡರು ಮೂಲೆಗುಂಪಾಗುತ್ತಾರೆ ಎಂದು ಅನೇಕರು ತಿಳಿದಿದ್ದರು. ಆದರೆ ಅವರು ಇಳಿವಯಸ್ಸಿನಲ್ಲಿಯೂ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ ಎಂದರು.

ಮಂಡ್ಯ ಬಿಟ್ಟು ನಾನು ಎಲ್ಲೂ ಹೋಗುವುದಿಲ್ಲ. ಲೋಕಸಭಾ ಚುನಾವಣೆಯಲ್ಲಿ 5 ಲಕ್ಷಕ್ಕೂ ಹೆಚ್ಚು ಮತದಾರರು ನನ್ನ ಪರವಾಗಿ ಮತ ಹಾಕಿದ್ದಾರೆ. ನನ್ನ ವಿರುದ್ಧ ಮತ ಹಾಕಿರುವ ಜನರ ಮನಸ್ಸನ್ನು ಗೆಲ್ಲುವ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು.

ಇದೇ ವೇಳೆ ನೂತನ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಕಾರ್ಯಾಧ್ಯಕ್ಷ ಮಧು ಬಂಗಾರಪ್ಪ ಹಾಗೂ ಯುವ ವಿಭಾಗದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ನಿರ್ಗಮಿತ ಅಧ್ಯಕ್ಷ ಎಚ್.ವಿಶ್ವನಾಥ್ ಸೇರಿದಂತೆ ಇನ್ನಿತರ ಮುಖಂಡರು ಹೂಗುಚ್ಛ ನೀಡಿ, ಶಾಲು ಹೊದಿಸಿ ಶುಭ ಕೋರಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಸವರಾಜ ಹೊರಟ್ಟಿ, ವಿಧಾನಪರಿಷತ್ ಸದಸ್ಯ ರಮೇಶ್ ಗೌಡ, ಶಾಸಕ ನಾರಾಯಣ ಗೌಡ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

ವಿಶ್ವನಾಥ್ ಬಗ್ಗೆ ಅನುಕಂಪವಿದೆ

ತಮಗೆ ಸಿಕ್ಕ ಅಧ್ಯಕ್ಷ ಹುದ್ದೆಯನ್ನು ಸರಿಯಾಗಿ 6 ತಿಂಗಳು ಕೂಡ ನಿಭಾಯಿಸಲಾಗದೆ, ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಪಲಾಯನ ಮಾಡಿರುವ ಎಚ್.ವಿಶ್ವನಾಥ್ ಅವರು ಸದಾ ಇತರರ ಸಾಮರ್ಥ್ಯವನ್ನು ಪ್ರಶ್ನಿಸುತ್ತ ತಮ್ಮ ದೌರ್ಬಲ್ಯವನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ. ಅವರ ಬಗ್ಗೆ ನನಗೆ ಅನುಕಂಪವಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

READ THIS STORY IN ENGLISH

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News