ಪುರುಷ ಮತ್ತು ಮಹಿಳಾ ರೋಗಿಯನ್ನು ಒಂದೇ ಸ್ಟ್ರೆಚರ್ ನಲ್ಲಿ ಮಲಗಿಸಿದ ಆಸ್ಪತ್ರೆ ಸಿಬ್ಬಂದಿ!

Update: 2019-07-04 09:22 GMT

ಇಂದೋರ್, ಜು.4: ಮಧ್ಯ ಪ್ರದೇಶದ ಅತ್ಯಂತ ದೊಡ್ಡ ಸರಕಾರಿ ಆಸ್ಪತ್ರೆಯಾಗಿರುವ ಇಂದೋರ್ ನಗರದಲ್ಲಿರುವ ಮಹಾರಾಜ ಯಶವಂತರಾವ್ ಆಸ್ಪತ್ರೆಯಲ್ಲಿ ಎಕ್ಸ್-ರೇ ಕೊಠಡಿಗೆ ಸಾಗಿಸುವ ವೇಳೆ ಒಬ್ಬ ಮಹಿಳಾ ರೋಗಿಯನ್ನು ಪುರುಷ ರೋಗಿಯೊಂದಿಗೆ ಒಂದೇ ಸ್ಟ್ರೆಚರ್ ನಲ್ಲಿ ಅಲ್ಲಿನ ಸಿಬ್ಬಂದಿ ಮಲಗಿಸಿದ ಆಘಾತಕಾರಿ ಘಟನೆ ವರದಿಯಾಗಿದೆ.

ಈ ರೀತಿ ಒಂದೇ ಸ್ಟ್ರೆಚರ್ ನಲ್ಲಿ ಇರುವ ಮುಜುಗರಕಾರಿ ಸನ್ನಿವೇಶವನ್ನು ಎದುರಿಸಿದ ಮಹಿಳೆ ಸಂಗೀತಾ ಬಲಗಾಲಿನ ಮೂಳೆ ಮುರಿತಕ್ಕೊಳಗಾಗಿದ್ದು, 12 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು.

“ಸ್ಟ್ರೆಚರ್ ಕೊರತೆ ನೆಪದಲ್ಲಿ ಬೇರೊಬ್ಬ ಪುರುಷ ರೋಗಿಯೊಂದಿಗೆ ಒಂದೇ ಸ್ಟ್ರೆಚರ್ ನಲ್ಲಿ ಆಕೆಯನ್ನು ಸಾಗಿಸಲಾಗಿತ್ತು. ಆಕೆಗೆ ಚಿಕಿತ್ಸೆ ನೀಡುವುದು ಹೆಚ್ಚು ಅಗತ್ಯವಾಗಿದ್ದರಿಂದ ಅನಿವಾರ್ಯವಾಗಿ ಇದಕ್ಕೆ ಒಪ್ಪಬೇಕಾಯಿತು'' ಎಂದು ಸಂಗೀತಾ ಪತಿ ಧರ್ಮೇಂದ್ರ ಹೇಳಿದ್ದಾರೆ.

ಇಬ್ಬರು ರೋಗಿಗಳನ್ನೂ ಒಂದೇ ಸ್ಟ್ರೆಚರ್ ನಲ್ಲಿ ಸಾಗಿಸಲು ವೈದ್ಯರು ಸೂಚಿಸಿದ್ದರು, ಇದು ಅನಾನುಕೂಲವಾಗಿತ್ತು ಎಂಬುದನ್ನು ಸಂಗೀತಾ ಒಪ್ಪಿಕೊಂಡಿದ್ದಾರೆ.

ಘಟನೆಯ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ  ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ ಪಿ ಎಸ್ ಠಾಕೂರ್ ಅವರು ಆ ಸಂದರ್ಭ ಕರ್ತವ್ಯದಲ್ಲಿದ್ದ ವೈದ್ಯರು, ದಾದಿಯರು, ಹಾಗೂ ಇತರ ಸಿಬ್ಬಂದಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದು, ಸೂಕ್ತ ಕ್ರಮದ ಆಶ್ವಾಸನೆ ನೀಡಿದ್ದಾರೆ. ಆಸ್ಪತ್ರ್ರೆಯಲ್ಲಿ ಸ್ಟ್ರೆಚರ್ ಸೇರಿದಂತೆ ಹಲವು ಸೌಲಭ್ಯಗಳ ಕೊರತೆಯಿದೆಯೆಂದೂ ಅವರು ಒಪ್ಪಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News