ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ ಸಾವಿರ ರೂ. ದಂಡ: ಬಿಬಿಎಂಪಿ ಮೇಯರ್

Update: 2019-07-04 14:18 GMT

ಬೆಂಗಳೂರು, ಜು.4: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ 100 ರೂ. ದಂಡ ವಿಧಿಸಲಾಗುವುದು ಎರಡನೇ ಬಾರಿ ಉಗುಳಿದರೆ 1,000 ರೂ.ಗಳನ್ನು ವಿಧಿಸಲಾಗುವುದು ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ತಿಳಿಸಿದ್ದಾರೆ.

ಗುರುವಾರ ನಗರದ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಚ್ಛ ಭಾರತ ಸರ್ವೇಕ್ಷಣದಲ್ಲಿ ಉತ್ತಮ ರ‍್ಯಾಂಕ್ ಗಳಿಸಲು ರೋಡ್ ಮ್ಯಾಪ್ ಸಿದ್ಧಪಡಿಸಿರುವ ಬಿಬಿಎಂಪಿ 2020ರ ವೇಳೆಗೆ ಕಸದ ಸಮಸ್ಯೆಗೆ ಮುಕ್ತಿ ಹಾಡಲು ಸಿದ್ಧತೆ ಮಾಡಿಕೊಂಡಿದೆ. ಅಲ್ಲದೆ, ರಸ್ತೆ ಬದಿ ಕಸ ಎಸೆದರೆ ಮೊದಲು 100 ರೂ., 2ನೇ ಬಾರಿ 500 ರೂ. ದಂಡ, ಮೂತ್ರ ವಿಸರ್ಜನೆಗೆ ಮೊದಲ ಬಾರಿಗೆ 200 ರೂ., 2ನೇ ಬಾರಿಗೆ 1 ಸಾವಿರ ರೂ. ದಂಡ ವಿಧಿಸಲಾಗುತ್ತದೆ ಎಂದು ಹೇಳಿದರು.

ಇನ್ನು, ಒಣ ಮತ್ತು ಹಸಿ ಕಸ ಬೇರ್ಪಡಿಸದ ವಸತಿ ಪ್ರದೇಶದ ಮನೆಗಳಿಗೆ ಮೊದಲ ಬಾರಿಗೆ 200 ರೂ., ನಂತರ 1 ಸಾವಿರ ರೂ. ದಂಡ, ವಾಣಿಜ್ಯ ಕಟ್ಟಡದವರಿಗೆ ಮೊದಲ ಬಾರಿಗೆ 1 ಸಾವಿರ ರೂ., ನಂತರ 5 ಸಾವಿರ ರೂ. ದಂಡ, ಆಸ್ಪತ್ರೆ ತ್ಯಾಜ್ಯ ವಿಂಗಡಿಸದಿದ್ದರೆ ಮೊದಲ ಬಾರಿಗೆ 1 ಸಾವಿರ ರೂ., ನಂತರ 5 ಸಾವಿರ ರೂ. ದಂಡ, ಕಟ್ಟಡ ತ್ಯಾಜ್ಯ ಸುರಿದರೆ ಮೊದಲ ಬಾರಿಗೆ 5 ಸಾವಿರ ರೂ., ಆನಂತರ 25 ಸಾವಿರ ರೂ.ದಂಡ ವಿಧಿಸಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.

ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ತಡೆಯಲು ಬಿಬಿಎಂಪಿ 230ಕ್ಕೂ ಅಧಿಕ ಮಾರ್ಷಲ್‌ಗಳನ್ನು ನೇಮಿಸಲು ತೀರ್ಮಾನಿಸಲಾಗಿದೆ. ಕಸ ಎಸೆದರೆ, ಬೇರ್ಪಡಿಸದಿದ್ದರೆ ದಂಡ ಹಾಕಲಿದ್ದಾರೆ. ಈ ಮಾರ್ಷಲ್‌ಗಳಿಗೆ ಎಚ್‌ಡಿಎಫ್ಸಿ ಬ್ಯಾಂಕ್ ನೀಡಿದ ಮೊಬೈಲ್ ಆಕಾರದ ದಿವೈಸ್ ಮಿಷನ್ ಬಳಸಿ ದಂಡ ಹಾಕಲಿದ್ದಾರೆ. ಕಸಕ್ಕೆ ಮಾತ್ರವಲ್ಲದೇ ಪ್ಲಾಸ್ಟಿಕ್ ಬಳಕೆದಾರರಿಗೂ ದಂಡ ಹಾಕುತ್ತಾರೆ. ಬೆಳಗ್ಗೆಯಿಂದ ಸಂಜೆವರೆಗೆ ಪಾಲಿಕೆ ಆರೋಗ್ಯಾಧಿಕಾರಿಗಳು ದಂಡ ಹಾಕಲಿದ್ದು, ರಾತ್ರಿ 8ರಿಂದ 10, ಬೆಳಗ್ಗೆ 5ರಿಂದ 8ರವರೆಗೆ ಮಾರ್ಷಲ್‌ಗಳು ಕಾರ್ಯ ನಿರ್ವಹಿಸಲಿದ್ದಾರೆ ಎಂದರು.

ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ಘನತ್ಯಾಜ್ಯ ವಿಲೇವಾರಿ ಸಂಬಂಧಿಸಿ ಸೆ.1ರಿಂದ ಹೊಸ ಟೆಂಡರ್ ಜಾರಿಗೆ ಬರಲಿದ್ದು, ಬೇರ್ಪಡಿಸದೆ ಕಸ ಹಾಕಿದರೆ ಬಾರಿ ಮೊತ್ತದ ತಂಡ ತೆರಬೇಕಾಗುತ್ತದೆ. ಪಾಲಿಕೆ ಪ್ರತಿವರ್ಷ ಕಸ ವಿಲೇವಾರಿಗೆ 1 ಸಾವಿರ ಕೋಟಿ ರೂ. ಖರ್ಚು ಮಾಡಿದರೂ, ಸಮರ್ಪಕ ಕಸ ವಿಲೇವಾರಿ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಆದ್ದರಿಂದ ವಿಲೇವಾರಿಯಲ್ಲಿ ಪಾರದರ್ಶಕ ತರಲು ಹೊಸ ಟೆಂಡರ್ ಜಾರಿಗೊಳಿಸಲಾಗಿದೆ. ಸೆ.1ರಿಂದ ಪ್ರತಿಯೊಂದು ಮನೆಯವರು ಹಸಿ ಮತ್ತು ಒಣ ಕಸ ಬೇರ್ಪಡಿಸಬೇಕು. ವಾರದ ಏಳು ದಿನ ಹಸಿ ಕಸ ಪಡೆಯಲು ಪೌರ ಕಾರ್ಮಿಕರು, ವಾರದ ಎರಡು ದಿನ ಒಣ ಕಸ ಪಡೆಯಲು ಚಿಂದಿ ಆಯುವವರು ಪ್ರತಿ ಮನೆ ಬಂದು ಕಸ ಪಡೆಯಲಿದ್ದಾರೆ. ಪೌರಕಾರ್ಮಿಕರು ಹಸಿ ಕಸ ಮಾತ್ರ ಪಡೆಯಲಿದ್ದು, ಒಂದು ವೇಳೆ ಮಿಶ್ರಕಸ ನೀಡಿದರೂ, ಪೌರಕಾರ್ಮಿಕರು ಪಡೆಯುವುದಿಲ್ಲ. ಕಸ ವಿಂಗಡಿಸದಿದ್ದರೆ ಬಾರೀ ಮೊತ್ತದ ದಂಡ ಕಟ್ಟಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಆಡಳಿತ ಪಕ್ಷದ ನಾಯಕ ವಾಜಿದ್, ಜೆಡಿಎಸ್ ನಾಯಕಿ ನೇತ್ರಾನಾರಾಯಣ, ಸದಸ್ಯ ಗುಣಶೇಖರ, ಪಾಲಿಕೆ ವಿಶೇಷ ಆಯುಕ್ತ ರಂದೀಪ್ ಸೇರಿದಂತೆ ಹಲವಾರು ಅಧಿಕಾರಿಗಳು ಉಪಸ್ಥಿತರಿದ್ದರು.

ಹೈಕೋರ್ಟ್ ಸೂಚನೆಗೆ ಬದ್ಧ

ಸಮರ್ಪಕವಾಗಿ ಕಸ ವಿಲೇವಾರಿ ಆಗಬೇಕೆಂಬ ಉದ್ದೇಶದಿಂದ ಮತ್ತು ಹೈಕೋರ್ಟ್ ಸೂಚನೆ ಮೇರೆಗೆ ಒಬ್ಬ ಗುತ್ತಿಗೆದಾರನಿಗೆ 5 ವಾರ್ಡ್‌ಗಳನ್ನು ಮಾತ್ರ ಗುತ್ತಿಗೆ ನೀಡಲಾಗಿದ್ದು, 198 ವಾರ್ಡ್‌ಗಳಲ್ಲಿ 168 ವಾರ್ಡ್‌ಗಳಿಗೆ ಹೊಸ ಟೆಂಡರ್ ಜಾರಿಯಾಗಲಿದೆ.

ಪ್ಲಾಸ್ಟಿಕ್ ನಿಷೇಧಿಸಿದ್ದರೂ ಸಾರ್ವಜನಿಕರು ಬಳಕೆ ಮಾಡುತ್ತಿದ್ದು, ಈ ಬಗ್ಗೆ 10 ದಿನಗಳ ಕಾಲ ಜಾಗೃತಿ ಮೂಡಿಸಲಾಗುವುದು. ಜು.15ರಿಂದ ಪ್ಲಾಸ್ಟಿಕ್ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಲಾಗುತ್ತದೆ.

-ಮಂಜುನಾಥ್ ಪ್ರಸಾದ್, ಬಿಬಿಎಂಪಿ ಆಯುಕ್ತ

ಗುತ್ತಿಗೆದಾರ ಪಾಲಿಸಬೇಕಾದ ನಿಯಮಗಳು

* ಮಿಶ್ರ ಕಸ ನೀಡುವವರ ಮತ್ತು ಪಡೆದವರ ಮೇಲೆ ದಂಡ.

* ಆಟೋ, ಕಾಂಪ್ಯಾಕ್ಟರ್‌ಗಳಿಗೆ ಜಿಪಿಎಸ್ ಕಡ್ಡಾಯ.

* ಶೇ.100ರಷ್ಟು ಮನೆ ಕಸ ಸಂಗ್ರಹಣೆ.

* ಹಸಿ, ಒಣ ಕಸ ಬೇರ್ಪಡಿಸದೇ ನೀಡಿದ ಕಸ ಪಡೆಯುವಂತಿಲ್ಲ.

* ಆಟೋ ಡ್ರೈವರ್, ಸಹಾಯಕನಿಗೂ ಬಯೋಮೆಟ್ರಿಕ್ ಕಡ್ಡಾಯ.

* ಸ್ಮಾರ್ಟ್ ಕಂಟ್ರೋಲ್ ರೂಮ್‌ಗೆ ಪ್ರತಿದಿನದ ಮಾಹಿತಿ ನೀಡಬೇಕು.

* ವಾರ್ಡ್ ವ್ಯಾಪ್ತಿಗೆ ಸಂಬಂಧಿಸಿ ಎಲ್ಲೆ ಕಸ ಬಿದ್ದಿದ್ದರೂ, ಅದನ್ನು ತೆರವುಗೊಳಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News