ಕೇಂದ್ರ ಬಜೆಟ್: ಚಿನ್ನ ದುಬಾರಿ, ಪೆಟ್ರೋಲ್,ಡೀಸೆಲ್ ಮೇಲೆ ಸೆಸ್ ಏರಿಕೆ

Update: 2019-07-05 16:21 GMT

ಹೊಸದಿಲ್ಲಿ, ಜು.5: ಎರಡನೇ ಅವಧಿಯ ಪ್ರಧಾನಿ ನರೇಂದ್ರ ಮೋದಿ ಸರಕಾರದಲ್ಲಿ ವಿತ್ತ ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ಶುಕ್ರವಾರ ಸಂಸತ್‌ನಲ್ಲಿ ಚೊಚ್ಚಲ ಬಜೆಟ್ ಮಂಡಿಸಿದರು.

ಅವರ ಘೋಷಣೆಗಳ ಮುಖ್ಯಾಂಶಗಳನ್ನು ಈ ಕೆಳಗೆ ನೀಡಲಾಗಿದೆ;

►2ರಿಂದ 5 ಕೋಟಿ ರೂ. ಮತ್ತು 5 ಕೋಟಿ ರೂ.ಗಿಂತ ಹೆಚ್ಚಿನ ವೈಯಕ್ತಿಕ ಆದಾಯದ ಮೇಲಿನ ಮೇಲ್ತೆರಿಗೆಯನ್ನು ಕ್ರಮವಾಗಿ ಶೇ.3 ಮತ್ತು ಶೇ.7ಕ್ಕೆ ಏರಿಸಲಾಗಿದೆ. ಅತೀಹೆಚ್ಚು ಆದಾಯ ಗಳಿಸುವವರು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಹೆಚ್ಚಿನ ಕಾಣಿಕೆ ನೀಡಬೇಕು ಎಂದು ಸಚಿವೆ ತಿಳಿಸಿದ್ದಾರೆ.

►ಚಿನ್ನ ಹಾಗೂ ಇತರ ಅಮೂಲ್ಯ ಲೋಹಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ.10ರಿಂದ ಶೇ.12.5ಕ್ಕೆ ಏರಿಸಲಾಗಿದೆ.

►ಕೈಗೆಟಕುವ ಬೆಲೆಯ ಗೃಹಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಮಾರ್ಚ್ 31, 2020ರವರೆಗೆ ಖರೀದಿಸಲಾಗುವ 45 ಲಕ್ಷ ರೂ.ವರೆಗಿನ ಮನೆಗಳ ಮೇಲೆ ಪಾವತಿಸಲಾದ ಬಡ್ಡಿದರದ ಮೇಲೆ 1.5 ಲಕ್ಷ ರೂ. ಕಡಿತ ಘೋಷಿಸಲಾಗಿದೆ.

►ಡೀಸೆಲ್ ಮತು ಪೆಟ್ರೋಲ್ ಮೇಲೆ ವಿಶೇಷ ಹೆಚ್ಚುವರಿ ಸುಂಕ ಮತ್ತು ಮೂಲಭೂತ ಸೌಕರ್ಯ ಸೆಸ್ ಪ್ರತಿ ಲೀಟರ್‌ಗೆ 2ರೂ. ಹೆಚ್ಚಳ.

►ಪ್ರಸಕ್ತ ವರ್ಷ ಭಾರತ 3 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಬೆಳೆಯಲಿದೆ. ಮುಂದಿನ ಕೆಲವೇ ವರ್ಷಗಳಲ್ಲಿ 5 ಟ್ರಿಲಿಯನ್‌ಡಾಲರ್ ಆರ್ಥಿಕತೆಯ ಗುರಿಯನ್ನು ಕ್ರಮಿಸುವುದು ಕಷ್ಟವೇನೂ ಅಲ್ಲ.

►ವಿದ್ಯುತ್‌ಚಾಲಿತ ವಾಹನಗಳ ಮೇಲೆ ಜಿಎಸ್‌ಟಿಯನ್ನು ಶೇ.12ರಿಂದ 5ಕ್ಕೆ ಇಳಿಸುವಂತೆ ಜಿಎಸ್‌ಟಿ ಮಂಡಳಿಗೆ ಸೂಚನೆ.

►2019ರಲ್ಲಿ ವಿತ್ತೀಯ ಕೊರತೆಯನ್ನು ಶೇ.3.4ರಿಂದ ಶೇ.3.3ಕ್ಕೆ ಇಳಿಸಲಾಗಿದೆ.

►ವಾರ್ಷಿಕ 400 ಕೋಟಿ ರೂ. ವ್ಯವಹಾರ ಹೊಂದಿರುವ ಕಂಪೆನಿಗಳಿಗೆ ಶೇ.25 ಕೊರ್ಪೊರೇಟ್ ತೆರಿಗೆ ಅನ್ವಯ. ಶೇ.99.3 ಕಂಪೆನಿಗಳು ಈ ವ್ಯಾಪ್ತಿಗೆ.

►ಗಾಂಧೀಜಿಯವರ ತತ್ವಗಳನ್ನು ಪ್ರಚುರಪಡಿಸಲು ಎನ್‌ಸೈಲ್ಕೋಪೀಡಿಯ ಮಾದರಿಯಲ್ಲಿ ಗಾಂಧಿಪೀಡಿಯ ಅಭಿವೃದ್ಧಿ.

ವಲಯವಾರು ಮುಖ್ಯಾಂಶಗಳು;

ಉದ್ಯೋಗ

►ಕೃಷಿ-ಗ್ರಾಮೀಣ ಉದ್ದಿಮೆಗಳಲ್ಲಿ 75,000 ಕುಶಲ ಉದ್ಯಮಿಗಳನ್ನು ಅಭಿವೃದ್ಧಿಪಡಿಸಲು ಆ್ಯಸ್ಪೈರ್ ಯೋಜನೆಯಡಿ 2019-20 ಸಾಲಿನಲ್ಲಿ 80 ಜೀವನಾಧಾರಿತ ಉದ್ಯಮ ಇನ್ಕೂಬೇಟರ್‌ಗಳು ಮತ್ತು 20 ತಂತ್ರಜ್ಞಾನ ಉದ್ಯಮ ಇನ್ಕೂಬೇಟರ್‌ಗಳ ರಚನೆ.

►ವಿದೇಶಗಳಲ್ಲಿ ಉದ್ಯೋಗಗಳಿಗೆ ಅರ್ಜಿ ಹಾಕಲು ನೆರವಾಗಲು ಯುವಕರಿಗೆ ಭಾಷಾ ಕೌಶಲ್ಯ ಮತ್ತು ಕೃತಕ ಬುದ್ಧಿಮತ್ತೆಯಂತಹ ಕೌಶಲ್ಯಗಳ ಅಗತ್ಯವಿದ್ದು ಅದರ ಮೇಲೆ ಗಮನಹರಿಸಬೇಕು.

►ಸ್ಟಾರ್ಟ್‌ಅಪ್ಸ್‌ಗಳಿಗಾಗಿ ಡಿಡಿ ನ್ಯಾಶನಲ್‌ನಲ್ಲಿ ಕಾರ್ಯಕ್ರಮ ಪ್ರಸಾರ. ಸ್ಟಾರ್ಟ್‌ಅಪ್‌ಗಳಿಂದಲೇ ಈ ಕಾರ್ಯಕ್ರಮ ಆಯೋಜನೆ.

ನಾರಿಯಿಂದ ನಾರಾಯಣ

►ಭಾರತದ ಮಹಿಳಯರ ಮೇಲೆ ಗಮನಹರಿಸಲು ಬಯಸುತ್ತೇನೆ. ಮಹಿಳೆಯರ ಹೆಚ್ಚಿನ ಭಾಗಿದಾರಿಕೆಯಿಂದ ಅಭಿವೃದ್ಧಿ ಸಾಧ್ಯ ಎಂದು ಸರಕಾರ ನಂಬಿದೆ. ಮಹಿಳಾ ಉದ್ಯಮಿಗಳನ್ನು ಉತ್ತೇಜಿಸುವ ಉದ್ದೇಶದಿಂದ ಮಹಿಳಾ ಸ್ವಸಹಾಯ ಗುಂಪುಗಳ ಕಾರ್ಯಕ್ರಮಗಳನ್ನು ಭಾರತದ ಎಲ್ಲ ಜಿಲ್ಲೆಗಳಿಗೂ ವಿಸ್ತರಣೆ.

►ಜನಧನಖಾತೆ ಹೊಂದಿರುವ ಪ್ರತಿ ಮಹಿಳಾ ಸ್ವಸಹಾಯಗುಂಪಿನ ಸದಸ್ಯೆಗೆ 5,000ರೂ. ಓವರ್‌ಡ್ರಾಫ್ಟ್ ಅವಕಾಶ.

►ಪ್ರತಿ ಸ್ವಸಹಾಯ ಗುಂಪಿನ ಓರ್ವ ಮಹಿಳೆಗೆ ಮುದ್ರಾ ಯೋಜನೆಯಡಿ ಒಂದು ಲಕ್ಷ ರೂ. ಸಾಲ ನೀಡುವಿಕೆ.

ಬ್ಯಾಂಕ್‌ಗಳು

►ಬಂಡವಾಳವನ್ನು ಉತ್ತೇಜಿಸಲು ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ 70,000 ಕೋಟಿ ರೂ. ಒದಗಿಸಲಾಗುವುದು.

►ಆರ್‌ಬಿಐಯ ನಿಯಂತ್ರಕ ಪ್ರಾಧಿಕಾರವನ್ನು ಬಲಪಡಿಸುವ ಮೂಲಕ ಸಾಲ ಬಾಕಿದಾರರ ಮೇಲೆ ಹಿಡಿತ ಸಾಧಿಸಲಾಗುವುದು. ಗೃಹ ಸಾಲ ಕ್ಷೇತ್ರದ ಮೇಲಿನ ನಿಯಂತ್ರಣ ಪ್ರಾಧಿಕಾರವನ್ನು ರಾಷ್ಟ್ರೀಯ ಹೌಸಿಂಗ್ ಬ್ಯಾಂಕ್‌ನಿಂದ ಆರ್‌ಬಿಐಗೆ ಮರುಹಸ್ತಾಂತರಿಸಲಾಗುವುದು.

ರೈಲ್ವೇ

►2018 ಮತ್ತು 2030ರ ಮಧ್ಯೆ ರೈಲ್ವೇ ಮೂಲಭೂತ ಸೌಕರ್ಯಕ್ಕೆ 50 ಲಕ್ಷ ಕೋಟಿ ರೂ. ಹೂಡಿಕೆಯ ಅಗತ್ಯವಿದೆ. ಅಭಿವೃದ್ಧಿಗೆ ವೇಗ ನೀಡಲು ಸಾರ್ವಜನಿಕ ಖಾಸಗಿ ಜೊತೆಗಾರಿಗೆಯನ್ನು ಬಳಸಲಾಗುವುದು.

►ಉಪನಗರ ರೈಲುಗಳ ಮೇಲೆ ಹೆಚ್ಚಿನ ಹೂಡಿಕೆ ಮಾಡಲು ರೈಲ್ವೇಗೆ ಪ್ರೋತ್ಸಾಹ.

►2019ರಲ್ಲಿ ರೈಲು ನಿಲ್ದಾಣ ಆಧುನೀಕರಣಕ್ಕೆ ಚಾಲನೆ.

ವಿದ್ಯುತ್ ಚಾಲಿತ ವಾಹನಗಳು

►ವಿದ್ಯುತ್ ಚಾಲಿತ ವಾಹನಗಳ ಮೇಲಿನ ಜಿಎಸ್‌ಟಿ ಶೇ.12ರಿಂದ 5ಕ್ಕೆ ಇಳಿಕೆ.

►ವಿದ್ಯುತ್ ಚಾಲಿತ ವಾಹನಗಳ ಕೆಲವು ಬಿಡಿಭಾಗಗಳಿಗೆ ಕಸ್ಟಮ್ಸ್ ಸುಂಕ ವಿನಾಯಿತಿ.

ತೆರಿಗೆ

►ನೇರ ತೆರಿಗೆ ಸಂಗ್ರಹ ಶೇ.78 ಏರಿಕೆ. ತೆರಿಗೆ ಸಂಗ್ರಹ 2013-14ರ 6.38 ಲಕ್ಷ ಕೋಟಿ ರೂ.ನಿಂದ 2018ರ ವೇಳೆಗೆ 11.37 ಲಕ್ಷ ಕೋಟಿ ರೂ.ಗೆ ಏರಿಕೆ.

►120ಕ್ಕೂ ಅಧಿಕ ಭಾರತೀಯರು ಆಧಾರ್ ಹೊಂದಿದ್ದಾರೆ. ಹಾಗಾಗಿ ತೆರಿಗೆ ಪಾವತಿದಾರರು ತೆರಿಗೆ ಪಾವತಿಸಲು ಪ್ಯಾನ್ ಕಾರ್ಡ್ ಬದಲಿಗೆ ಆಧಾರ್ ಬಳಸಬಹುದಾಗಿದೆ. ತೆರಿಗೆ ಪಾವತಿದಾರರಿಗೆ ತೊಂದರೆ ನೀಡುವುದನ್ನು ತಪ್ಪಿಸಲು ಮಾನವರಹಿತ ಎಲೆಕ್ಟ್ರೋನಿಕ್ ಆದಾಯ ತೆರಿಗೆ ಮೌಲ್ಯಮಾಪನ ವ್ಯವಸ್ಥೆಯನ್ನು ಈ ವರ್ಷದಿಂದ ಹಂತಹಂತವಾಗಿ ಜಾರಿಗೆ ತರಲಾಗುವುದು.

ಜಿಎಸ್‌ಟಿ

►ಜಿಎಸ್‌ಟಿ ವ್ಯವಸ್ಥೆಯಲ್ಲಿ ಮತ್ತಷ್ಟು ಸುಧಾರಣೆ ಮಾಡಲಾಗಿದ್ದು ವಾರ್ಷಿಕ ಐದು ಕೋಟಿ ರೂ.ಗೂ ಕಡಿಮೆ ವ್ಯವಹಾರ ನಡೆಸುವ ತೆರಿಗೆ ಪಾವತಿದಾರರು ಕೇವಲ ತ್ರೈಮಾಸಿಕ ರಿಟರ್ನ್ಸ್ ದಾಖಲಿಸಬಹುದು.

►ಸಂಪೂರ್ಣ ಸ್ವಯಂಚಾಲಿತ ಜಿಎಸ್‌ಟಿ ಮರುಪಾವತಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗುವುದು.

ಸಂಪರ್ಕ

►ರಾಷ್ಟ್ರೀಯ ಹೆದ್ದಾರಿ ಕಾರ್ಯಕ್ರಮದ ಸಮಗ್ರ ಮರುರಚನೆ ಮಾಡಲಾಗುವುದು. ರಾಷ್ಟ್ರೀಯ ಹೆದ್ದಾರಿ ಗ್ರಿಡ್ ರಚಿಸಲಾಗುವುದು. ನದಿಗಳನ್ನು ಸರಕು ಸಾಗಾಟಕ್ಕೆ ಬಳಸುವ ಬಗ್ಗೆ ಯೋಚಿಸಲಾಗಿದೆ. ಇದರಿಂದ ರಸ್ತೆ ಮತ್ತು ರೈಲ್ವೇಯಲ್ಲಿ ನಿಬಿಡತೆ ಕಡಿಮೆಯಾಗಲಿದೆ.

►ದೇಶದಲ್ಲಿ 657 ಕಿ.ಮೀ ಮೆಟ್ರೊ ರೈಲು ಜಾಲ ಕಾರ್ಯಾಚರಿಸುತ್ತಿದೆ. ಭಾರತಮಾಲ, ಸಾಗರಮಾಲ, ಜಲಮಾರ್ಗ ವಿಕಾಸ್ ಉಡಾನ್ ಮುಂತಾದ ಯೋಜನೆಗಳ ಮೂಲಕ ಸರಕಾರ ಎಲ್ಲ ರೀತಿಯ ಸಾರಿಗೆ ಸಂಪರ್ಕಗಳಿಗೆ ಉತ್ತೇಜನ ನೀಡಿದೆ.

ಕಸ್ಟಮ್ಸ್ ಸುಂಕ

►ಮೇಕ್ ಇನ್ ಇಂಡಿಯಾದ ಗುರಿಯನ್ನು ಸಾಧಿಸುವ ಉದ್ದೇಶದಿಂದ ಕೆಲವು ವಸ್ತುಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಏರಿಸಲಾಗಿದೆ. ಭಾರತದಲ್ಲಿ ತಯಾರಿಸಲಾಗದ ಪ್ರಮುಖ ರಕ್ಷಣಾ ಉಪಕರಣಗಳಿಗೆ ಮೂಲ ಕಸ್ಟಮ್ಸ್ ಸುಂಕ ವಿನಾಯಿತ ನೀಡಲಾಗಿದೆ.

►ದೇಶೀಯ ಮುದ್ರಣ ಮತ್ತು ಪ್ರಕಟನೆ ಉದ್ಯಮವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಆಮದು ಪುಸ್ತಕಗಳ ಮೇಲೆ 5ಶೇ. ಸುಂಕ ಹೇರಲಾಗಿದೆ.

ಸ್ವಚ್ಛಭಾರತ ಯೋಜನೆ

►ಪ್ರತಿ ಗ್ರಾಮದಲ್ಲೂ ಘನತ್ಯಾಜ್ಯ ನಿರ್ವಹಿಸುವ ಉದ್ದೇಶದಿಂದ ಸ್ವಚ್ಛ ಭಾರತ ಯೋಜನೆಯನ್ನು ವಿಸ್ತರಿಸಲಾಗುವುದು.

►2019ರ ಅಕ್ಟೋಬರ್ 2ರ ಹೊತ್ತಿಗೆ ಭಾರತ ಬಯಲು ಶೌಚ ಮುಕ್ತ ರಾಷ್ಟ್ರವಾಗಲಿದೆ. ಈ ಸಂದರ್ಭವನ್ನು ಸ್ಮರಣಾರ್ಥವಾಗಿಸಲು ಅದೇ ದಿನ ರಾಜ್‌ಘಾಟ್‌ನಲ್ಲಿ ರಾಷ್ಟ್ರೀಯ ಸ್ವಚ್ಛತಾ ಕೇಂದ್ರವನ್ನು ಉದ್ಘಾಟಿಸಲಾಗುವುದು.

ಗಾಂಧಿಪೀಡಿಯ

►ಗಾಂಧೀಜಿಯ ಬೋಧನೆ ಮತ್ತು ತತ್ವಗಳನ್ನು ತಿಳಿಸಲು ಎನ್‌ಸೈಕ್ಲೋಪೀಡಿಯ ಮಾದರಿಯಲ್ಲಿ ಗಾಂಧಿಪೀಡಿಯವನ್ನು ಅಭಿವೃದ್ಧಿಪಡಿಸಲಾಗುವುದು.

ಶಿಕ್ಷಣ ಮತ್ತು ಸಂಶೋಧನೆ

►ದೇಶದಲ್ಲಿ ಸಂಶೋಧನೆಗೆ ಪ್ರೋತ್ಸಾಹ ನೀಡಲು, ಸಮನ್ವಯಗೊಳಿಸಲು ಮತ್ತು ನಿಧಿ ಒದಗಿಸಲು ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ ನಿರ್ಮಾಣ.

►ಭಾರತದ ಶಿಕ್ಷಣ ವ್ಯವಸ್ಥೆಯನ್ನು ಪರಿವರ್ತಿಸಲು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ. ಜಾಗತಿಕ ಮಟ್ಟದ ಶಿಕ್ಷಣ ಸಂಸ್ಥೆಗಳ ನಿರ್ಮಾಣಕ್ಕೆ 400 ರೂ. ಹೂಡಿಕೆ. ವಿದೇಶಿ ವಿದ್ಯಾರ್ಥಿಗಳನ್ನು ಸೆಳೆಯಲು ಸ್ಟಡಿ ಇನ್ ಇಂಡಿಯಾ ಯೋಜನೆಯ ಘೋಷಣೆ.

►ಕೌಶಲ್ಯಾಭಿವೃದ್ಧಿ ದೃಷ್ಟಿಯಿಂದ ಆರಂಭಿಸಲಾಗಿರುವ ಸ್ಟಾಂಡ್ ಅಪ್ ಇಂಡಿಯಾ ಯೋಜನೆಯನ್ನು 2025ರವರೆಗೆ ವಿಸ್ತರಿಸಲಾಗಿದೆ.

ಡಿಜಿಟಲ್ ಪಾವತಿ

►ನಗದು ಪಾವತಿಯನ್ನು ತಡೆಯಲು ಬ್ಯಾಂಕ್ ಖಾತೆಗಳಿಂದ ವಾರ್ಷಿಕ ಒಂದು ಕೋಟಿ ರೂ.ಗೂ ಅಧಿಕ ಮೊತ್ತ ಹಿಂಪಡೆಯುವುದರ ಮೇಲೆ ಶೇ.2 ತೆರಿಗೆ ಹೇರಿಕೆ.

►ವಾರ್ಷಿಕ 50 ಕೋಟಿ ರೂ.ಗೂ ಅಧಿಕ ವ್ಯವಹಾರ ಹೊಂದಿರುವ ಉದ್ಯಮಗಳು ಕಡಿಮೆವೆಚ್ಚದ ಡಿಜಿಟಲ್ ಪಾವತಿಯನ್ನು ಒದಗಿಸಬಹುದು.

ಗ್ರಾಮೀಣ

►2022ರ ಒಳಗಾಗಿ ಪ್ರತಿ ಗ್ರಾಮೀಣ ಮನೆಗಳಿಗೂ ವಿದ್ಯುತ್ ಮತ್ತು ಸ್ವಚ್ಛ ಅಡುಗೆ ಅನಿಲ ಪೂರೈಕೆ ವ್ಯವಸ್ಥೆ (ಸಂಪರ್ಕ ಪಡೆದುಕೊಳ್ಳಲು ಬಯಸದ ಮನೆಗಳನ್ನು ಬಿಟ್ಟು).

►ಪಿಎಂಎವೈಯ ಎರಡನೇ ಹಂತದಲ್ಲಿ 1.95 ಮನೆಗಳ ನಿರ್ಮಾಣ. ಅವುಗಳಲ್ಲಿ ಎಲ್‌ಪಿಜಿ, ವಿದ್ಯುತ್ ಮತ್ತು ಶೌಚಾಲಯ ವ್ಯವಸ್ಥೆಗೆ ಒತ್ತು.

►ಮುಂದಿನ ಐದು ವರ್ಷಗಳಲ್ಲಿ ರೈತರಿಗೆ ಉತ್ತಮ ಆರ್ಥಿಕತೆಯನ್ನು ಖಾತ್ರಿಪಡಿಸಲು 10,000 ಹೊಸ ರೈತ ಉತ್ಪಾದನಾ ಸಂಘಗಳ ರಚನೆ.

ಪಿಂಚಣಿ

►ವಾರ್ಷಿಕ 1.5 ಕೋಟಿ ರೂ.ಗು ಕಡಿಮೆ ವ್ಯವಹಾರ ಹೊಂದಿರುವ ಮೂರು ಕೋಟಿ ಚಿಲ್ಲರೆ ವ್ಯಾಪಾರಿಗಳು ಮತ್ತು ಅಂಗಡಿಮಾಲಕರಿಗೆ ಪ್ರಧಾನ ಮಂತ್ರಿ ಕರ್ಮಯೋಗಿ ಮನ್‌ಧನ್ ಯೋಜನೆಯಡಿ ಪಿಂಚಣಿ ವಿಸ್ತರಣೆ.

ಬಾಹ್ಯಾಕಾಶ

►ಭಾರತದ ಬಹ್ಯಾಕಾಶ ಸಾಮರ್ಥ್ಯವನ್ನು ವಾಣಿಜ್ಯವಾಗಿ ಬಳಸಿಕೊಳ್ಳುವ ಉದ್ದೇಶದಿಂದ ನ್ಯೂ ಸ್ಪೇಸ್ ಇಂಡಿಯಾ ಲಿ. ಎಂಬ ಸಾರ್ವಜನಿಕ ವಲಯದ ಸಂಸ್ಥೆಯನ್ನು ರಚಿಸಲಾಗಿದೆ.

ಅನಿವಾಸಿ ಭಾರತೀಯರು

►ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ಅನಿವಸಿ ಭಾರತೀಯರು ಭಾರತಕ್ಕೆ ಆಗಮಿದ ನಂತರ ಅವರಿಗೆ ಆಧಾರ್ ಕಾರ್ಡ್ ನೀಡಬೇಕು. ಅವರು ಕಡ್ಡಾಯ 180 ದಿನಗಳು ಕಾಯುವ ಅಗತ್ಯವಿಲ್ಲ. ಎನ್‌ಆರ್‌ಗಳು ಭಾರತೀಯ ಈಕ್ವಿಟಿಗಳಲ್ಲಿ ತಡೆಯಿಲ್ಲದೆ ಭಾಗವಹಿಸಲು ಎನ್‌ಆರ್‌ಐ ಬಂಡವಾಳ ಹೂಡಿಕೆ ಮಾರ್ಗವನ್ನು ವಿದೇಶಿ ಬಂಡವಾಳ ಹೂಡಿಕೆಯೊಂದಿಗೆ ವಿಲೀನಗೊಳಿಸಲಾಗುವುದು.

ಬಾಕಿ ಖಾತ

ಬಜೆಟ್ ದಾಖಲೆಗಳನ್ನು ಚರ್ಮದ ಸೂಟ್‌ಕೇಸ್‌ನಲ್ಲಿ ತರುವ ವಸಾಹತುಶಾಹಿ ಸಂಪ್ರದಾಯಕ್ಕೆ ತಿಲಾಂಜಲಿಯಿಟ್ಟ ನಿರ್ಮಲಾ ಸೀತಾರಾಮನ್ ಶುಕ್ರವಾರ ಬಾಕಿ ಖಾತ ಎಂದು ಕರೆಯಲ್ಪಡುವ ಕೆಂಪು ಬಣ್ಣದ ಬಟ್ಟೆಯಲ್ಲಿ ಬಜೆಟ್ ದಾಖಲೆಗಳನ್ನು ಸುತ್ತಿ ತಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News