ಕೇಂದ್ರ ಬಜೆಟ್ ಬಗ್ಗೆ ಗಣ್ಯರ ಪ್ರತಿಕ್ರಿಯೆಗಳು

Update: 2019-07-05 15:37 GMT
ನಿರಂಜನಾರಾಧ್ಯ, ಡಾ.ಮೂಡ್ನಾಕೂಡು ಚಿನ್ನಸ್ವಾಮಿ, ಪ್ರೊ.ಎಸ್.ಆರ್.ಕೇಶವ್

ಬೆಂಗಳೂರು, ಜು.5: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಇಂದು ಮಂಡಿಸಿದ ಕೇಂದ್ರ ಬಜೆಟ್ ಬಗ್ಗೆ ನಿರಂಜನಾರಾಧ್ಯ, ಡಾ.ಮೂಡ್ನಾಕೂಡು ಚಿನ್ನಸ್ವಾಮಿ, ಆರ್ಥಿಕ ತಜ್ಞ ಪ್ರೊ.ಎಸ್.ಆರ್.ಕೇಶವ್ ಪ್ರತಿಕ್ರಿಯೆ ನೀಡಿದ್ದಾರೆ.

ಶಾಲಾ ಶಿಕ್ಷಣ ಕ್ಷೇತ್ರಕ್ಕೆ ಆಯವ್ಯಯದಲ್ಲಿ ಹಣ ಸಿಗದಿರುವುದು ವಿಷಾದನೀಯ

2011ರ ಜನಗಣತಿ ಪ್ರಕಾರ ಭಾರತದ ಒಟ್ಟು ಜನಸಂಖ್ಯೆಯಲ್ಲಿ ಹುಟ್ಟಿನಿಂದ 18 ವರ್ಷದ ಮಕ್ಕಳ ಶೇಕಡವಾರು ಪ್ರಮಾಣ 38.99. ಅಂದರೆ, ಸರಿ ಸುಮಾರು 1/3 ಭಾಗ. ಭಾರತದಲ್ಲಿ ಮಕ್ಕಳ ಮೂಲಭೂತ ಹಕ್ಕಾದ ಶಿಕ್ಷಣ ಹಕ್ಕು ಕಾಯಿದೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮಾರ್ಚ್ 2019ರಲ್ಲಿ ರಾಷ್ಟ್ರೀಯ ಶಿಕ್ಷಣ ಹಕ್ಕು ವೇದಿಕೆ ಬಿಡುಗಡೆ ಮಾಡಿದ ವರದಿಯಲ್ಲಿ ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲುವ ಕೆಲವು ಮುಖ್ಯಾಂಶಗಳು ಪ್ರಸ್ತಾಪವಾಗಿವೆ. ಶಾಲೆಯಲ್ಲಿ ಇರಲೇಬೇಕಾದ 10 ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕಳೆದ ಸುಮಾರು ಒಂದು ದಶಕದಲ್ಲಿ ನಾವು ಸಾಧಿಸಿದ ಪ್ರಗತಿ ಕೇವಲ ಶೇ. 12.7. ಅಂದರೆ, 100 ಶಾಲೆಗಳ ಪೈಕಿ ಎಲ್ಲಾ 10 ಮೂಲಭೂತ ಸೌಕರ್ಯಗಳುಳ್ಳ ಶಾಲೆಗಳ ಸಂಖ್ಯೆ ಕೇವಲ 12. ದೇಶದಲ್ಲಿ ಒಟ್ಟು ಖಾಲಿ ಇರುವ ಶಿಕ್ಷಕರ ಸಂಖ್ಯೆ 10.1 ಲಕ್ಷ. ಕೆಲಸ ನಿರ್ವಹಿಸುತ್ತಿರುವ ಒಟ್ಟು ಶಿಕ್ಷಕರ ಸಂಖ್ಯೆಯಲ್ಲಿ ತಾತ್ಕಾಲಿಕ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರ ಶೇಕಡಾವಾರು ಪ್ರಮಾಣ 13.1ರಷ್ಟು. ಶಿಕ್ಷಣ ಹಕ್ಕು ಕಾಯಿದೆ ಜಾರಿಯಾಗಿ ದಶಕವೇ ಕಳೆದರೂ ಇನ್ನೂ ಸರಿಸುಮಾರು 60 ಲಕ್ಷ ಮಕ್ಕಳು ಶಾಲೆಯಿಂದ ಹೊರಗಿದ್ದಾರೆ ಎಂಬ ಅಂಶ ಲೋಕಸಭೆಯಲ್ಲಿ ಪ್ರಸ್ತಾಪವಾಗಿತ್ತು.

ಈ ಎಲ್ಲಾ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿದರೆ, ಗುಣಾತ್ಮಕ ಶಿಕ್ಷಣ ಒದಗಿಸುವ ದೃಷ್ಟಿಯಿಂದ ಸರಕಾರ ಮಕ್ಕಳ ಶಿಕ್ಷಣಕ್ಕಾಗಿ ಕನಿಷ್ಠ ಆಯವ್ಯಯದ ಶೇಕಡ 10ನ್ನು ಶಿಕ್ಷಣಕ್ಕೆ ಮೀಸಲಿಡಬೇಕೆಂಬುದು ಜನರ ಬೇಡಿಕೆಯಾಗಿತ್ತು. ಕರಡು ಶಿಕ್ಷಣ ನೀತಿ ಕೂಡ ಆಯವ್ಯಯದಲ್ಲಿ ಹೆಚ್ಚಳದ ಬಗ್ಗೆ ಪ್ರಸ್ತಾಪಿಸಿತ್ತು. ಈ ಹಿನ್ನೆಲೆಯಲ್ಲಿ ಇಂದಿನ ಕೇಂದ್ರ ಸರಕಾರದ ಆಯವ್ಯಯವನ್ನು ಪರಾಮರ್ಶಿಸಿದರೆ ಅದು ನಿಜಕ್ಕೂ ನಿರಾಶದಾಯಕವಾಗಿರುವುದು ಮಾತ್ರವಲ್ಲದೆ, ಶಿಕ್ಷಣದ ಖಾಸಗೀಕರಣ ಮತ್ತು ವ್ಯಾಪಾರೀಕರಣಕ್ಕೆ ಭೂಮಿಕೆಯನ್ನು ಒದಗಿಸುತ್ತದೆ. ಹಣಕಾಸು ಸಚಿವರು ತಮ್ಮ ಮುಖ್ಯಭಾಷಣವನ್ನು ಓದಲು ಪ್ರಾರಂಭಿಸಿ ಪ್ಯಾರಾ 60ಕ್ಕೆ ಬಂದಾಗ ಭಾರತದ ಉನ್ನತ ಶಿಕ್ಷಣವನ್ನು ಜಗತ್ತಿನಲ್ಲಿಯೇ ಅತ್ಯುತ್ತಮ ಶಿಕ್ಷಣ ವ್ಯವಸ್ಥೆಯನ್ನಾಗಿಸಲು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತರುವ ಬಗ್ಗೆ ಪ್ರಸ್ತಾಪಿಸಿದರು. ಈ ಹೊಸ ನೀತಿಯು ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣ ವ್ಯವಸ್ಥೆ ಎರಡಲ್ಲೂ ಮಹತ್ವದ ಬದಲಾವಣೆಯನ್ನು ತರಲಿದೆ ಎಂದು ಹೇಳಿದರು. ಆದರೆ, ಅಂತಹ ಬದಲಾವಣೆಗೆ ನ್ಯಾಯ ಸಮ್ಮತವಾಗಿ ಸಿಗಬೇಕಿದ್ದ ಹಣಕಾಸಿನ ವಿಷಯಕ್ಕೆ ಬಂದಾಗ ಶಿಕ್ಷಣ ಕ್ಷೇತ್ರದ ಯೋಜನೆಗಳಿಗೆ ಅವರು ಮೀಸಲಿಟ್ಟ ಹಣ ಅವರು ಆಯವ್ಯಯದ ಕಾಣ್ಕೆಯಲ್ಲಿ ಅವರೇ ಪ್ರಸ್ತಾಪಿಸಿದ ಅಂಶವನ್ನು ಹುಸಿಗೊಳಿಸಿದೆ. ಮಹತ್ವದ ಯೋಜನೆಗಳಿಗೆ ಒದಗಿಸಲಾಗಿರುವ ಅನುದಾನದ ಪಟ್ಟಿಯಲ್ಲಿ ಸರ್ವ ಶಿಕ್ಷಣ ಅಭಿಯಾನ, ರಾಷ್ಟ್ರೀಯ ಮಾಧ್ಯಮಿಕ ಅಭಿಯಾನ ಮತ್ತು ಶಿಕ್ಷಕರ ಶಿಕ್ಷಣವನ್ನು ವಿಲೀನಗೊಂಡಿರುವ ಕೇಂದ್ರ ಸರಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ರಾಷ್ಟ್ರೀಯ ಶಿಕ್ಷಣ ಮಿಷನ್‌ಗೆ ಸಿಕ್ಕಿರುವ ಒಟ್ಟು ಮೊತ್ತ 38,547 ಕೋಟಿ ರೂ.ಗಳು ಮಾತ್ರ. 2018-19ರ ಪರಿಷ್ಕೃತ ಆಯವ್ಯಯದಲ್ಲಿ ಮೀಸಲಿಟ್ಟಿದ್ದ ಹಣ 32,334 ಕೋಟಿ ರೂ. ಆಗಿತ್ತು. ಇದರಲ್ಲಿ ಹೆಚ್ಚಾದ ಹಣ ಕೇವಲ 6,213 ಕೋಟಿ. ಅದೇ ರೀತಿ ಮತ್ತೊಂದು ಮಹತ್ವದ ರಾಷ್ಟ್ರೀಯ ಯೋಜನೆಯಾದ ಮಧ್ಯಾಹ್ನದ ಬಿಸಿಯೂಟಕ್ಕೆ 11,000 ಕೋಟಿಯನ್ನು ಮೀಸಲಿಡಲಾಗಿದೆ. ಇದು ಕಳೆದ ಪರಿಷ್ಕೃತ ಆಯವ್ಯಯದಲ್ಲಿ ಮೀಸಲಿಟ್ಟಿದ್ದ (9949 ಕೋಟಿ) ಹಣಕ್ಕಿಂತ 1051 ಕೋಟಿ ರೂ. ಹೆಚ್ಚಳವಾಗಿದೆ. ಶಿಕ್ಷಣ ಸಬಲೀಕರಣಕ್ಕಾಗಿ ಮೀಸಲಿಟ್ಟ ಹಣ ಕಳೆದ ಪರಿಷ್ಕೃತ ಆಯವ್ಯಯದಲ್ಲಿ ಮೀಸಲಿಟ್ಟಿದ್ದ 2,451 ಕೋಟಿಯಿಂದ 2,363 ಕೋಟಿಗೆ ಇಳಿದಿದೆ. ಪ್ರಧಾನ ಮಂತ್ರಿಯವರ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನದ ಹಣ ಕಳೆದ ಪರಿಷ್ಕೃತ ಆಯವ್ಯಯದಲ್ಲಿ ಮೀಸಲಿಟ್ಟಿದ್ದ 438 ಕೋಟಿಯಿಂದ 518 ಕೋಟಿಗೆ ಏರಿದೆ. ಉನ್ನತ ಶಿಕ್ಷಣ ಹಣಕಾಸು ಸಂಸ್ಥೆಗೆ ನೀಡಬೇಕಾದ ಹಣ ಕಳೆದ ಪರಿಷ್ಕೃತ ಆಯವ್ಯಯದಲ್ಲಿ ಮೀಸಲಿಟ್ಟಿದ್ದ 2,750 ಕೋಟಿಯಿಂದ 2100 ಕೋಟಿಗೆ ಇಳಿದಿದೆ. ಒಟ್ಟಾರೆ, ಅಲ್ಲಿಷ್ಟು -ಇಲ್ಲಿಷ್ಟು ಏರಿಕೆ ಇಳಿಕೆ ಬಿಟ್ಟರೆ, ಹಣಕಾಸು ಸಚಿವರು ಮಂಡಿಸಿದ ಇಂದಿನ ಆಯವ್ಯಯ ದೇಶದ ಅಭಿವೃದ್ಧಿಗೆ ಭದ್ರಬುನಾದಿಯಾಗಬೇಕಿದ್ದ ಶಿಕ್ಷಣ ಕ್ಷೇತ್ರದ ಹೂಡಿಕೆಗೆ ಸಂಬಂಧಿಸಿದಂತೆ ನಮ್ಮ ಎಲ್ಲಾ ನಿರೀಕ್ಷೆಗಳನ್ನು ಹುಸಿಗೊಳಿಸಿದೆ. ಈ ಆಯವ್ಯಯ ಶಿಕ್ಷಣದ ಖಾಸಗೀಕರಣ ಮತ್ತು ವ್ಯಾಪಾರೀಕರಣಕ್ಕೆ ಉತ್ತಮ ಭೂಮಿಕೆಯನ್ನು ಒದಗಿಸುತ್ತದೆ.

-ನಿರಂಜನಾರಾಧ್ಯ, ಶಿಕ್ಷಣ ತಜ್ಞರು

ನಿಸ್ಸಾರ ಬಜೆಟ್

ಕೇಂದ್ರ ಬಜೆಟ್ಟಿನಲ್ಲಿ ಒಟ್ಟು ಆದಾಯ, ಒಟ್ಟು ಖರ್ಚು ಮತ್ತು ಉಳಿಕೆ ಅಥವಾ ಖೋತಾ ಎಷ್ಟು ಎಂಬುದನ್ನೆ ಹೇಳಿಲ್ಲ. ಇದು ಶ್ರೀಸಾಮಾನ್ಯನನ್ನು ಮೂರ್ಖನನ್ನಾಗಿಸುವ ಮೊದಲ ಯತ್ನ. ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಇನ್ನೂ ಕಡಿಮೆಯಾಗುತ್ತಿರುವಾಗ ಡೀಸೆಲ್ ಮೇಲೆ ಸೆಸ್ ಮತ್ತು ಪೆಟ್ರೋಲ್ ಬೆಲೆ ರೂ. 2 ರ ಹೆಚ್ಚಳ ಅಗತ್ಯವಿತ್ತೆ? ಬಿಜೆಪಿ ಸರಕಾರದ ಹಿಂದಿನ ಅವಧಿಯ ಭಾರಿ ವೈಫಲ್ಯಗಳಾದ ಉದ್ಯೋಗ ಸೃಷ್ಟಿ ಮತ್ತು ರೈತರ ಸಮಸ್ಯೆಗಳನ್ನು ಈ ಬಾರಿ ಸಮರ್ಥವಾಗಿ ನಿಭಾಯಿಸಲು ರೂಪುರೇಷೆಗಳಿರುತ್ತವೆಂದು ನಾನು ನಿರೀಕ್ಷಿಸಿದ್ದೆ. ಕೃಷಿ ನೀತಿಯ ಬಗ್ಗೆ ಮಾತೇ ಇಲ್ಲ. ರೈತರು ಉತ್ಪಾದನಾ ವೆಚ್ಚದಲ್ಲಿ ಲಾಭಾಂಶವನ್ನು ಪಡೆಯದಿದ್ದರೆ ಅವರ ಸ್ಥಿತಿ ಬದಲಾಗದು ಮತ್ತು ಆತ್ಮಹತ್ಯೆಗಳು ತಪ್ಪದು.

ಎಸ್ಸಿ ಎಸ್ಟಿ ಮತ್ತು ಓಬಿಸಿ/ಎಂಬಿಸಿ ಗಳಿಗೆ ವಿಶೇಷ ಕೊಡುಗೆಯ ಪ್ರಸ್ತಾಪವೇ ಇಲ್ಲ. ಅವರೆಲ್ಲರೂ ಪ್ರಗತಿ ಹೊಂದಿದ್ದಾರೆ ಎಂದು ಈ ಸರಕಾರ ಭಾವಿಸಿದಂತಿದೆ. ಹೂಡಿಕೆಗಳ ಹಿಂಪಡೆತ ಮತ್ತು ಸಾರ್ವಜನಿಕ ಸಂಸ್ಥೆಗಳ ಖಾಸಗೀಕರಣ ಈ ವರ್ಗಕ್ಕೆ ಮಾರಕವಾಗಿ ಪರಿಣಮಿಸುತ್ತದೆ ಎಂಬುದನ್ನು ತಿಳಿದೂ ಉದ್ದೇಶ ಪೂರ್ವಕವಾಗಿಯೆ ಈ ಸರಕಾರ ಮಾಡುತ್ತಿದೆ. ಅತಿ ಶ್ರೀಮಂತರಿಗೆ ಶೇ.3 ರಿಂದ 7 ಅಧಿಕ ತೆರಿಗೆ ವಿಧಿಸಿರುವುದು ಸ್ವಾಗತಾರ್ಹ ಕ್ರಮ.

-ಡಾ.ಮೂಡ್ನಾಕೂಡು ಚಿನ್ನಸ್ವಾಮಿ, ಹಿರಿಯ ಸಾಹಿತಿ ಮತ್ತು ನಿವೃತ್ತ ಹಣಕಾಸು ಸಾರಿಗೆ ಅಧಿಕಾರಿ

ಒಕ್ಕೂಟ ವ್ಯವಸ್ಥೆಗೆ ಧಕ್ಕೆ

ಗ್ರಾಮೀಣ ಪ್ರದೇಶದ ಗುಡಿ ಕೈಗಾರಿಕೆ, ರಸ್ತೆ, ಮೂಲಸೌಲಭ್ಯ ಅಭಿವೃದ್ಧಿ ದೃಷ್ಟಿಯಿಂದ ಕೇಂದ್ರ ಸರಕಾರ ಮಂಡಿಸಿದ ಆಯವ್ಯಯ ದೂರದೃಷ್ಟಿಯುಳ್ಳದ್ದು. ಆದರೆ, ಅನುಷ್ಠಾನದ ದೃಷ್ಟಿಯಿಂದ ಇದು ದೇಶದ ಒಕ್ಕೂಟ ವ್ಯವಸ್ಥೆಗೆ ದಕ್ಕೆಯನ್ನುಂಟು ಮಾಡುವ ಆತಂಕವಿದೆ.  ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಕೇಂದ್ರ ಸರಕಾರವೇ ಮಾಡಲು ಮುಂದಾದರೆ ಗ್ರಾಮ ಪಂಚಾಯತ್ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಜವಾಬ್ದಾರಿ ಏನು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಪೆಟ್ರೋಲ್ ಮೇಲೆ ಸೆಸ್ ಸೇರಿ ವಿವಿಧ ತೆರಿಗೆಗಳನ್ನು ವಿಧಿಸಲು ಹೊರಟಿರುವುದು ರಾಜ್ಯಗಳ ಸಂಪನ್ಮೂಲ ಕ್ರೋಡೀಕರಣಕ್ಕೆ ಭವಿಷ್ಯದಲ್ಲಿ ದೊಡ್ಡಪೆಟ್ಟು ಬೀಳುವ ಸಾಧ್ಯತೆಗಳಿವೆ.

ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ ಭಾರತ. ಇಲ್ಲಿ ಹಲವು ಸಂಸ್ಕೃತಿಗಳಿವೆ, ಅದೇ ರೀತಿ ವಿವಿಧ ರೀತಿಯ ಅಸಮಾನತೆಗಳಿವೆ. ವಿವಿಧ ರೀತಿಯ ಬೆಳವಣಿಗೆ ದರಗಳಿವೆ. ಹೀಗಿರುವಾಗ ಕೇಂದ್ರ ಮಂಡಿಸಿರುವ ಬಜೆಟ್‌ನಲ್ಲಿರುವ ಕೆಲ ಅಂಶಗಳು ಒಕ್ಕೂಟ ವ್ಯವಸ್ಥೆಯ ಉಲ್ಲಂಘಿಸುವ ರೀತಿಯಲ್ಲಿವೆ.

-ಪ್ರೊ.ಎಸ್.ಆರ್.ಕೇಶವ್, ಆರ್ಥಿಕ ತಜ್ಞ, ಬೆಂಗಳೂರು ವಿಶ್ವ ವಿದ್ಯಾಲಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News