ಮೈತ್ರಿ ಸರಕಾರಕ್ಕೆ ಸಂಕಷ್ಟ: 8 ಅಲ್ಲ, 11 ಅತೃಪ್ತ ಶಾಸಕರಿಂದ ರಾಜೀನಾಮೆ ಪತ್ರ ಸಲ್ಲಿಕೆ !

Update: 2019-07-06 12:19 GMT

ಬೆಂಗಳೂರು, ಜು.6: 11 ಮಂದಿ ಶಾಸಕರ ರಾಜೀನಾಮೆ ಪತ್ರ ಸ್ವೀಕರಿಸಿರುವುದಾಗಿ ನಮ್ಮ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ. ನಾಳೆ ರವಿವಾರ ಕಚೇರಿಗೆ ರಜೆಯಿದ್ದು, ಸೋಮವಾರ ವೈಯಕ್ತಿಕ ಕಾರಣಗಳಿಂದ ನಾನು ಹೊರಗೆ ಇರುತ್ತೇನೆ. ಹೀಗಾಗಿ ಮಂಗಳವಾರ ರಾಜೀನಾಮೆ ಪತ್ರಗಳ ಪರಿಶೀಲನೆ ನಡೆಸುವುದಾಗಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ತಿಳಿಸಿದರು.

ಶನಿವಾರ ವಿಧಾನಸೌಧದಲ್ಲಿನ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ನೀಡಿರುವ ಎಲ್ಲ ಶಾಸಕರಿಗೂ ಸ್ವೀಕೃತಿ ಪತ್ರ ನೀಡುವಂತೆ ಕಾರ್ಯದರ್ಶಿಗೆ ಸೂಚನೆ ನೀಡಿದ್ದೆನೆ. ರಾಜೀನಾಮೆ ನೀಡಲು ಬಂದ ಶಾಸಕರು ನನಗೆ ಮೊದಲೇ ಮಾಹಿತಿ ನೀಡಿ ಕಾಲಾವಕಾಶ ಕೇಳಿರಲಿಲ್ಲ ಎಂದರು.

ಸ್ಪೀಕರ್ ಭೇಟಿಗೆ ಒಂದು ವಿಧಾನ ಇರುತ್ತದೆ. ನಾನು ಸಿಗುತ್ತೇನೆ ಎಂದು ಶಾಸಕರು ತಮ್ಮ ಮನಸ್ಸಿನಲ್ಲಿ ಅಂದುಕೊಂಡು ಬಂದರೆ, ನನಗೆ ಹೇಗೆ ಗೊತ್ತಾಗಬೇಕು. ಶಾಸಕರು ಮೊದಲೇ ಅನುಮತಿ ಪಡೆದುಕೊಂಡಿದ್ದರೆ ನಾನು ಕಚೇರಿಯಲ್ಲಿದ್ದು ಅವರ ರಾಜೀನಾಮೆ ಪತ್ರವನ್ನು ಸ್ವೀಕರಿಸುತ್ತಿದ್ದೆ ಎಂದು ರಮೇಶ್ ಕುಮಾರ್ ತಿಳಿಸಿದರು.

ನಾನು ಕಚೇರಿಯಲ್ಲಿ ಇಲ್ಲದಿದ್ದರೂ ಅವರನ್ನು ವಾಪಸ್ ಕಳುಹಿಸಿಲ್ಲ. ಕಾನೂನು ಪ್ರಕಾರ ಎಲ್ಲ ಕ್ರಮಗಳನ್ನು ಜರುಗಿಸುತ್ತೇವೆ. ಶಾಸಕರು ರಾಜೀನಾಮೆ ನೀಡಿದ ಬಳಿಕ ರಾಜಭವನಕ್ಕಾದರೂ ಹೋಗಲಿ, ರಾಷ್ಟ್ರಭವನಕ್ಕಾದರೂ ಹೋಗಲಿ ಅದು ನನಗೆ ಬೇಡದಿರುವ ವಿಷಯ ಎಂದು ಅವರು ಹೇಳಿದರು. ನನ್ನ ಕರ್ತವ್ಯ ಸಂವಿಧಾನ ಬದ್ಧವಾಗಿ ಕಾನೂನು ರೀತಿಯಲ್ಲಿ ಏನು ಮಾಡಬೇಕು ಅದನ್ನೇ ಮಾಡುತ್ತೇನೆ. ಬೇರೆ ವಿಷಯ ನನಗೆ ಗೊತ್ತಿಲ್ಲ. ನಾನು ಯಾವುದೇ ಪಕ್ಷದಲ್ಲಿ ಇಲ್ಲ. ಹಾಗಾಗಿ ಶಾಸಕರ ರಾಜೀನಾಮೆ ಬಗ್ಗೆ ನನಗೆ ಗೊತ್ತಿಲ್ಲ ಎಂದು ರಮೇಶ್ ಕುಮಾರ್ ತಿಳಿಸಿದರು.

ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಸರಕಾರದ ಭವಿಷ್ಯ ನಿರ್ಧಾರವಾಗುವುದು ವಿಧಾನಸಭೆಯಲ್ಲಿ ನಿರ್ಧಾರವಾಗುತ್ತದೆ. ನಮ್ಮ ಕಚೇರಿಯಲ್ಲಿ ರಾಜೀನಾಮೆ ಕೊಟ್ಟರೆ ಅದನ್ನು ಅಂಗೀಕರಿಸಲು ಸಾಧ್ಯವಿಲ್ಲ. ಶಾಸಕರು ಸ್ವತಃ ತಾವೇ ಬಂದು ರಾಜೀನಾಮೆ ಸಲ್ಲಿಸಿದರೆ ಮಾತ್ರ ಸ್ವೀಕೃತವಾಗುತ್ತದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News