ಮೈತ್ರಿ ಸರಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ 14 ಮಂದಿ ರಾಜೀನಾಮೆ: ಎಚ್.ವಿಶ್ವನಾಥ್

Update: 2019-07-06 14:34 GMT

ಬೆಂಗಳೂರು, ಜು. 6: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ನಿರ್ಲಕ್ಷ್ಯ ಧೋರಣೆಯಿಂದ ಬೇಸತ್ತು ಉಭಯ ಪಕ್ಷಗಳ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ ಎಂದು ಜೆಡಿಎಸ್ ಮುಖಂಡರ ಎಚ್.ವಿಶ್ವನಾಥ್ ಇಂದಿಲ್ಲಿ ಸ್ಪಷ್ಟಣೆ ನೀಡಿದ್ದಾರೆ.

ಶನಿವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ರಾಜ್ಯಪಾಲರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಮೈತ್ರಿ ಸರಕಾರದ ವಿರುದ್ಧ ನಡೆದ ಕ್ಷಿಪ್ರ ಬೆಳವಣಿಗೆಗೆ ಸರಕಾರ ನಡೆಸುವವರೇ ಕಾರಣ ಎಂದು ವಾಗ್ದಾಳಿ ನಡೆಸಿದರು.

ಯಾವುದೇ ಹಂತದಲ್ಲಿಯೂ ನಾವು ಆಪರೇಷನ್ ಕಮಲಕ್ಕೆ ಒಳಗಾಗಿಲ್ಲ. ಶಾಸನ ಆನಂದ್‌ಸಿಂಗ್ ಸೇರಿದಂತೆ ಒಟ್ಟು 14 ಮಂದಿ ಶಾಸಕರು ರಾಜೀನಾಮೆ ನೀಡಿದ್ದೇವೆ. ಎಲ್ಲ ವಿಚಾರಗಳನ್ನು ರಾಜ್ಯಪಾಲರ ಗಮನಕ್ಕೂ ತಂದಿದ್ದೇವೆ. ಮೈತ್ರಿ ಸರಕಾರ ಜನತೆ ಆಶೋತ್ತರಗಳಿಗೆ ಸ್ಪಂದಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.

ಮೈತ್ರಿ ಸರಕಾರ ತನ್ನ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ, ಎಲ್ಲ ಶಾಸಕರ ಸಲಹೆ ತೆಗೆದುಕೊಂಡು ಮುನ್ನಡೆಯುವಲ್ಲಿ ಸೋತಿದೆ. ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರ ಸಂಪೂರ್ಣ ಸತ್ತು ಹೋಗಿದೆ. ಇದೂ ಸರಕಾರ ನಡೆಗೆ ಪ್ರಮುಖ ಉದಾಹರಣೆಯಾಗಿದೆ ಎಂದು ವಿಶ್ವನಾಥ್ ಟೀಕಿಸಿದರು.

ಎಲ್ಲ ಶಾಸಕರು ಸ್ವ ಇಚ್ಛೆಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆಂದು ರಾಜ್ಯದ ಜನತೆಗೆ ಮಾಧ್ಯಮಗಳ ಮೂಲಕ ತಿಳಿಸುತ್ತಿದ್ದೇವೆ. ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಅವರು ಶೀಘ್ರವೇ ಅಂಗೀಕಾರ ಮಾಡಬೇಕೆಂದು ಮನವಿ ಮಾಡುತ್ತೇವೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News