ಗಿರೀಶ್ ಕಾರ್ನಾಡ್ ಕನ್ನಡ ಸಂಸ್ಕೃತಿಯ ರಾಯಭಾರಿ: ಅರವಿಂದ ಮಾಲಗತ್ತಿ

Update: 2019-07-06 13:24 GMT

ಬೆಂಗಳೂರು, ಜು.6: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಟಕಕಾರ ಗಿರೀಶ್ ಕಾರ್ನಾಡ್ ತಮ್ಮ ನಾಟಕಗಳ ಮೂಲಕ ಕನ್ನಡ ಸಂಸ್ಕೃತಿ, ಪರಂಪರೆಯನ್ನು ವಿಶ್ವಕ್ಕೆ ತಲುಪಿಸಿದ ರಾಯಭಾರಿಯೆಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅರವಿಂದ ಮಾಲಗತ್ತಿ ಅಭಿಪ್ರಾಯಿಸಿದ್ದಾರೆ.

ಶನಿವಾರ ಕರ್ನಾಟಕ ಸಾಹಿತ್ಯ ಅಕಾಡೆಮಿ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಗಿರೀಶ್ ಕಾರ್ನಾಡರ ನೆನಪು ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಟಿಪ್ಪು ಕಂಡ ಕನಸು’ ನಾಟಕ ಬರೆದ ಕಾರ್ನಾಡರು, ಅದು ಕೇವಲ ಟಿಪ್ಪು ಸುಲ್ತಾನನ ಕನಸು ಮಾತ್ರ ಆಗಿರಲಿಲ್ಲ. ತಮ್ಮ ಕನಸನ್ನು ಸೇರಿಸಿ ಬರೆದಿದ್ದಾರೆ ಎಂದು ತಿಳಿಸಿದರು.

ಸಾಮಾಜಿಕ ಸಂವೇದನೆ ಇಲ್ಲದ ಸಾಹಿತಿಯ ಬರಹ ಅರ್ಥಹೀನವೆಂದು ಗಿರೀಶ್ ಕಾರ್ನಾಡ್ ಬಯಸಿದ್ದರು. ಅವರು ತಮ್ಮ ಜೀವನದುದ್ದಕ್ಕೂ ತಾವು ನಂಬಿದ್ದ ಸಾಮಾಜಿಕ ಮೌಲ್ಯಗಳನ್ನು ಬಿಟ್ಟುಕೊಟ್ಟವರಲ್ಲ. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಅವರು, ಕೃತಕ ಉಸಿರಾಟದ ಚೀಲವನ್ನು ತಮ್ಮ ಜೊತೆಗೆ ಇಟ್ಟುಕೊಂಡೇ ಭಾಗವಹಿಸಿದ್ದರು ಎಂದು ಅವರು ಸ್ಮರಿಸಿದರು.

ಶ್ರೀರಂಗರು ಹಲವು ನಾಟಕಗಳು ರಚಿಸುವ ಮೂಲಕ ಕನ್ನಡ ನಾಟಕ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. ಅವರಿಗಿಂತ ಒಂದು ಕೈ ಮಿಗಿಲಾಗಿ ಗಿರೀಶ್ ಕಾರ್ನಾಡರು ತಮ್ಮ ನಾಟಕಗಳ ಮೂಲಕ ನಾಡಿನ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಪ್ರಜ್ಞೆ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅವರು ಹೇಳಿದರು.

ಇವತ್ತು ನಾಟಕಕಾರ ಗಿರೀಶ್ ಕಾರ್ನಾಡರು ಭೌತಿಕವಾಗಿ ನಮ್ಮ ಜೊತೆ ಇಲ್ಲದಿರಬಹುದು. ಆದರೆ, ತಮ್ಮ ನಾಟಕಗಳು, ಚಿಂತನೆಗಳ ಮೂಲಕ ಹಾಗೂ ಸಿನೆಮಾ ನಿರ್ದೇಶಕರಾಗಿ, ನಟರಾಗಿ ನಮ್ಮ ನಡುವೆ ಸದಾ ಜೀವಂತವಾಗಿರುತ್ತಾರೆಂದು ಅವರು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಜಾನಕಿ ಮಾತನಾಡಿ, ಹಿರಿಯ ನಾಟಕಕಾರ ಗಿರೀಶ್ ಕಾರ್ನಾಡರ ನಾಟಕಗಳು, ಸಿನೆಮಾಗಳು ಜನತೆಯನ್ನು ಚಿಂತನೆಗೆ ಪ್ರಭಾವಿಸಿವೆ. ಅವರ ಚಿಂತನೆಯ ಮಾರ್ಗದರ್ಶನದಲ್ಲಿ ಹಲವು ನಾಟಕಕಾರರು, ಕಲಾವಿದರು ಮುನ್ನೆಡೆಯುತ್ತಿದ್ದಾರೆ ಎಂದು ತಿಳಿಸಿದರು.

ಈ ವೇಳೆ ಪ್ರೊ.ಕೃಷ್ಣಮೂರ್ತಿ ಚಂದರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News