ಗುಂಪುಥಳಿತದ ವಿರುದ್ಧ ಪ್ರತಿಭಟನೆ ವೇಳೆ ಲಾಠಿಚಾರ್ಜ್: ಮೀರತ್ ಉದ್ವಿಗ್ನ, 50 ಮಂದಿಯ ಬಂಧನ

Update: 2019-07-06 15:58 GMT

 ಹೊಸದಿಲ್ಲಿ,ಜು.6: ಜಾರ್ಖಂಡ್‌ನಲ್ಲಿ ಗುಂಪು ಥಳಿತದಿಂದ ತಬ್ರೇಝ್ ಅನ್ಸಾರಿ ಎಂಬ ಯುವಕ ಮೃತಪಟ್ಟ ಘಟನೆಯನ್ನು ವಿರೋಧಿಸಿ ಕಳೆದ ರವಿವಾರ ಉತ್ತರಪ್ರದೇಶದ ಮೀರತ್ ನಗರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಜನರ ಮೇಲೆ ಪೊಲೀಸರ ಲಾಠಿ ಜಾರ್ಜ್ ನಡೆಸಿದ ಬಳಿಕ ತಲೆದೋರಿರುವ ಉದ್ವಿಗ್ನ ಸ್ಥಿತಿ ಶನಿವಾರವೂ ಮುಂದುವರಿದಿದೆ.

 ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳು, ಸುಳ್ಳುಸುದ್ದಿಗಳು ಹರಡುವುದನ್ನು ತಡೆಯಲು ಇಂಟರ್‌ನೆಟ್ ಸೇವೆಗಳನ್ನು ಸೋಮವಾರದವರೆಗೆ ತಟಸ್ಥಗೊಳಿಸಲಾಗಿದೆ.

   ಜಾರ್ಖಂಡ್‌ನ ಸರಯ್‌ಖೆಲಾ ಕರ್ಸಾಂವ್ ಜಿಲ್ಲೆಯಲ್ಲಿ ಕಳ್ಳನೆಂಬ ಶಂಕೆಯಲ್ಲಿ ತಬ್ರೇಝ್ ಅನ್ಸಾರಿಯವನ್ನು ಸಂಘಪರಿವಾರದ ಬೆಂಬಲಿಗರೆನ್ನಲಾದ ಗುಂಪೊಂದು ಮಾರಣಾಂತಿಕವಾಗಿ ಥಳಿಸಿತ್ತು ಹಾಗೂ ಶ್ರೀರಾಮ್ ಎಂದು ಘೋಷಿಸುವಂತೆ ಆತನನ್ನು ಬಲವಂತಪಡಿಸಿತ್ತು. ಗಂಭೀರ ಗಾಯಗೊಂಡಿದ್ದ ಅನ್ಸಾರಿ ಜೂನ್ 22ರಂದು ಮೃತಪಟ್ಟಿದ್ದರು.

   ತಬ್ರೇಝ್ ಅನ್ಸಾರಿ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಘಟನೆಯನ್ನು ಖಂಡಿಸಿ ಕಳೆದ ರವಿವಾರ ಮೀರತ್‌ನಲ್ಲಿ ಪ್ರತಿಭಟನೆಯನ್ನು ಆಯೋಜಿಸಲಾಗಿತ್ತು. ಮೀರತ್‌ನ ಇಂದಿರಾಚೌಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಪ್ರತಿಭಟನಾ ಮೆರವಣಿಗೆ ಕೊನೆಗೊಂಡ ಬಳಿಕ ಕೆಲವರು ಹಿಂಸಾಚಾರಕ್ಕಿಳಿದಿದ್ದರು. ಉದ್ರಿಕ್ತ ಜನರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದರು. ಘಟನೆಗೆ ಸಂಬಂಧಿಸಿ ಪೊಲೀಸರು ಯುವಸೇವಾ ಸಮಿತಿ ಅಧ್ಯಕ್ಷ ಬಾಬರ್ ಅಲಿ ಸೇರಿದಂತೆ 50 ಮಂದಿಯನ್ನ ಬಂಧಿಸಿದ್ದರು. ಬಾಬರ್ ಅಲಿಯ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪೊಲೀಸರು ಆರೋಪ ದಾಖಲಿಸಿದ್ದಾರೆ. ಇತರ ಆರೋಪಿಗಳ ವಿರುದ್ಧ ಭಾರತೀಯ ದಂಡಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

‘‘ರವಿವಾರ ಆಯೋಜಿಸಲಾದ ಮೆರವಣಿಗೆಯು ಶಾಂತಿಪೂರ್ಣವಾಗಿಯೇ ನಡೆಯುತ್ತಿತ್ತು. ಆದರೆ ಪೊಲೀಸರು ಮಧ್ಯಪ್ರವೇಶಿಸಿದ ಬಳಿಕ ಪರಿಸ್ಥಿತಿ ಬಿಗಡಾಯಿಸಿತ್ತು ಇದೀಗ ಶುಕ್ರವಾರದಿಂದ ಇಂಟರ್‌ನೆಟ್ ಸ್ಥಗತಗೊಳಿಸಲಾಗಿದೆ ಹಾಗೂ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಜನರು ಭೀತಿಯಿಂದಾಗಿ ಮನೆಯ ಹೊರಗೆ ಕಾಲಿರಿಸುತ್ತಿಲ್ಲ’ ಎಂದು ಮೀರತ್‌ನ ಇಂದಿರಾಚೌಕ್‌ನ ವ್ಯಾಪಾರಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ. ಇಂದಿರಾಚೌಕ್ ಬಳಿ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಹಿರಿಯ ಅಧಿಕಾರಿಗಳು ಧ್ವಜ ಮೆರವಣಿಗೆ ನಡೆಸಿದರು. ಮೀರತ್ ಪೊಲೀಸ್, ಕ್ಷಿಪ್ರ ಕಾರ್ಯಾಚರಣೆ ಪಡೆ ಹಾಗೂ ಪ್ರಾಂತೀಯ ಸಶಸ್ತ್ರ ಪಡೆಗಳನ್ನು ಅಲ್ಲಿ ನಿಯೋಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News