ಎಲಿವೇಟೆಡ್ ಕಾರಿಡಾರ್ ಕಾಮಗಾರಿ ತಪಾಸಣೆ ನಡೆಸಿದ ಮೇಯರ್ ಗಂಗಾಂಬಿಕೆ

Update: 2019-07-06 16:43 GMT

ಬೆಂಗಳೂರು, ಜು.6: ಕೋರಮಂಗಲದ 100 ಅಡಿ ಮುಖ್ಯ ರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಈಜೀಪುರ ಸಿಗ್ನಲ್ನಿಂದ ಕೇಂದ್ರೀಯ ಸದನ್ ಜಂಕ್ಷನ್‌ವರೆಗೆ ಎಲಿವೇಟೆಡ್ ಕಾರಿಡಾರ್ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿಗೆ ವೇಗ ನೀಡಿ ತ್ವರಿತವಾಗಿ ಮುಗಿಸುವಂತೆ ಬಿಬಿಎಂಪಿ ಮೇಯರ್ ಗಂಗಾಂಬಿಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಶನಿವಾರ ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಎಲಿವೇಟೆಡ್ ಕಾರಿಡಾರ್ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, 2017 ಅಕ್ಟೋಬರ್‌ನಲ್ಲಿ ಎಲಿವೇಟೆಡ್ ಕಾಮಗಾರಿ ಪ್ರಾರಂಭಿಸಿದ್ದು, 2.5 ಕಿ.ಮೀ ಉದ್ದದ ಮೇಲ್ಸೇತುವೆಯನ್ನು 214 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಅದರಂತೆ 81 ಪಿಲ್ಲರ್‌ಗಳ ನಿರ್ಮಾಣ ಕಾಮಗಾರಿ ಮುಗಿಯುವ ಹಂತಕ್ಕೆ ತಲುಪಿದ್ದು, ಮೇಲ್ಸೇತುವೆಯಲ್ಲಿ 7 ಜಂಕ್ಷನ್‌ಗಳು, 4 ರ್ಯಾಂಪ್, ರಸ್ತೆಯ ಎರಡು ಬದಿಯಲ್ಲಿ ತಲಾ ಎರಡು ಪಥಗಳನ್ನು ನಿರ್ಮಿಸಲಾಗುತ್ತದೆ ಎಂದು ಹೇಳಿದರು.

ಅಲ್ಲದೆ, ಮೇಲ್ಸೇತುವೆ ಮಾರ್ಗದಲ್ಲಿ ಬರುವ 39 ಮರಗಳಲ್ಲಿ 25 ಮರಗಳನ್ನು ಸ್ಥಳಾಂತರಿಸಲಾಗಿದೆ. ಇನ್ನುಳಿದ ಮರಗಳಲ್ಲಿ ಕೊಂಬೆಗಳನ್ನು ಮಾತ್ರ ಕಟಾವು ಮಾಡಲಿದ್ದು, ಮರಗಳಿಗೆ ಯಾವುದೇ ಹಾನಿಯುಂಟಾಗುವುದಿಲ್ಲ. ಸರ್ಜಾಪುರ ರಸ್ತೆ ಮಾರ್ಗದಿಂದ ಈಜೀಪುರ ಕಡೆ ಹೋಗಲು ಹೆಚ್ಚುವರಿಯಾಗಿ ಒಂದು ರ್ಯಾಂಪ್ ಅಳವಡಿಸಲಾಗುತ್ತಿದ್ದು, ಅದಕ್ಕೆ ಸೆಂಟ್ ಜಾನ್ಸ್ ರೀಸರ್ಚ್ ಇನ್ಸ್‌ಟಿಟ್ಯೂಟ್ ಕಾಲೇಜಿನಿಂದ ಜಾಗ ಪಡೆದು, ಅವರಿಗೆ ಅಭಿವೃದ್ಧಿ ಹಸ್ತಾಂತರ ಹಕ್ಕು(ಟಿಡಿಆರ್) ಪ್ರಮಾಣಪತ್ರ ನೀಡಲಾಗುತ್ತಿದೆ ಎಂದರು.

ಯೋಜನಾ ವಿಭಾಗದ ಮುಖ್ಯ ಅಭಿಯಂತರ ಕೆ.ಟಿ.ನಾಗರಾಜ್ ಮಾತನಾಡಿ, ಸರಕಾರಿ ಒಡೆತನಕ್ಕೆ ಒಳಪಟ್ಟ 3 ಆಸ್ತಿ ಮತ್ತು ಖಾಸಗಿ ಮಾಲಕತ್ವಕ್ಕೆ ಒಳಪಟ್ಟ 46 ಕಟ್ಟಡಗಳು ಸೇರಿದಂತೆ 49 ಆಸ್ತಿಗಳನ್ನು (8,599.70 ಚದರ ಮೀಟರ್) ಭೂಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ಈ ಪೈಕಿ ಕೆಲವರು ಟಿಡಿಆರ್ ಕೇಳುತ್ತಿದ್ದು, ಇನ್ನು ಕೆಲವರು ನಗದು ರೂಪದಲ್ಲಿ ಪರಿಹಾರ ನೀಡುವಂತೆ ಬೇಡಿಕೆಯಿಟ್ಟಿದ್ದಾರೆ. ಶೀಘ್ರ ಸಮಸ್ಯೆ ಬಗೆಹರಿಸಿ ಜಾಗ ವಶಕ್ಕೆ ಪಡೆಯಲಾಗುವುದು ಎಂದು ಮೇಯರ್‌ಗೆ ಮಾಹಿತಿ ನೀಡಿದರು.

ಇನ್ನು, ಮೇಲ್ಸೆತುವೆ ಕೇಂದ್ರಿಯ ಸದನ ಜಂಕ್ಷನ್ ಮತ್ತು ಸೋನಿ ವರ್ಲ್ಡ್ ಜಂಕ್ಷನ್‌ಗಳ ಮೂಲಕ ಹಾದು ಹೋಗಲಿದೆ. ಕೇಂದ್ರಿಯ ಸದನ ಜಂಕ್ಷನ್ ಮೂಲಕ ತಾವರೆಕೆರೆ, ಎಂ.ಜಿ.ರಸ್ತೆ, ಹೊಸೂರು ರಸ್ತೆ, ಅಗರ, ಬಿಟಿಎಂ ಲೇಔಟ್, ಕೋರಮಂಗಲ, ಬಿಡಿಎ ಕಾಂಪ್ಲೆಕ್ಸ್, ಸರ್ಜಾಪುರ ಮುಖ್ಯರಸ್ತೆ ಹಾಗೂ ವಿವೇಕನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾದು ಹೋಗುತ್ತವೆ. ಸೋನಿ ವರ್ಲ್ಡ್ ಜಂಕ್ಷನ್‌ನ ಮೂಲಕ ಇಂದಿರಾನಗರ, ಕೇಂದ್ರಿಯ ಸದನ, ವಿವೇಕನಗರ, ಜಕ್ಕಸಂದ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾದು ಹೋಗುತ್ತವೆ. ಮೇಲ್ಸೇತುವೆ ನಿರ್ಮಾಣದಿಂದಾಗಿ ಈ ಭಾಗದಲ್ಲಿ ಶೇ.39.69ರಷ್ಟು ವಾಹನ ದಟ್ಟಣೆ ಕಡಿಮೆಯಾಗಲಿದ್ದು, ಕನಿಷ್ಠ 30 ನಿಮಿಷಗಳಷ್ಟು ಸಮಯ ಉಳಿತಾಯವಾಗಲಿದೆ ಎಂದು ಅವರು ತಿಳಿಸಿದರು.

ತಪಾಸಣೆ ವೇಳೆ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜೀದ್, ಪಾಲಿಕೆ ಸದಸ್ಯ ಚಂದ್ರಪ್ಪಹಾಗೂ ಪಾಲಿಕೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಮೇಲ್ಸೇತುವೆ ಕಾಮಗಾರಿ ತ್ವರಿತವಾಗಿ ಮುಗಿದರೆ ಕೋರಮಂಗಲ ಭಾಗದಲ್ಲಾಗುವ ಸಂಚಾರ ದಟ್ಟಣೆ ಬಹುತೇಕ ಕಡಿಮೆಯಾಗಲಿದೆ. ಜತೆಗೆ ವಾಹನ ಸವಾರರಿಗೆ ಸಂಚಾರದಟ್ಟಣೆಯಿಂದ ಮುಕ್ತಿ ಸಿಗಲಿದೆ. ಸೆಪ್ಟೆಂಬರ್ ವೇಳೆಗೆ ಕಾಮಗಾರಿ ಮುಗಿಸುವುದಾಗಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

-ಗಂಗಾಂಬಿಕೆ, ಬಿಬಿಎಂಪಿ ಮೇಯರ್

ಎಲಿವೇಟೆಡ್ ಕಾರಿಡಾರ್‌ನಲ್ಲಿ ಬರುವ 7ಜಂಕ್ಷನ್‌ಗಳು

* ಈಜೀಪುರ ಮುಖ್ಯರಸ್ತೆ- ಒಳವರ್ತುಲ ರಿಂಗ್ ರಸ್ತೆ ಜಂಕ್ಷನ್

* ಸೋನಿ ವರ್ಲ್ಡ್ ಜಂಕ್ಷನ್

* ಕೇಂದ್ರೀಯ ಸದನ ಜಂಕ್ಷನ್

* ಕೋರಮಂಗಲ 8ನೇ ಮುಖ್ಯ ರಸ್ತೆ ಜಂಕ್ಷನ್

* ಕೋರಮಂಗಲ 60 ಅಡಿ ರಸ್ತೆ ಜಂಕ್ಷನ್

* ಕೋರಮಂಗಲ ಐದನೇ ಬ್ಲಾಕ್ 1ಎ ಕಾಸ್ ರಸ್ತೆ ಜಂಕ್ಷನ್

* ಕೋರಮಂಗಲ ಬಿಡಿಎ ಜಂಕ್ಷನ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News