ಉದ್ಯಮಿಯ ಮೇಲೆ ಕುದಿಯುವ ಎಣ್ಣೆ ಸುರಿದ ಶೆಫ್ !

Update: 2019-07-07 04:13 GMT
ಸಾಂದರ್ಭಿಕ ಚಿತ್ರ

ಹೈದರಾಬಾದ್ : ಹೋಟೆಲ್‌ಗೆ ಬಂದಿದ್ದ ಉದ್ಯಮಿಯೊಬ್ಬರ ಮೇಲೆ ಶೆಫ್ ಕುದಿಯುವ ಎಣ್ಣೆ ಸುರಿದದ್ದರಿಂದ ಉದ್ಯಮಿ ತೀವ್ರ ಗಾಯಗೊಂಡಿರುವ ಘಟನೆ ಇಲ್ಲಿ ನಡೆದಿದೆ.

ಹೋಟೆಲ್‌ಗೆ ಉಪಾಹಾರಕ್ಕಾಗಿ ಆಗಮಿಸಿದ್ದ ಉದ್ಯಮಿ (29) ಒಂದು ಪ್ಲೇಟ್ ಪೂರಿಗೆ ಆರ್ಡರ್ ಮಾಡಿದ್ದರು. 10-15 ನಿಮಿಷ ಕಾಯುವಂತೆ ಶೆಫ್, ಗಿರಾಕಿಗೆ ಹೇಳಿದರು. ಅರ್ಧ ಗಂಟೆ ಕಾದರೂ ಪೂರಿ ಬರದಿದ್ದಾಗ ಗಿರಾಕಿ ಮತ್ತೆ ಕೇಳಿದರು. ಇದು ಶೆಫ್ ಹಾಗೂ ಗಿರಾಕಿ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ತಾಳ್ಮೆ ಕಳೆದುಕೊಂಡ ಉದ್ಯಮಿ, ಶೆಫ್‌ನನ್ನು ನಿಂದಿಸಿದ ಎನ್ನಲಾಗಿದೆ. ಇದರಿಂದ ಕೋಪಗೊಂಡ ಶೆಫ್, ಅಡುಗೆ ಕೋಣೆಗೆ ತೆರಳಿ ಕುದಿಯುವ ಎಣ್ಣೆ ತಂದು ಗಿರಾಕಿ ಮೇಲೆ ಸುರಿದ ಎಂದು ಪೊಲೀಸರು ವಿವರಿಸಿದ್ದಾರೆ.

ಮುಖ, ಕತ್ತು ಹಾಗೂ ಕೈಗಳಿಗೆ ತೀವ್ರ ಸುಟ್ಟಗಾಯಗಳಾಗಿರುವ ಉದ್ಯಮಿಯನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ. ಶೆಫ್ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 325 ಅನ್ವಯ ಪ್ರಕರಣ ದಾಖಲಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News