ಮತ್ತೊಂದು ಪಿಎನ್ ಬಿ ವಂಚನೆ ಪ್ರಕರಣ ಬಹಿರಂಗ: ಈ ಬಾರಿ 3800 ಕೋಟಿ ರೂ.!

Update: 2019-07-07 09:07 GMT

ಹೊಸದಿಲ್ಲಿ, ಜು.7: ದಿವಾಳಿತನ ಕ್ರಮ ಎದುರಿಸುತ್ತಿರುವ ಭೂಷಣ್ ಪವರ್ & ಸ್ಟೀಲ್‍ ನಿಂದ ಬ್ಯಾಂಕಿಗೆ 3,800 ಕೋಟಿ ರೂಪಾಯಿ ವಂಚನೆಯಾಗಿದೆ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‍ಬಿ) ಬಹಿರಂಗಪಡಿಸಿದೆ.

ಈ ಕುರಿತು ಭಾರತದ ರಿಸರ್ವ್ ಬ್ಯಾಂಕಿಗೆ ಮಾಹಿತಿ ರವಾನಿಸಲಾಗಿದ್ದು, ಇದರ ಬೆನ್ನಲ್ಲೇ ಸಿಬಿಐ ವಿಧಿವಿಜ್ಞಾನ ಪರಿಶೋಧನೆ ತನಿಖೆ ನಡೆಸಿದೆ. ಇದೀಗ ಕಂಪನಿ ಹಾಗೂ ನಿರ್ದೇಶಕರ ವಿರುದ್ಧ ನಿಧಿಯನ್ನು ಬೇರೆಡೆಗೆ ವರ್ಗಾಯಿಸಿರುವ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಷೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಿದ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ. ಭಾರತೀಯ ಸ್ಟೇಟ್ ಬ್ಯಾಂಕ್ ನೇತೃತ್ವದ ಬ್ಯಾಂಕ್‍ಗಳ ಕೂಟ ಈ ನಿರ್ಧಾರ ಕೈಗೊಂಡಿದೆ. ಈ ಮಧ್ಯೆ ಎಸ್ ಬಿಐ ಕೂಡಾ ಆರ್‍ ಬಿಐಗೆ ಮಾಹಿತಿ ನೀಡಿದೆ ಎಂದು ಮೂಲಗಳು ಹೇಳಿವೆ.

ಚಂಡೀಗಢದಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕಿನ ದೊಡ್ಡ ಕಾರ್ಪೊರೇಟ್ ಶಾಖೆ, ಈ ವಿವಾದಾತ್ಮಕ ಕಂಪನಿಗೆ 3,200 ಕೋಟಿ ರೂಪಾಯಿ ಸಾಲ ನೀಡಿದೆ. ಜತೆಗೆ 2018ರ ಆರಂಭದಲ್ಲಿ ದುಬೈ ಶಾಖೆ ಮೂಲಕ 345 ಕೋಟಿ ರೂಪಾಯಿ ಮತ್ತು ಹಾಂಕಾಂಗ್ ಶಾಖೆ ಮೂಲಕ 268 ಕೋಟಿ ರೂಪಾಯಿ ಸಾಲ ನೀಡಲಾಗಿದೆ ಎಂದು ವಿವರಿಸಲಾಗಿದೆ.

ವಜ್ರದ ವ್ಯಾಪಾರಿ ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ 2018ರಲ್ಲಿ ಮುಂಬೈನ ಬ್ರಾಡಿಹೌಸ್ ಶಾಖೆ ಮತ್ತು ಹಾಂಕಾಂಗ್ ಶಾಖೆಗಳಿಂದ 14 ಸಾವಿರ ಕೋಟಿ ರೂಪಾಯಿ ಸಾಲ ಪಡೆದು ವಂಚಿಸಿರುವುದು ಬೆಳಕಿಗೆ ಬಂದ ಬಳಿಕ ಪಿಎನ್‍ಬಿ ವಿವಾದದ ಕೇಂದ್ರಬಿಂದುವಾಗಿತ್ತು. ಕಳೆದ ಐದು ತ್ರೈಮಾಸಿಕಗಳಲ್ಲಿ ನಾಲ್ಕು ತ್ರೈಮಾಸಿಕದಲ್ಲಿ ಬ್ಯಾಂಕ್ ನಷ್ಟ ಅನುಭವಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News