'ಖರ್ಗೆಗೆ ಮುಖ್ಯಮಂತ್ರಿ ಸ್ಥಾನ'ದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ

Update: 2019-07-07 14:08 GMT

ಬೆಂಗಳೂರು, ಜು.7: ಮುನಿರತ್ನ, ರಾಮಲಿಂಗಾರೆಡ್ಡಿ ಸೇರಿದಂತೆ ಈಗ ರಾಜೀನಾಮೆ ನೀಡಿರುವ 9 ಮಂದಿ ಕಾಂಗ್ರೆಸ್ ಶಾಸಕರು ನಮ್ಮ ಜೊತೆಯಲ್ಲೇ ಇದ್ದವರು. ಶಾಸಕರ ರಾಜೀನಾಮೆ ಹಿಂದೆ ಬಿಜೆಪಿಯವರ ಕೈವಾಡವಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರಿಂದ ಪಕ್ಷಾಂತರ ಮಾಡಿಸುತ್ತಿರುವುದು ಬಿಜೆಪಿಯವರೇ, ಅಧಿಕಾರ, ಹಣ ಸೇರಿದಂತೆ ಇನ್ನಿತರ ಆಮಿಷಗಳನ್ನು ಒಡ್ಡುತ್ತಿದ್ದಾರೆ. ನಮ್ಮ ಕೆಲವು ಶಾಸಕರಿಗೆ ಸಚಿವ ಸ್ಥಾನ ಸಿಗಲಿಲ್ಲ ಎಂಬ ಅಸಮಾಧಾನವಿತ್ತು. ಅದನ್ನೆ ಬಳಸಿಕೊಳ್ಳುವ ಪ್ರಯತ್ನ ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ಕಿಡಿಗಾರಿದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿಯಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸುವ ಸಂಬಂಧ ಯಾವ ಚರ್ಚೆಗಳೂ ನಡೆದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಸರಕಾರ ರಚನೆ ಸಂದರ್ಭದಲ್ಲಿ ರಾಮಲಿಂಗಾರೆಡ್ಡಿಗೆ ಸಚಿವ ಸ್ಥಾನ ನೀಡಲು ಸಾಧ್ಯವಾಗಿರಲಿಲ್ಲ. ಎರಡನೇ ಅವಧಿಯಲ್ಲಿ ಹೈಕಮಾಂಡ್ ಅವರನ್ನು ಮಂತ್ರಿ ಮಾಡಲಿದೆ ಎಂದು ಹೇಳಿದ್ದೆ. ಅದಕ್ಕೆ ಅವರು ಒಪ್ಪಿಕೊಂಡಿದ್ದರು. ಆದರೆ, ನಂತರ ಏನಾಗಿದೆ ಅನ್ನೋದು ನನಗೆ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

ನಮ್ಮಲ್ಲಿ ಒಂದು ಸಚಿವ ಸ್ಥಾನ ಖಾಲಿಯಿತ್ತು. ಬಹಳ ಜನ ಆಕಾಂಕ್ಷಿಗಳಿದ್ದರು. ಆದುದರಿಂದ, ಪಕ್ಷೇತರ ಶಾಸಕರಿಗೆ ಅವಕಾಶ ಕಲ್ಪಿಸಲಾಯಿತು ಎಂದ ಅವರು, ರಾಜೀನಾಮೆ ನೀಡಿ ಮುಂಬೈನಲ್ಲಿರುವ ಕೆಲವು ಶಾಸಕರ ಜೊತೆ ದೂರವಾಣಿ ಮೂಲಕ ಸಂಪರ್ಕ ಮಾಡಿ ಮಾತುಕತೆ ನಡೆಸಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News