ಮುಂದಿನ ಬೆಳವಣಿಗೆ ಬಗ್ಗೆ ಕಾದು ನೋಡುತ್ತೇವೆ: ಬಿ.ಎಸ್.ಯಡಿಯೂರಪ್ಪ

Update: 2019-07-07 12:54 GMT

ಬೆಂಗಳೂರು, ಜು.7: ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಶಾಸಕರು ಸ್ಪೀಕರ್ ಕಚೇರಿಗೆ ರಾಜೀನಾಮೆ ಪತ್ರವನ್ನು ನೀಡಿ ಮುಂಬೈಗೆ ಹೋಗಿದ್ದಾರೆ. ಮುಂದೆ ಯಾವ ರೀತಿಯ ಬೆಳವಣಿಗೆಗಳು ನಡೆಯುತ್ತವೆ ಅನ್ನೋದನ್ನು ಕಾದು ನೋಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ರವಿವಾರ ನಗರದ ಡಾಲರ್ಸ್ ಕಾಲನಿಯಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರ ರಾಜೀನಾಮೆ ಅಂಗೀಕಾರವಾಗುವ ವಿಚಾರದ ಕುರಿತು ಮುಖ್ಯಮಂತ್ರಿ ಏನು ಹೇಳುತ್ತಾರೆ, ಸಿದ್ದರಾಮಯ್ಯ ಏನು ಹೇಳುತ್ತಾರೆ ಅನ್ನೋದಕ್ಕೆಲ್ಲ ಉತ್ತರ ಕೊಡಲು ಸಾಧ್ಯವಿಲ್ಲ ಎಂದರು.

ಈ ವಿಚಾರವು ಸ್ಪೀಕರ್ ಹಾಗೂ ರಾಜೀನಾಮೆ ಸಲ್ಲಿಸಿರುವ ಶಾಸಕರಿಗೆ ಸಂಬಂಧಪಟ್ಟಿದ್ದು. ಅತೃಪ್ತ ಶಾಸಕರ ಜೊತೆ ನಮ್ಮ ಪಕ್ಷದ ಯಾವ ಮುಖಂಡರು ಸಂಪರ್ಕದಲ್ಲಿಲ್ಲ. ಅಲ್ಲಿರುವ ಶಾಸಕರು ತಮ್ಮ ರಕ್ಷಣೆಗಾಗಿ ಸ್ವತಃ ತಾವೇ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದರು.

ಶಾಸಕರ ರಾಜೀನಾಮೆ ವಿಚಾರದಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ. ಈಗಿರುವ ರಾಜಕೀಯ ಬೆಳವಣಿಗೆಗಳನ್ನು ಕಾದು ನೋಡುತ್ತೇವೆ. ನಾನು ಯಾವುದೇ ಸಮಯ, ದಿನವನ್ನು ನಿಗದಿ ಮಾಡಿಲ್ಲ, ಇನ್ನು ಮುಂದೆಯೂ ಮಾಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಸ್ಪೀಕರ್ ಬಗ್ಗೆ ನನಗೆ ಅಪಾರ ಗೌರವವಿದೆ. ಕಾನೂನಿನ ಚೌಕಟ್ಟಿನಲ್ಲಿ ಅವರು ನಡೆದುಕೊಳ್ಳುತ್ತಾರೆ ಅನ್ನುವ ನಂಬಿಕೆಯಿದೆ. ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರಕ್ಕೆ ಅವರು ವಿಳಂಬ ಧೋರಣೆ ಅನುಸರಿಸುವುದಿಲ್ಲ ಯಡಿಯೂರಪ್ಪ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News