ಮುಸ್ಲಿಮರು ಕಾಂಗ್ರೆಸ್ ಗೆ ವೋಟ್ ಬ್ಯಾಂಕ್ ಆಗದೆ, ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳಬೇಕು: ರೋಷನ್ ಬೇಗ್

Update: 2019-07-07 13:12 GMT

ಬೆಂಗಳೂರು, ಜು.7: ರಾಜ್ಯದಲ್ಲಿ ಮೈತ್ರಿ ಸರಕಾರ ಉಳಿಯಬೇಕೆಂದು ನಾಯಕರ ಮನಸ್ಸಿನಲ್ಲೇ ಇಲ್ಲ. ಮೈತ್ರಿಯಲ್ಲಿ ಪರಸ್ಪರ ಒಬ್ಬರ ಮೇಲೆ ಒಬ್ಬರು ವಿಶ್ವಾಸವಿಡಬೇಕು. ಆದರೆ, ಇಲ್ಲಿ ಅಂತಹ ವಾತಾವರಣವೇ ಕಂಡು ಬರುತ್ತಿಲ್ಲ ಎಂದು ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಂಡಿರುವ ಶಾಸಕ ರೋಷನ್ ಬೇಗ್ ಆಕ್ರೋಶ ವ್ಯಕ್ತಪಡಿಸಿದರು.

ರವಿವಾರ ನಗರದ ಫ್ರೇಜರ್ ಟೌನ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಈಗ ನಾನು ಏನನ್ನೂ ಹೇಳಲು ಹೋಗುವುದಿಲ್ಲ. ಸದ್ಯಕ್ಕೆ ನಾನು ರಾಜ್ಯ ಹಜ್ ಸಮಿತಿಯ ಅಧ್ಯಕ್ಷನಾಗಿದ್ದೇನೆ. ಮುಂದಿನ ನಡೆ ಏನು ಎಂಬುದನ್ನು ಇನ್ನೆರಡು ದಿನಗಳಲ್ಲಿ ಪತ್ರಿಕಾಗೋಷ್ಠಿ ಕರೆದು ಬಹಿರಂಗವಾಗಿಯೇ ತಿಳಿಸುತ್ತೇನೆ ಎಂದರು.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ಗೆ ಈಗ ರೋಷನ್ ಬೇಗ್ ನೆನಪಾಗಿದೆಯೇ? ಈಗ ನಮ್ಮ ಪಕ್ಷದ ಕೆಲವು ಮುಖಂಡರಿಗೆ ನನ್ನ ನೆನಪು ಬಂತೆ? ರೋಷನ್ ಬೇಗ್‌ನನ್ನು ಪಕ್ಷದಿಂದ ಅಮಾನತ್ತು ಮಾಡಿದ್ರಲ್ಲ. ಕಾಂಗ್ರೆಸ್‌ನಲ್ಲಿ ನಿಜ ಹೇಳಿದರೆ ಅಪರಾಧವೇ? ಇಷ್ಟು ವರ್ಷ ಪಕ್ಷಕ್ಕೆ ದುಡಿದಿದ್ದಕ್ಕೆ ಇದೇನಾ ನೀವು ನಮಗೆ ಕೊಟ್ಟಿರುವ ಗೌರವ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ನನ್ನನ್ನು ಅಮಾನತು ಮಾಡಿದ್ದೀರಲ್ಲಾ, ಈಗ ಯಾಕೆ ನನ್ನನ್ನು ಸಂಪರ್ಕಿಸಲು ಪ್ರಯತ್ನಿಸುತ್ತೀರಾ? ನಿಮ್ಮನ್ನು ದೇವರು ಚೆನ್ನಾಗಿಟ್ಟಿರಲಿ. ಕೆಲವು ಹಿರಿಯ ಕಾಂಗ್ರೆಸ್ ನಾಯಕರು ನನ್ನನ್ನು ಸಂಪರ್ಕಿಸಲು ಪ್ರಯತ್ನ ಮಾಡಿದ್ದಾರೆ. ಅವರ ಹೆಸರು ಬಹಿರಂಗಪಡಿಸುವುದಿಲ್ಲ ಎಂದು ರೋಷನ್ ಬೇಗ್ ಹೇಳಿದರು.

ನಮ್ಮ ಪಕ್ಷದ ನಾಯಕತ್ವದ ಬಗ್ಗೆ ನಾನು ಲೋಕಸಭಾ ಚುನಾವಣೆಯ ಫಲಿತಾಂಶ ಬರುವ ಮುನ್ನವೇ ಹೇಳಿದ್ದೇನೆ. ಈ ದೇಶದಲ್ಲಿ, ಈ ರಾಜ್ಯದಲ್ಲಿ ಮುಸ್ಲಿಮರು ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳುವ ಗುಣವನ್ನು ಮೈಗೂಡಿಸಿಕೊಳ್ಳಬೇಕು. ಕಾಂಗ್ರೆಸ್ ಪಕ್ಷಕ್ಕೆ ವೋಟ್ ಬ್ಯಾಂಕ್ ಆಗಬಾರದು. ಪರಿಸ್ಥಿತಿಗೆ ಅನುಗುಣವಾಗಿ ಹೊಂದಿಕೊಳ್ಳಬೇಕು. ಯಾವ ರಾಜಕೀಯ ಪಕ್ಷವನ್ನೂ ಅಸ್ಪೃಶ್ಯರಂತೆ ಕಾಣಬಾರದು ಎಂದು ಅವರು ತಿಳಿಸಿದರು.

ಈ ಸರಕಾರ ಉಳಿಯುವುದು ಕಷ್ಟ ಎಂದು ಕಾಣುತ್ತದೆ. ನಾನು ಯಾರ ಮನೆ ಬಾಗಿಲಿಗೂ ಹೋಗುವುದಿಲ್ಲ. ನನ್ನ ಮನೆ ಬಾಗಿಲು ತೆರೆದಿರುತ್ತದೆ, ಯಾರು ಬೇಕಾದರೂ ಬರಬಹುದು ಎನ್ನುವ ಮೂಲಕ, ಕಾಂಗ್ರೆಸ್ ನಾಯಕರ ಭೇಟಿಗೆ ತಾನು ಹೋಗುವುದಿಲ್ಲ ಎಂದು ಅವರು ಪರೋಕ್ಷವಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News