ಇನ್ನು ಮುಂದೆ ಇಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದರೆ 23,000 ರೂ.ವರೆಗೆ ದಂಡ !

Update: 2019-07-07 14:15 GMT

ಮುಂಬೈ,ಜು.7: ಮುಂಬೈನ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವವರು ವರ್ಕ್‌ ಶಾಪ್‌ ನಲ್ಲಿ ಕಾರ್ ಸರ್ವಿಸ್ ಶುಲ್ಕಕ್ಕಿಂತ ಹೆಚ್ಚಿನ ದಂಡವನ್ನು ಪಾವತಿಸಲಿದ್ದಾರೆ.

ರವಿವಾರದಿಂದಲೇ ಜಾರಿಗೆ ಬಂದಿರುವ ಬೃಹನ್ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಮತ್ತು ಮುಂಬೈ ಸಂಚಾರ ಪೊಲೀಸ್ ವಿಭಾಗದ ಹೊಸ ನಿಯಮದಂತೆ ನಗರದಲ್ಲಿನ 26 ಸಾರ್ವಜನಿಕ ಪಾರ್ಕಿಂಗ್ ಸ್ಥಳಗಳಿಂದ 500 ಮೀ.ಅಂತರದಲ್ಲಿಯ ನೋ ಪಾರ್ಕಿಂಗ್ ಪ್ರದೇಶಗಳಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸುವವರು 5,000 ರೂ.ನಿಂದ 23,000 ರೂ.ವರೆಗೂ ದಂಡವನ್ನು ತೆರಬೇಕಾಗುತ್ತದೆ.

ಈ ಮೊತ್ತವು ದಂಡ ಮತ್ತು ವಾಹನವನ್ನು ಎತ್ತಿ ಸಾಗಿಸಲು ಟೋವಿಂಗ್ ಶುಲ್ಕವನ್ನು ಒಳಗೊಂಡಿದೆ. ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಲಾದ ದ್ವಿಚಕ್ರ ವಾಹನಗಳಿಗೆ 5,000 ರೂ.ನಿಂದ 8,300 ರೂ.ವರೆಗೆ ಮತ್ತು ಚತುಷ್ಚಕ್ರ ವಾಹನಗಳಿಗೆ 10,000 ರೂ.ನಿಂದ 23,250 ರೂ.ವರೆಗೆ ದಂಡವನ್ನು ವಿಧಿಸಲಾಗುವುದು. ಈ ಪೈಕಿ ಮಧ್ಯಮ ಗಾತ್ರದ ವಾಹನಗಳಿಗೆ 11,000 ರೂ.ನಿಂದ 17,600 ರೂ. ಮತ್ತು ಲಘು ಮೋಟಾರ್ ವಾಹನಗಳಿಗೆ 10,000 ರೂ.ನಿಂದ 15,100 ರೂ.ವರೆಗೆ ದಂಡವನ್ನು ನಿಗದಿಗೊಳಿಸಲಾಗಿದೆ. ಎಲ್ಲ ವಿಧಗಳ ತ್ರಿಚಕ್ರ ವಾಹನಗಳು ಕಾನೂನು ಉಲ್ಲಂಘಿಸಿದರೆ 8,000 ರೂ.ನಿಂದ 12,200 ರೂ.ವರೆಗೆ ದಂಡವನ್ನು ಕಟ್ಟಬೇಕಾಗುತ್ತದೆ.

ದಂಡದ ಹಣವನ್ನು ಕಟ್ಟಲು ವಿಳಂಬಿಸಿದರೆ ಕನಿಷ್ಠ ದಂಡದ ಮೊತ್ತಕ್ಕೆ ಪ್ರತಿದಿನವೂ ವಿಳಂಬ ಶುಲ್ಕಗಳು ಸೇರುತ್ತ ಹೋಗುತ್ತದೆ ಮತ್ತು ಇದು ಗರಿಷ್ಠ ಮೊತ್ತ ತಲುಪುವವರೆಗೂ ಮುಂದುವರಿಯುತ್ತದೆ.

ಮುಂಬೈಯಲ್ಲಿ ಅಂದಾಜು 30 ಲಕ್ಷ ವಾಹನಗಳಿವೆ. ಕಾನೂನು ಜಾರಿ ಅಧಿಕಾರಿಗಳ ಸುರಕ್ಷತೆಗಾಗಿ ಬಿಎಂಸಿಯು ಸಂಚಾರ ಪೊಲೀಸರಿಗೆ ನೆರವಾಗಲು ಮಾಜಿ ಯೋಧರು ಮತ್ತು ಖಾಸಗಿ ಸೆಕ್ಯುರಿಟಿ ಗಾರ್ಡ್‌ಗಳನ್ನೂ ನೇಮಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News