ಬಿಜೆಪಿ ಸೇರಿದ ಗಾಯಕಿ ಸ್ವಪ್ನಾ ಚೌಧರಿ

Update: 2019-07-07 15:59 GMT

 ಹೊಸದಿಲ್ಲಿ, ಜು. 7: ಗಾಯಕಿ ಹಾಗೂ ನೃತ್ಯಗಾತಿ ಸ್ವಪ್ನಾ ಚೌಧರಿ ರವಿವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಬಿಜೆಪಿ ನೂತನವಾಗಿ ಆರಂಭಿಸಿದ ಸದಸ್ಯತ್ವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹೊಸದಿಲ್ಲಿಯ ಜವಾಹರ್‌ಲಾಲ್ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಚೌಧರಿ ಪಕ್ಷಕ್ಕೆ ಸೇರ್ಪಡೆಯಾದರು.

ಈ ಸಂದರ್ಭ ಬಿಜೆಪಿಯ ದಿಲ್ಲಿ ಘಟಕದ ಅಧ್ಯಕ್ಷ ಮನೋಜ್ ತೀವಾರಿ ಉಪಸ್ಥಿತರಿದ್ದರು. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್‌ಲಾಲ್ ಕೂಡ ಪಾಲ್ಗೊಂಡಿದ್ದರು.

ಟ್ವೀಟ್‌ನಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಸ್ವಪ್ನಾ ಚೌಧರಿ ಇದ್ದ ಫೋಟೊ ಹಾಕುವ ಮೂಲಕ ಹಾಗೂ ಪಕ್ಷಕ್ಕೆ ಸ್ವಾಗತಿಸುವ ಮೂಲಕ ಉತ್ತರಪ್ರದೇಶದ ಕಾಂಗ್ರೆಸ್ ವರಿಷ್ಠ ರಾಜ್ ಬಬ್ಬರ್ ಮಾರ್ಚ್‌ನಲ್ಲಿ ಸುದ್ದಿಯಾಗಿದ್ದರು. ಈ ಆಹ್ವಾನವನ್ನು ಸ್ವಪ್ನಾ ಚೌಧರಿ ಸ್ಪಷ್ಟವಾಗಿ ನಿರಾಕರಿಸಿದ್ದರು.

 ನಿರಾಕರಿಸಿದ ಕೂಡಲೇ ಸ್ವಪ್ನಾ ಚೌಧರಿಗೆ ಬಿಜೆಪಿ ಬೆಂಬಲ ವ್ಯಕ್ತಪಡಿಸಿತ್ತು. ಸ್ಪಪ್ನಾ ಚೌಧರಿ ಅವರ ಹಳೆಯ ಫೋಟೊಗಳನ್ನು ಬಳಸಿಕೊಂಡು ಅವರು ಪಕ್ಷ ಸೇರಿದ್ದಾರೆ ಹಾಗೂ ಮಥುರಾದಲ್ಲಿ ಬಿಜೆಪಿ ಅಭ್ಯರ್ಥಿ ಹೇಮ ಮಾಲಿನಿ ವಿರುದ್ಧ ಸ್ಪರ್ಧಿಸಲಿದ್ದಾರೆ ಎಂದು ಪ್ರಚಾರ ಮಾಡಿರುವುದಕ್ಕೆ ಬಿಜೆಪಿ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News