ಮೈತ್ರಿ ಸರಕಾರಕ್ಕೆ ಯಾವುದೇ ಅಪಾಯವಿಲ್ಲ: ಸಚಿವ ಡಿ.ಕೆ.ಶಿವಕುಮಾರ್

Update: 2019-07-07 16:02 GMT

ಬೆಂಗಳೂರು, ಜು. 7: ಮಹತ್ವದ ಬೆಳವಣಿಗೆಯೊಂದರಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಅವರ ಸಹೋದರ ಸಂಸದ ಡಿ.ಕೆ.ಸುರೇಶ್, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ.

ರವಿವಾರ ಸಂಜೆ 7 ಗಂಟೆಯ ಸುಮಾರಿಗೆ ಇಲ್ಲಿನ ಸದಾಶಿವನಗರದಲ್ಲಿನ ಖರ್ಗೆ ನಿವಾಸಕ್ಕೆ ಭೇಟಿ ಮಾಡಿದ ಡಿ.ಕೆ.ಸಹೋದರರು ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿದ್ದಾರೆಂದು ಗೊತ್ತಾಗಿದೆ. ಈ ವೇಳೆ ಸಚಿವರಾದ ರಾಜಶೇಖರ್ ಪಾಟೀಲ್ ಹಾಗೂ ಪ್ರಿಯಾಂಕ್ ಖರ್ಗೆ ಹಾಜರಿದ್ದರು.

ಮೈತ್ರಿ ಸರಕಾರ ಉಳಿಸಿಕೊಳ್ಳುವ ದೃಷ್ಟಿಯಿಂದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂಬ ಒತ್ತಡದ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಸಹೋದರರು ಖರ್ಗೆ ಭೇಟಿ ಮಾಡಿದ್ದಾರೆಂದು ಹೇಳಲಾಗುತ್ತಿದ್ದು, ಖರ್ಗೆ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಿಎಂ ಸ್ಥಾನ ನಿರಾಕರಿಸಿದ್ದಾರೆ ಎಂದು ಗೊತ್ತಾಗಿದೆ.

ವಿಮಾನ ಬುಕ್ ಮಾಡಿದ್ದು ಯಾರು?: ‘ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸರಕಾರಕ್ಕೆ ಯಾವುದೇ ಅಪಾಯವಿಲ್ಲ. ನಮ್ಮ ಕೆಲ ಶಾಸಕ ಸ್ನೇಹಿತರು ಅಸಮಾಧಾನಗೊಂಡಿದ್ದು ಅವರೆಲ್ಲರನ್ನು ಸಂಪರ್ಕಿಸಿ ಮನವೋಲಿಕೆ ಪ್ರಯತ್ನ ನಡೆಸುತ್ತೇವೆ’ ಎಂದು ಇದೇ ವೇಳೆ ಸಚಿವ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.

‘ಶಾಸಕರ ರಾಜೀನಾಮೆಯಲ್ಲಿ ನಮ್ಮ ಕೈವಾಡವಿಲ್ಲ ಎಂದು ಬಿಜೆಪಿ ಹೇಳುತ್ತಿದೆ. ಆದರೆ, ಮುಂಬೈಗೆ ಹೋಗಲು ಶಾಸಕರಿಗೆ ವಿಶೇಷ ವಿಮಾನ ಬುಕ್ ಮಾಡಿಕೊಟ್ಟಿದ್ದು ಯಾರು? ಹೊಟೇಲ್‌ನಲ್ಲಿರುವ ಶಾಸಕರಿಗೆ ರಕ್ಷಣೆ ನೀಡಿರುವುದು ಏಕೆ? ಶಾಸಕರನ್ನು ಬಂಧನದಲ್ಲಿ ಇಟ್ಟುಕೊಳ್ಳಲಾಗಿದೆ’ ಎಂದು ಶಿವಕುಮಾರ್ ಆರೋಪಿಸಿದರು.

ರಾಜ್ಯದಲ್ಲಿನ ಮೈತ್ರಿ ಸರಕಾರ ಅಸ್ಥಿರಕ್ಕೆ ಬಿಜೆಪಿ ಮುಖಂಡರು ಸಂಚು ರೂಪಿಸಿದ್ದಾರೆ. ಇದೆಲ್ಲವನ್ನು ಸಹಿಸಲು ಸಾಧ್ಯವಿಲ್ಲ. ನಮ್ಮ ಎಲ್ಲ ಶಾಸಕರ ಮನವೋಲಿಕೆ ಮಾಡುತ್ತೇವೆ. ನಮ್ಮ ಪಕ್ಷದ ಹಿರಿಯ ಮುಖಂಡರು, ಹೀಗಾಗಿ ಕೆಲ ಮಹತ್ವದ ವಿಚಾರಗಳ ಬಗ್ಗೆ ಅವರೊಂದಿಗೆ ಚರ್ಚಿಸಿದ್ದೇವೆ ಎಂದು ಹೇಳಿದರು.

ಮಲ್ಲಿಕಾರ್ಜುನ ಖರ್ಗೆ ಸಿಎಂ ಮಾಡುವ ಪ್ರಶ್ನೆ ಇಲ್ಲಿ ಅಪ್ರಸ್ತುತ. ಈಗಾಗಲೇ ಮಾತುಕೊಟ್ಟಂತೆ ಕುಮಾರಸ್ವಾಮಿ ಐದು ವರ್ಷ ಮುಖ್ಯಮಂತ್ರಿ. ಇದರಲ್ಲಿ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ಬಿಜೆಪಿಯವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಲೇವಡಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News