ನವಾಝ್ ಶರೀಫ್ ಅಪರಾಧಿಯೆಂದು ಘೋಷಿಸಲು ನ್ಯಾಯಾಧೀಶರಿಗೆ ಬೆದರಿಕೆ: ಪುತ್ರಿಯ ಆರೋಪ

Update: 2019-07-07 16:31 GMT

ಲಾಹೋರ್, ಜು.7: ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಮಾಜಿ ಪ್ರಧಾನಿ ನವಾಝ್ ಶರೀಫ್ ತಪ್ಪಿತಸ್ತರೆಂದು ನಿರ್ಣಯಿಸಲು ನ್ಯಾಯಾಧೀಶರ ಮೇಲೆ ಒತ್ತಡ ಹೇರಿ ಬೆದರಿಸಲಾಗಿತ್ತು ಎಂದು ಶರೀಫ್ ಪುತ್ರಿ, ಪಾಕಿಸ್ತಾನ್ ಮುಸ್ಲಿಮ್ ಲೀಗ್-ನವಾಝ್ (ಪಿಎಂಎಲ್-ಎನ್) ನಾಯಕಿ ಮರಿಯಮ್ ನವಾಝ್ ಆರೋಪಿಸಿದ್ದಾರೆ.

 ಲಾಹೋರ್‌ನಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಸ್ಲಾಮಾಬಾದ್‌ನ ಅಕೌಂಟೆಬಿಲಿಟಿ ಕೋರ್ಟ್‌ನ ನ್ಯಾಯಾಧೀಶ ಅರ್ಶದ್ ಮಲಿಕ್ ತಾನು ಒತ್ತಡ ಮತ್ತು ಬೆದರಿಕೆಗೆ ಒಳಗಾಗಿ ತೀರ್ಪು ನೀಡಿರುವುದನ್ನು ಒಪ್ಪಿಕೊಂಡಿದ್ದಾರೆ ಎನ್ನಲಾದ ವೀಡಿಯೊ ತುಣುಕನ್ನು ಬಿಡುಗಡೆಗೊಳಿಸಿದರು.

  ಈ ವೀಡಿಯೊದಲ್ಲಿ ನ್ಯಾಯಾಧೀಶ ಮಲಿಕ್, ಪಿಎಂಎಲ್-ಎನ್ ಬೆಂಬಲಿಗ ನಾಸಿರ್ ಭಟ್ಟ್ ಜೊತೆ ನಡೆಸಿದ್ದಾರೆ ಎನ್ನಲಾದ ಸಂಭಾಷಣೆಯಿದೆ. ಕೆಲವು ಗುಪ್ತ ಶಕ್ತಿಗಳ ಒತ್ತಡ ಮತ್ತು ಬೆದರಿಕೆಗೆ ಒಳಗಾಗಿ ಮಾಜಿ ಪ್ರಧಾನಿಯ ವಿರುದ್ಧ ತೀರ್ಪು ನೀಡಿರುವುದಾಗಿ ಮಲಿಕ್ ಸಂಭಾಷಣೆ ವೇಳೆ ಒಪ್ಪಿಕೊಳ್ಳುವುದನ್ನು ವೀಡಿಯೊ ದೃಶ್ಯ ತೋರಿಸುತ್ತದೆ.

     ತನ್ನ ತಂದೆಯ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಯಲ್ಲಿ ಒಳ ಒಪ್ಪಂದವಾಗಿತ್ತು. ತನ್ನನ್ನು ಬೆದರಿಸಿ ಮತ್ತು ಒತ್ತಡ ಹೇರಿದ ಕೆಲವು ಶಕ್ತಿಗಳು ತಮಗೆ ಬೇಕಾದ ತೀರ್ಪು ಪಡೆದಿದ್ದಾರೆ ಎಂದು ನ್ಯಾಯಾಧೀಶರೇ ಒಪ್ಪಿಕೊಂಡಿದ್ದಾರೆ. ತನ್ನ ವಿರುದ್ಧದ ಪ್ರಕರಣದಲ್ಲಿ ನ್ಯಾಯ ಪಡೆಯಲು ತಂದೆ ವಿಫಲರಾದರೂ ಇದೊಂದು ದೈವಿಕ ಸಹಾಯವಾಗಿ ಒದಗಿ ಬಂದಿದೆ ಎಂದು ಮರಿಯಮ್ ಹೇಳಿದ್ದಾರೆ.

 ನವಾಝ್ ಶರೀಫ್ ವಿರುದ್ಧದ ಆರೋಪವನ್ನು ಪುಷ್ಟೀಕರಿಸುವ ಯಾವುದೇ ಪುರಾವೆ, ಅಥವಾ ಶರೀಫ್ ಭ್ರಷ್ಟಾಚಾರ ಎಸಗಿರುವ ಆರೋಪಕ್ಕೆ ಪುರಾವೆಗಳಿಲ್ಲ ಎಂದು ನ್ಯಾಯಾಧೀಶರು ನಿರ್ದಿಷ್ಟವಾಗಿ ಒಪ್ಪಿಕೊಂಡಿದ್ದಾರೆ. ಆದರೆ ನ್ಯಾಯಾಧೀಶ ಮಲಿಕ್ ಅವರ ಖಾಸಗಿ ವೀಡಿಯೊ ಬಳಸಿಕೊಂಡು ಕೆಲವರು ಅವರನ್ನು ಬ್ಲಾಕ್‌ಮೇಲ್ ಮಾಡಿದ್ದಾರೆ. ನ್ಯಾಯಾಧೀಶರು ತೀರ್ಪು ನೀಡಿಲ್ಲ, ಆದರೆ ಅವರು ತೀರ್ಪು ನೀಡುವಂತೆ ಮಾಡಲಾಗಿದೆ. ಶರೀಫ್‌ರನ್ನು ಜೈಲಿಗಟ್ಟಲೇ ಬೇಕು ಎಂಬ ಒತ್ತಡ ನ್ಯಾಯಾಧೀಶರ ಮೇಲಿತ್ತು. ತೀರ್ಪು ಪ್ರಕಟಿಸಿದ ಬಳಿಕ ಹಲವು ಬಾರಿ ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆ ಬಂದಿತ್ತು ಎಂದು ಮರಿಯಮ್ ಹೇಳಿದರು. ವೀಡಿಯೊ ಬಹಿರಂಗವಾದ ಬಳಿಕ ತಂದೆಯನ್ನು ಜೈಲಿನಲ್ಲಿಡಬಾರದು. ಶರೀಫ್ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ನಡೆಯುವಾಗ ಇದನ್ನು ಸಾಕ್ಷಿಯಾಗಿ ಒದಗಿಸಲಾಗುವುದು ಎಂದವರು ಹೇಳಿದ್ದಾರೆ.

ಭ್ರಷ್ಟಾಚಾರ ಪ್ರಕರಣದಲ್ಲಿ ಇಸ್ಲಮಾಬಾದ್‌ನ ನ್ಯಾಯಾಲಯ ಶರೀಫ್‌ಗೆ 7 ವರ್ಷದ ಜೈಲುಶಿಕ್ಷೆ ವಿಧಿಸಲಾಗಿದೆ.

ತಿರುಚಿದ ವೀಡಿಯೊ : ಸರಕಾರ

  ನವಾಝ್ ಶರೀಫ್ ಪುತ್ರಿ ಸುದ್ದಿಗೋಷ್ಟಿಯಲ್ಲಿ ಬಿಡುಗಡೆ ಮಾಡಿರುವ ವೀಡಿಯೊವನ್ನು ತಿರುಚಲಾಗಿದೆ ಎಂದು ಇಮ್ರಾನ್ ಖಾನ್ ನೇತೃತ್ವದ ಸರಕಾರ ಹೇಳಿದೆ. ನವಾಝ್ ಪುತ್ರಿಯ ಹೇಳಿಕೆ ನ್ಯಾಯಾಂಗದ ಮೇಲಿನ ಆಕ್ರಮಣವಾಗಿದ್ದು ವೀಡಿಯೊವನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಿದರೆ ಸತ್ಯಾಸತ್ಯತೆ ಹೊರಬರಲಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ.

ನಕಲಿ ವೀಡಿಯೊ: ನ್ಯಾ. ಮಲಿಕ್

 ಮರಿಯಮ್ ನವಾಝ್ ಬಿಡುಗಡೆ ಮಾಡಿರುವುದು ನಕಲಿ ವೀಡಿಯೊ. ತನ್ನ ಸಂಭಾಷಣೆಗೆ ಬೇರೆಯವರ ಹೇಳಿಕೆಯನ್ನು ಸೇರಿಸಿ ಎಡಿಟ್ ಮಾಡಲಾಗಿದೆ ಎಂದು ನ್ಯಾಯಾಧೀಶ ಅರ್ಶದ್ ಮಲಿಕ್ ಹೇಳಿದ್ದಾರೆ.

ಅಲ್ಲದೆ, ನವಾಝ್ ಶರೀಫ್ ವಿಚಾರಣೆ ಸಂದರ್ಭ ಅವರ ಕುಟುಂಬದವರು ಅವರಿಗೆ ಬೇಕಾದಂತೆ ತೀರ್ಪು ನೀಡಲು ತನಗೆ ಲಂಚದ ಆಮಿಷ ಒಡ್ಡಿದ್ದರು. ಇದಕ್ಕೆ ಒಪ್ಪದಿದ್ದಾಗ ಜೀವಬೆದರಿಕೆ ಒಡ್ಡಿದ್ದರು ಎಂದು ಆರೋಪಿಸಿದ್ದಾರೆ.

  ತನಗೆ ನಾಸಿರ್ ಭಟ್ಟ್ ಈ ಹಿಂದಿನಿಂದಲೂ ಪರಿಚಿತರಾಗಿದ್ದು ಅವರೊಂದಿಗೆ ಹಲವು ಬಾರಿ ಮಾತನಾಡಿದ್ದೇನೆ. ಶರೀಫ್ ಪ್ರಕರಣದಲ್ಲಿ ಸೂಕ್ತ ಪುರಾವೆಯಿದ್ದ ಹಿನ್ನೆಲೆಯಲ್ಲಿ ತೀರ್ಪು ಪ್ರಕಟಿಸಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News