ದಲಾಯಿ ಲಾಮಾ ಜನ್ಮದಿನ ಆಚರಣೆಗೆ ಅವಕಾಶ ನಿರಾಕರಿಸಿದ ನೇಪಾಳ

Update: 2019-07-07 17:21 GMT

 ಕಠ್ಮಂಡು, ಜು.7: ಧಾರ್ಮಿಕ ಮುಖಂಡ ದಲಾಯಿ ಲಾಮಾ ಅವರ ಜನ್ಮದಿನಾಚರಣೆಯನ್ನು ನೇಪಾಳದಲ್ಲಿ ಆಚರಿಸಲು ಅನುಮತಿ ನೀಡುವಂತೆ ನೇಪಾಳದಲ್ಲಿರುವ ಟಿಬೆಟಿಯನ್ ಸಮುದಾಯದವರು ಮಾಡಿಕೊಂಡಿದ್ದ ಮನವಿಯನ್ನು ಭದ್ರತಾ ಕಾರಣಗಳಿಗಾಗಿ ನಿರಾಕರಿಸಲಾಗಿದೆ ಎಂದು ಸರಕಾರದ ಅಧಿಕಾರಿಗಳು ರವಿವಾರ ಹೇಳಿದ್ದಾರೆ.

ಶನಿವಾರ 84ನೇ ವರ್ಷಕ್ಕೆ ಕಾಲಿರಿಸಿದ ದಲಾಯಿ ಲಾಮಾರ ಜನ್ಮದಿನವನ್ನು ಕಠ್ಮಂಡುವಿನಲ್ಲಿ ಸಂಭ್ರಮದಿಂದ ಆಚರಿಸಲು ನೇಪಾಳದಲ್ಲಿರುವ ಅವರ ಅನುಯಾಯಿಗಳು ಕಾತರರಾಗಿದ್ದರು. ಆದರೆ ನೇಪಾಳದ ಆಡಳಿತಾರೂಢ ಕಮ್ಯುನಿಸ್ಟ್ ಸರಕಾರ ಈ ಕೋರಿಕೆಯನ್ನು ತಳ್ಳಿಹಾಕಿದೆ. ಒಳನುಸುಳುವವರಿಂದ ಕಾನೂನು ಮತ್ತು ಶಿಸ್ತು ಪಾಲನೆಗೆ ಸಮಸ್ಯೆಯಾಗುವ ಸಂಭವವಿದೆ. ಅಲ್ಲದೆ ಒಳನುಸುಳುಕಾರರು ಕಠ್ಮಂಡುವಿನಲ್ಲಿ ಪ್ರತಿಭಟನಾ ಜಾಥಾ ನಡೆಸಿ ಆತ್ಮಾಹುತಿಗೆ ಮುಂದಾಗುವ ಸಾಧ್ಯತೆಯಿದೆ. ಆದ್ದರಿಂದ ಹುಟ್ಟು ಹಬ್ಬ ಆಚರಣೆಗೆ ಅನುಮತಿ ನಿರಾಕರಿಸಿರುವುದಾಗಿ ಕಠ್ಮಂಡುವಿನ ಸಹಾಯಕ ಜಿಲ್ಲಾಧಿಕಾರಿ ಕೃಷ್ಣಬಹಾದುರ್ ಕಟುವಾಲ್ ಹೇಳಿದ್ದಾರೆ.

ಬಳಿಕ ಜನ್ಮದಿನಾಚರಣೆ ಕಾರ್ಯಕ್ರಮ ರದ್ದುಗೊಳಿಸಿರುವುದಾಗಿ ಟಿಬೆಟ್‌ನ ವೆಬ್‌ಪೋರ್ಟಲ್ ವರದಿ ಮಾಡಿದೆ.

ನೇಪಾಳದಲ್ಲಿ ಸುಮಾರು 20,000 ಟಿಬೆಟಿಯನರಿದ್ದು, ಈ ರಾಷ್ಟ್ರದ ಮೇಲೆ ಚೀನಾದ ಪ್ರಭಾವ ಹೆಚ್ಚುತ್ತಿದೆ. ದಲಾಯಿ ಲಾಮಾ ಓರ್ವ ಅಪಾಯಕಾರಿ ಪ್ರತ್ಯೇಕತಾವಾದಿ ಎಂದು ಚೀನಾ ಪರಿಗಣಿಸುತ್ತಿದೆ. ಕಳೆದ ತಿಂಗಳು ಟಿಬೆಟ್ ಮೂಲದ ಅಮೆರಿಕನ್ ಪ್ರಜೆಯೊಬ್ಬನನ್ನು ಚೀನಾದ ಕೋರಿಕೆಯ ಮೇರೆಗೆ ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಇಳಿಯಲು ಬಿಡದೆ ವಾಪಾಸು ಕಳಿಸಿರುವ ಘಟನೆ ನಡೆದಿತ್ತು.

ಚೀನಾ ಆಡಳಿತದ ವಿರುದ್ಧದ ದಂಗೆ ವಿಫಲವಾದ ಹಿನ್ನೆಲೆಯಲ್ಲಿ 1959ರಲ್ಲಿ ದಲಾಯಿ ಲಾಮಾ ಭಾರತಕ್ಕೆ ಪಲಾಯನ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News