ಈ ಬಾರಿ ರಾಜ್ಯದ ಕೋಟಾ 1400 ಹೆಚ್ಚಳ: ಸಚಿವ ಝಮೀರ್ ಅಹ್ಮದ್

Update: 2019-07-07 17:59 GMT

ಬೆಂಗಳೂರು, ಜು.7: ರಾಜ್ಯದಿಂದ ಈ ಬಾರಿ ಪವಿತ್ರ ಹಜ್ ಯಾತ್ರೆ ಕೈಗೊಳ್ಳುವ ಯಾತ್ರಿಗಳ ಪ್ರಮಾಣವು ಕಳೆದ ಬಾರಿಗಿಂತ 1400 ಹೆಚ್ಚಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್ ತಿಳಿಸಿದರು.

ರವಿವಾರ ಹೆಗಡೆ ನಗರ ಸಮೀಪದ ತಿರುಮೇನಹಳ್ಳಿಯಲ್ಲಿರುವ ಹಜ್ ಭವನದಲ್ಲಿ ಆಯೋಜಿಸಿದ್ದ 2019ನೇ ಸಾಲಿನ ಹಜ್ ಯಾತ್ರಾರ್ಥಿಗಳ ಬಿಳ್ಕೊಡುಗೆ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.

ನಮ್ಮ ರಾಜ್ಯದಿಂದ ಕೇವಲ 5480 ಮಂದಿಗೆ ಮಾತ್ರ ಹಜ್ ಸಮಿತಿ ಮೂಲಕ ಹಜ್ ಯಾತ್ರೆಗೆ ಹೋಗಲು ಅವಕಾಶವಿತ್ತು. 2006ರಲ್ಲಿ ನಾನು ಮೊದಲ ಬಾರಿ ಸಚಿವನಾದಾಗ ಶಾಸಕ ಮಿತ್ರರಾದ ಎನ್.ಎ.ಹಾರಿಸ್ ಸೇರಿದಂತೆ ಇನ್ನಿತರರ ಜೊತೆ ದಿಲ್ಲಿಗೆ ಹೋಗಿ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿ, ನಮ್ಮ ಕೋಟಾವನ್ನು 1700 ಹೆಚ್ಚಿಸಿಕೊಂಡು‌ ಬಂದಿದ್ದೆ. ಅಲ್ಲಿಂದ ಈವರೆಗೆ ಕೋಟಾ ಹೆಚ್ಚಳವಾಗಿರಲಿಲ್ಲ ಎಂದು ಅವರು ಹೇಳಿದರು.

2018ರಲ್ಲಿ ನಾನು ಮತ್ತೊಮ್ಮೆ ಸಚಿವನಾದ ಬಳಿಕ ಕೇಂದ್ರ ಅಲ್ಪಸಂಖ್ಯಾತರ ‌ವ್ಯವಹಾರಗಳ‌ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿಯನ್ನು ಭೇಟಿ ಮಾಡಿ ಹಜ್ ಯಾತ್ರಿಗಳ ಕೋಟಾ ಹೆಚ್ಚಿಸುವಂತೆ ಮನವಿ ಮಾಡಿದೆ. ಅದರ ಪರಿಣಾಮವಾಗಿ ಈ ಬಾರಿ 1400 ಕೋಟಾ ಹೆಚ್ಚಾಗಿದೆ ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು.

ಹಲವಾರು ವರ್ಷಗಳಿಂದ ನಮ್ಮ ರಾಜ್ಯದಲ್ಲಿ ಹಜ್ ಯಾತ್ರಿಕರ ಶಿಬಿರವು ಯಶಸ್ವಿಯಾಗಲು, ನಾವು ಕಾರಣಕರ್ತರಲ್ಲ. ಇಲ್ಲಿ ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಹಗಲು ರಾತ್ರಿ ದುಡಿಯುವ ಸ್ವಯಂ ಸೇವಕರಿಂದ ಈ ಹಜ್ ಶಿಬಿರ ಯಶಸ್ವಿ ಯಾಗುತ್ತಿದೆ ಎಂದು ಅವರು ಮೆಚ್ಚಗೆ ವ್ಯಕ್ತಪಡಿಸಿದರು.

ರಾಜ್ಯದಿಂದ ಹಜ್ ಯಾತ್ರೆ ಕೈಗೊಳ್ಳುವ ಪ್ರತಿಯೊಬ್ಬರೂ ನಮ್ಮ ರಾಜ್ಯ ಹಾಗೂ ದೇಶಕ್ಕಾಗಿ ಪ್ರಾರ್ಥಿಸಿ. ಇಲ್ಲಿ ಕೋಮು ಸೌಹಾರ್ದತೆ, ಶಾಂತಿ, ಸಮೃದ್ಧಿ ನೆಲೆಸುವಂತೆ ಅಲ್ಲಾಹನಲ್ಲಿ ಬೇಡಿಕೊಳ್ಳಿ ಎಂದು ಝಮೀರ್ ಅಹ್ಮದ್ ಖಾನ್ ಮನವಿ ಮಾಡಿದರು.

ಸ್ವಾಗತ ಭಾಷಣ ಮಾಡಿದ ರಾಜ್ಯ ಹಜ್ ಸಮಿತಿ ಅಧ್ಯಕ್ಷ ಆರ್.ರೋಷನ್ ಬೇಗ್, ರಾಜ್ಯದ ಹಜ್ ಯಾತ್ರಿಗಳಿಗೆ ಈ ಹಿಂದೆ ಸಿಗುತ್ತಿದ್ದ ಸೌಲಭ್ಯಗಳು ಸಮರ್ಪಕವಾಗಿ ಸಿಗುತ್ತಿಲ್ಲ. ಪ್ರತಿ ಬಾರಿಯೂ ರಾತ್ರಿ ವೇಳೆಯಲ್ಲಿ ನಿರ್ದಿಷ್ಟ ಸಮಯದಲ್ಲಿ ವಿಮಾನಗಳ ಹಾರಾಟವಾಗುತ್ತಿತ್ತು. ಆದರೆ ಈ ಬಾರಿ ವಿಮಾನಗಳ ಹಾರಾಟದ ಕಾಲಾವಧಿಯು ಪದೇ ಪದೇ ಬದಲಾಗಿದೆ ಎಂದರು. ಕೆಲವು ವಿಮಾನಗಳನ್ನು ಮಾಹಿತಿಯೇ ನೀಡದೆ ರದ್ದುಗೊಳಿಸಲಾಗಿದೆ. ಈ ಬಾರಿ ಚಿಕ್ಕ ವಿಮಾನಗಳನ್ನು ಯಾತ್ರಿಗಳಿಗೆ ಒದಗಿಸಲಾಗಿದೆ. ಈ ಅವ್ಯವಸ್ಥೆ ಯನ್ನು ನಾನು ಖಂಡಿಸುತ್ತೇನೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ವಹಿಸಿದ್ದರು. ಅಮೀರೆ ಶರೀಅತ್ ಮೌಲಾನ‌ ಸಗೀರ್ ಅಹ್ಮದ್ ರಶಾದಿ, ಸಚಿವರಾದ ಯು.ಟಿ.ಖಾದರ್, ರಹೀಮ್ ಖಾನ್, ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್, ರಾಜ್ಯಸಭಾ ಸದಸ್ಯ ‌ಸಯ್ಯದ್ ನಾಸಿರ್ ಹುಸೇನ್, ಕೇಂದ್ರದ ಮಾಜಿ ಸಚಿವ ರಹ್ಮಾನ್ ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಈ ಬಾರಿ ಹಜ್ ಯಾತ್ರೆಗೆ ರಾಜ್ಯದಿಂದ 13,983 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ 12 ಮಂದಿ ಮಕ್ಕಳು. ಲಾಟರಿ ಮೂಲಕ 8740 ಅರ್ಜಿಗಳನ್ನು ಆಯ್ಕೆ ಮಾಡಲಾಯಿತು.
-ರೋಷನ್ ಬೇಗ್, ರಾಜ್ಯ ಹಜ್ ಸಮಿತಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News