ರಾಜಕೀಯ ಪಲ್ಲಟ ಆರೋಗ್ಯಕರ ಬೆಳವಣಿಗೆಯಲ್ಲ: ಡಾ.ದೊಡ್ಡರಂಗೇಗೌಡ

Update: 2019-07-07 18:31 GMT

ಬೆಂಗಳೂರು, ಜು.7: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಲ್ಲಟ ಆರೋಗ್ಯಕರ ಬೆಳವಣಿಗೆಯಲ್ಲ ಎಂದು ಪದ್ಮಶ್ರೀ ಪುರಸ್ಕೃತ ಕವಿ ಡಾ. ದೊಡ್ಡರಂಗೇಗೌಡ ಹೇಳಿದ್ದಾರೆ.

ರವಿವಾರ ನಗರದ ನಯನ ಸಭಾಂಗಣದಲ್ಲಿ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸಿದ್ದ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ರಾಜಕೀಯ ಬೆಳವಣಿಗೆ ನೋಡಿದಾಗ ಮನಸ್ಸಿಗೆ ಬೇಸರ ಉಂಟು ಮಾಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿದ ಜನರಿಗೆ ಗೌರವ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮ ಸುತ್ತಮುತ್ತಲಿನಲ್ಲಿಯೇ ಹೆಚ್ಚು ಪ್ರತಿಭಾವಂತರಿದ್ದು, ಎಲೆಮರಿ ಕಾಯಿಯಂತೆ ದುಡಿಯುತ್ತಿರುತ್ತಾರೆ. ಅಂತಹವರನ್ನು ಗುರುತಿಸಿ ಗೌರವಿಸಬೇಕಾದ ಕೆಲಸ ಮಾಡಬೇಕಾದ ಅತ್ಯಗತ್ಯವಿದೆ. ಇಂತಹ ಕೆಲಸಗಳಿಂದ ಸಾಂಸ್ಕೃತಿಕ ರಕ್ಷಣೆ ಸಾಧ್ಯವಾಗುತ್ತದೆ ಎಂದ ಅವರು, ಆತ್ಮಶ್ರೀ ಸಾಂಸ್ಕೃತಿಕ ಪ್ರತಿಷ್ಠಾನ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಸಂಸ್ಕೃತದಲ್ಲಿ ಅಪಾರವಾದ ಜ್ಞಾನ ಸಂಪತ್ತಿದ್ದು, ಜರ್ಮನಿಯರೂ ಈಗ ಸಂಸ್ಕೃತದ ಕಡೆಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಹೀಗಾಗಿ, ನಾವೆಲ್ಲರೂ ಸಂಸ್ಕೃತಿದಲ್ಲಿರುವ ತಿರುಳುಗಳನ್ನು ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಆದರೆ, ಇಂದಿನ ನಮ್ಮ ಯುವ ಸಮುದಾಯ ಮೊಬೈಲ್‌ನಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಈ ಬಗ್ಗೆ ಪೋಷಕರು ಎಚ್ಚರ ವಹಿಸಬೇಕು ಎಂದರು.

ಆಧುನೀಕರಣದ ಕಾಲಘಟ್ಟದಲ್ಲಿ ಬೆಳೆದಿರುವ ತಂತ್ರಜ್ಞಾನ, ಇಂಟರ್‌ನೆಟ್‌ನಲ್ಲಿ ಕೆಲವು ಒಳ್ಳೆಯದಿದ್ದರೆ, ಅಧಿಕ ಕೆಟ್ಟವುಗಳಿವೆ. ಆದುದರಿಂದಾಗಿ, ಯುವಜನತೆ ಕೇವಲ ಒಳ್ಳೆಯದನ್ನು ಆಯ್ಕೆ ಮಾಡಿಕೊಳ್ಳಬೇಕು. ಕೆಟ್ಟದವುಗಳ ಕಡೆಗೆ ಯೋಚನೆಯನ್ನೂ ಮಾಡಬಾರದು ಎಂದ ಅವರು, ಅತಿಯಾದ ಮೊಬೈಲ್ ಬಳಕೆಯಿಂದ ನಮ್ಮ ಸಂಸ್ಕೃತಿ ಕ್ಷೀಣಿಸುತ್ತದೆ ಎಂದು ಎಚ್ಚರಿಸಿದರು.

ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಮಾಯಣ್ಣ ಮಾತನಾಡಿ, ಕನ್ನಡ ಪುಸ್ತಕಗಳನ್ನು ಓದುವ ಸಂಸ್ಕೃತಿಯನ್ನು ಪೋಷಕರು ಮಕ್ಕಳಲ್ಲಿ ಬೆಳೆಸಬೇಕು. ಹಾಗಿದ್ದಾಗ ಈ ನಾಡಿನ ಕನ್ನಡ ಸಂಸ್ಕೃತಿ, ಪರಂಪರೆ ಜೀವಂತವಾಗಿರಿಸಿಕೊಳ್ಳಲು ಸಾಧ್ಯ. ಕನ್ನಡ ಸಾಹಿತ್ಯ ಲೋಕದಲ್ಲಿ ಅಪ್ರತಿಮ ಸಾಧಕರಿದ್ದಾರೆ. ವಿಶ್ವಮಟ್ಟದಲ್ಲಿ ಕನ್ನಡ ಪರಂಪರೆಯನ್ನು ಎತ್ತಿ ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಕನ್ನಡ ಪುಸ್ತಕಗಳನ್ನು ಕೊಂಡು ಮನೆಯಲ್ಲಿ ಗ್ರಂಥಾಲಯ ನಿರ್ಮಿಸಬೇಕು ಎಂದು ಸಲಹೆ ನೀಡಿದರು.

ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಕೊಳದ ಮಠದ ಶಾಂತವೀರ ಸ್ವಾಮೀಜಿ, ಸೋನು ಪಾಟೀಲ್, ಪ್ರತಿಷ್ಠಾನದ ಅಧ್ಯಕ್ಷ ಡಾ.ಗುಣವಂತ ಮಂಜು ಸೇರಿದಂತೆ ಹಲವರು ಉಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News