ಸಂಪಾದಕರಿಂದ ಪತ್ರಿಕೆ ಗುರುತಿಸುವ ಪ್ರವೃತ್ತಿ ನಶಿಸಿದೆ: ದಿನೇಶ್ ಅಮಿನ್ ಮಟ್ಟು

Update: 2019-07-07 18:46 GMT

ಬೆಂಗಳೂರು, ಜು.7: ಒಂದು ಪತ್ರಿಕೆಯನ್ನು ಸಂಪಾದಕರಿಂದ ಗುರುತಿಸುವ ಪ್ರವೃತ್ತಿ ನಶಿಸಿ ಹೋಗುತ್ತಿದೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅಭಿಪ್ರಾಯಪಟ್ಟರು.

ರವಿವಾರ ನಗರದ ವಾಸವಿ ವಿದ್ಯಾನಿಕೇತನ್ ಸಭಾಂಗಣದಲ್ಲಿ ಹಿರಿಯ ಪತ್ರಕರ್ತ ಶೈಲೇಶಚಂದ್ರ ಆಪ್ತ ಬಳಗ ಆಯೋಜಿಸಿದ್ದ ‘ಶೈಲೇಶಚಂದ್ರ ಗುಪ್ತ 75, ಪತ್ರಿಕೋದ್ಯಮದಲ್ಲಿ 50ವರ್ಷ’ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ನಶಿಸಿ ಹೋಗುತ್ತಿರುವ ಏಷ್ಯಾ ಹುಲಿ, ಬಂಗಾಳದ ಹುಲಿಯಂತೆ ವೃತ್ತಿಯಲ್ಲಿ ಕೆಲವು ನಶಿಸಿ ಹೋಗುತ್ತಿರುವ ವರ್ಗವಿದೆ ಅದು ಸಂಪಾದಕ ವರ್ಗ. ಒಂದು ಕಾಲದಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ಎಂದರೆ ಅರುಣ್ ಶೌರಿ, ಲಂಕೇಶ್ ಪತ್ರಿಕೆ ಅಂದರೆ ಪಿ.ಲಂಕೇಶ್, ಪ್ರಜಾವಾಣಿ ಅಂದರೆ ಟಿಆರ್‌ಎಸ್ ಈ ರೀತಿ ಒಂದು ಪತ್ರಿಕೆಯನ್ನು ಸಂಪಾದಕರ ಮೂಲಕ ಗುರುತಿಸಲಾಗುತ್ತಿತ್ತು. ಇತ್ತೀಚೆಗೆ ಈ ಪರಂಪರೆ ನಶಿಸಿ ಹೋಗುತ್ತಿದ್ದು, ಹೀಗೆ ನಶಿಸುತ್ತಿರುವ ಕೊನೆಯ ಕನ್ನಡದ ತಳಿ ಶೈಲೇಶಚಂದ್ರ ಗುಪ್ತ ಎಂದು ಬಣ್ಣಿಸಿದರು.

ಸಮಾಜದಲ್ಲಿ ಯಾರು ಸಕ್ರೀಯವಾಗಿ ಇರುತ್ತಾರೋ ಅಂತವರಿಗೆ ನಿವೃತ್ತಿಯಾದ ಮೇಲೆ ಸಮಾಜ ಸ್ವಲ್ಪ ನಿರ್ಲಕ್ಷ್ಯ ಮನೋಭಾವವನ್ನು ತೋರುತ್ತದೆ. ಇದನ್ನು ಕೇವಲ ಪತ್ರಕರ್ತರು ಮಾತ್ರವಲ್ಲ. ರಾಜಕೀಯ ಮುಖಂಡರು, ನಟರು ಹಾಗೂ ಕ್ರೀಡಾ ಪಟುಗಳು ಅನುಭವಿಸುತ್ತಾರೆ. ಎಲ್ಲಿಯವರೆಗೂ ಇವರೆಲ್ಲ ಸಕ್ರೀಯವಾಗಿರುತ್ತಾರೋ ಅಲ್ಲಿಯವರೆಗೂ ಗುರುತಿಸಿಕೊಳ್ಳುತ್ತಾರೆ. ನಂತರ ನೇಪಥ್ಯಕ್ಕೆ ಸರಿಯುತ್ತಾರೆೆ ಎಂದು ಹೇಳಿದರು.

ಪತ್ರಕರ್ತರನ್ನು ಸಮಾಜದ ಕಾವಲು ನಾಯಿಗಳು ಎಂದು ಕರೆಯುತ್ತಾರೆ. ಕಾವಲುಗಾರರ ಹಲ್ಲುಗಳು ಸಕ್ರೀಯರಾಗಿದಾಗ ಬಲಿಷ್ಠವಾಗಿ ಇರುತ್ತವೆ. ನಿವೃತ್ತಿಯಾದ ಮೇಲೆ ಹಲ್ಲುಗಳು ಸವೆದು ಹೋಗಿರುತ್ತವೆ ಎಂದರು.

ಇನ್ನು, ಬಹಳಷ್ಟು ಸಂಪಾದಕರನ್ನು ನೀವು ನೋಡುತ್ತಿರಬಹುದು. ಅವರು ಯಾವ ಕಾರಣಕ್ಕೆ ಹೆಸರು ಮಾಡಿದ್ದಾರೆ ಎಂಬುದು ನಿಮ್ಮಗೆಲ್ಲ ಗೊತ್ತಿದೆ. ಅದನ್ನು ನಾನು ವಿವರಿಸಲ್ಲ. ಏಕೆಂದರೆ ಬಹಳ ಮಂದಿಗೆ ಅರ್ನಬ್ ಗೋಸ್ವಾಮಿ ಇಷ್ಟವಾಗುತ್ತಾರೆ. ಸಮಸ್ಯೆ ಇರುವುದು ಅವರ ಬಳಿ ಇರುವ ಸೌಂಡ್‌ನಲ್ಲಿ ಎಂದು ಬೇಸರ ವ್ಯಕ್ತಪಡಿಸಿದರು.

ಶೈಲೇಶ ಚಂದ್ರರವರು ನಿವೃತ್ತಿ ಆದ ಮೇಲೂ ಪ್ರಚಲಿತರಿದ್ದರೆ ಎಂದರೆ ಅದಕ್ಕೆ ಅವರು ಗಳಿಸಿಕೊಂಡ ಗೌರವ ಕಾರಣವೆಂದರೆ ತಪ್ಪಾಗಲಾರದು. ಈ ದೃಷ್ಟಿಯಲ್ಲಿ ಅವರು ಬಹಳ ಶ್ರೀಮಂತ ವ್ಯಕ್ತಿ. ಅವರ ಶ್ರೀಮಂತ ಮನಸ್ಸನ್ನು ನಿಮ್ಮಂತಹ ಶ್ರೀಮಂತ ಮನಸ್ಸಿನವರು ಕೂಡಿಕೊಂಡು ಅಭಿನಂದನೆ ಮಾಡಿರುವುದು ಸಂತಸದ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.

ಅಲ್ಲದೆ, ಅವರು ವಿಜ್ಞಾನ- ತಂತ್ರಜ್ಞಾನ, ಸಾಹಿತ್ಯ- ಸಂಸ್ಕೃತಿ, ಆಧ್ಯಾತ್ಮ- ಕಾಮಶಾಸ್ತ್ರ, ಪಂಚಾಂಗ ಸೇರಿದಂತೆ ವಿವಿಧ ವಿಷಯಗಳಲ್ಲಿ ಪಾಂಡಿತ್ಯ ಸಂಪಾದಿಸಿದ್ದರು. ಈಗಿನ ಪತ್ರಕರ್ತರಲ್ಲಿ ಇಂತಹ ಲಕ್ಷಣ, ಅರ್ಹತೆಗಳನ್ನು ಕಾಣುವುದು ಅಪರೂಪ. ಅವರಲ್ಲಿ ಅದಮ್ಯವಾದ ಜೀವನ ಉತ್ಸುಹವಿದೆ. ಸಾಮಾನ್ಯವಾಗಿ ಕೆಲವು ಪತ್ರಕರ್ತರು ಒಂದು ಹಂತಕ್ಕೆ ಬಂದಾಗ ಸಿನಿಕರಾಗಿ, ದೇಶ, ಸಮಾಜವನ್ನು ಬಯ್ಯುತ್ತಾ ಕೊನೆಗೆ ತಾನೇ ತೆಗಳುಕೊಳ್ಳುತ್ತಾನೆ. ಈ ರೀತಿಯ ಸಿನಿಕತೆ ಬಂದು ಬಿಡುತ್ತದೆ. ಆದರೆ ಶೈಲೇಶ ಚಂದ್ರರ ಬಳಿ ಹತ್ತು ನಿಮಿಷ ಮಾತನಾಡಿದರೆ ನಿಮಗೆ ಜೀವನೋತ್ಸಾಹ ಬರುತ್ತದೆ ಎಂದು ನುಡಿದರು.

ಒಂದು ಸಮಾಜ ಮೌಲ್ಯವನ್ನು ಕಳೆದುಕೊಂಡಾಗ ಅದರ ಆತ್ಮ ಸತ್ತು ಹೋಗಿರುತ್ತದೆ. ಶೈಲೇಶ ಚಂದ್ರರನ್ನು ಸನ್ಮಾನ ಮಾಡಿದ್ದರಿಂದ ಸಮಾಜ ಇನ್ನೂ ಜೀವಂತವಾಗಿ ಇದೆ ಅನ್ನಿಸುತ್ತದೆ. ಒಬ್ಬ ವ್ಯಕ್ತಿಯ ಪ್ರತಿಭೆಯನ್ನು ಗುರುತಿಸಿ ಅಭಿನಂದಿಸುವುದು ಸಮಾಜದಲ್ಲಿ ಕಡಿಮೆಯಾಗುತ್ತಿದೆ. ಯಾರು ಪ್ರಮಾಣಿಕವಾಗಿ ಇರುತ್ತಾರೋ ಅವರನ್ನು ಗೌರವಿಸುವ ಪರಂಪರೆ ಉಳಿಯಬೇಕು ಎಂದರು.

‘ಯಾರು ನಿಜವಾದ ಪತ್ರಕರ್ತ, ಯಾರು ನಿಜವಾದ ಸಂಪಾದಕ ಎಂದು ಗುರುತಿಸುವುದೆ ಕಷ್ಟ. ಇದು ದೊಡ್ಡ ಸಮಸ್ಯೆಯಾಗಿದೆ. ಇಂದು ಒಬ್ಬ ಪತ್ರಕರ್ತ ಆಗಬೇಕಾದರೆ ಅವನಿಗೆ ಒಂದು ವಿಶೇಷ ಜ್ಞಾನವಿರಬೇಕು. ವಿಶ್ಲೇಷಣಾ ಸಾಮರ್ಥ್ಯ ಇರಬೇಕೆಂಬುದು ಅರ್ಹತೆಗಳು. ಇತ್ತೀಚಿನ ಮಾಧ್ಯಮ ರಂಗದಲ್ಲಿ ಈ ಅರ್ಹತೆಗಳೇ ಅನರ್ಹತೆಯ ಮಾನದಂಡಗಳಾಗಿವೆ’

-ದಿನೇಶ್ ಅಮಿನ್ ಮಟ್ಟು, ಹಿರಿಯ ಪತ್ರಕರ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News