ಪತ್ನಿಯ ಅಪಹರಣದ ಬಗ್ಗೆ ದೂರು ನೀಡಲು ಹೋದ ದಲಿತ ವ್ಯಕ್ತಿಗೆ ಪೊಲೀಸರಿಂದ ಚಿತ್ರಹಿಂಸೆ: ಆರೋಪ

Update: 2019-07-08 09:24 GMT

ಲಕ್ನೋ, ಜು.8: ತನ್ನ ಪತ್ನಿಯನ್ನು ಅಪಹರಿಸಲಾಗಿದೆ ಎಂದು ದೂರು ನೀಡಲು ಠಾಣೆಗೆ ಹೋದ ತನಗೆ ಪೊಲೀಸರು ಚಿತ್ರಹಿಂಸೆ ನೀಡಿದ್ದಾರೆಂದು 41 ವರ್ಷದ ದಲಿತ ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ.

ಮೈನ್ಪುರಿ ಪ್ರದೇಶದ ಆಲಿಘರ್-ಕಾನ್ಪುರ್ ಹೆದ್ದಾರಿಯಲ್ಲಿ ತಾನು ಮತ್ತು ತನ್ನ ಪತ್ನಿ ದ್ವಿಚಕ್ರ ವಾಹನದಲ್ಲಿ  ಸಾಗುತ್ತಿದ್ದಾಗ ಮೂರು ಮಂದಿ ಆಗಂತುಕರು ಆಕೆಯನ್ನು ಶುಕ್ರವಾರ ರಾತ್ರಿ ಅಪಹರಿಸಿದ್ದಾರೆಂದು ಅವರು ಆರೋಪಿಸಿದ್ದರು. ಇದಾದ ಕೆಲವು ಗಂಟೆಗಳ ನಂತರ ಠಾಣೆಗೆ ಹಾಜರಾದ ಮಹಿಳೆ  ತನ್ನ ಮೇಲೆ ಅಪಹರಣಕಾರರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆಂದು ಆರೋಪಿಸಿದ್ದಾರೆ.

ದಲಿತ ವ್ಯಕ್ತಿ ನೀಡಿದ ದೂರಿನ ಆಧಾರದಲ್ಲಿ ಕ್ರಮ ಕೈಗೊಳ್ಳುವ ಬದಲು ಆತನಿಗೆ ಹಿಂಸೆ ನೀಡಿದ ಆರೋಪದ ಮೇಲೆ ಬಿಛ್ವಾನ್ ಠಾಣೆಯ ಠಾಣಾಧಿಕಾರಿ ಹಾಗೂ ಇಬ್ಬರು ಕಾನ್‍ಸ್ಟೇಬಲ್ ಗಳನ್ನು ವಜಾಗೊಳಿಸಲಾಗಿದೆ.

ಬುಲಂದ್ ಶಹರ್ ಮೂಲದ ದಂಪತಿ ಮೋಟಾರ್ ಸೈಕಲ್ ನಲ್ಲಿ ಸಂಬಂಧಿಕರ ಮನೆಗೆ ತೆರಳುತ್ತಿದ್ದಾಗ ಮೂರು ಮಂದಿಯ ತಂಡ ಕಾರಿನಲ್ಲಿ ಆಕೆಯನ್ನು ಅಪಹರಿಸಿದೆ ಎಂದು ಪತಿ ದೂರು ನೀಡಲು ತೆರಳಿದರೆ ಪೊಲೀಸರು ಆತನನ್ನೇ ಶಂಕಿಸಿ ಪ್ರಶ್ನಿಸಲಾರಂಭಿಸಿದ್ದರು ಎಂದು ಆರೋಪಿಸಲಾಗಿದೆ. ಆತನಿಗೆ ಹಲ್ಲೆ ಕೂಡ ನಡೆಸಲಾಗಿರುವುದು ಆತನ ಮೈ ಮೇಲಿನ ಗಾಯಗಳಿಂದ ಸಾಬೀತಾಗಿದೆ ಎಂದು ಎಸ್‍ಪಿ ಅಜಯ್ ಶಂಕರ್ ರಾಯ್ ಹೇಳಿದ್ದಾರೆ.

ಇದಾದ ಐದು ಗಂಟೆಗಳ ನಂತರ ದೂರುದಾರನ ಪತ್ನಿ ಠಾಣೆಗೆ ಹಾಜರಾಗಿ ಅಪಹರಣಕಾರರು ತನ್ನ ಮೇಲೆ ಅತ್ಯಾಚಾರಗೈದು, ಚಿನ್ನಾಭರಣ ಸೆಳೆದು ನೆರೆಯ ಇಟಾಹ್ ಜಿಲ್ಲೆಯಲ್ಲಿ ಬಿಟ್ಟು ಪರಾರಿಯಾದರು ಎಂದು ಆರೋಪಿಸಿದ್ದಾರೆ. ಆದರೆ ವೈದ್ಯಕೀಯ ಪರೀಕ್ಷೆ ಅತ್ಯಾಚಾರ ಆರೋಪವನ್ನು ದೃಢಪಡಿಸಿಲ್ಲ. ಆಕೆಯ ಮೈಮೇಲೆ ಗಾಯಗಳೂ ಇಲ್ಲ ಎಂದು ವೈದ್ಯಕೀಯ ವರದಿ ತಿಳಿಸಿದೆ ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣದ ತನಿಖೆ  ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News