ಅಗ್ರಿಗೋಲ್ಡ್ ನಿಂದ ವಂಚನೆ ಆರೋಪ: ಪರಿಹಾರ ನೀಡಲು ಒತ್ತಾಯಿಸಿ ಧರಣಿ

Update: 2019-07-08 13:21 GMT

ಬೆಂಗಳೂರು, ಜು.8: ಅಗ್ರಿಗೋಲ್ಡ್ ಕಂಪನಿಯಿಂದ ಲಕ್ಷಾಂತರ ಜನ ಠೇವಣಿದಾರರಿಗೆ ವಂಚನೆಯಾಗಿದ್ದು, ಸರಕಾರ ಪರಿಹಾರ ಹಾಗೂ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ಅಗ್ರಿಗೋಲ್ಡ್ ಗ್ರಾಹಕರ ಮತ್ತು ಏಜೆಂಟರ ಕ್ಷೇಮಾಭಿವೃದ್ಧಿ ಸಂಘ ಬೃಹತ್ ಪ್ರತಿಭಟನೆಯನ್ನು ನಡೆಸಿತು.

ಸೋಮವಾರ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಅಗ್ರಿಗೋಲ್ಡ್ ಕಂಪನಿಯಿಂದ ವಂಚಿತರಾದ ಸಾವಿರಾರು ಮಂದಿಯ ಪರವಾಗಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘದ ಕೆ.ಗುರುಮೂರ್ತಿ, ಅಗ್ರಿಗೋಲ್ಡ್ ಸಂಸ್ಥೆಯಿಂದ ವಂಚಿತರಿಗೆ ನ್ಯಾಯ ದೊರಕಿಸಿಕೊಡಲು ಸರಕಾರ ತುರ್ತು ಕ್ರಮಕೈಗೊಳ್ಳಬೇಕು ಹಾಗೂ ಸಂಸ್ಥೆಯ ಎಲ್ಲ ಆಸ್ತಿಗಳನ್ನು ಮಾರಾಟ ಮಾಡಿ ಬಂದ ಹಣದಿಂದ ಠೇವಣಿದಾರರಿಗೆ ಪಾವತಿಸಬೇಕು ಎಂದು ಒತ್ತಾಯ ಮಾಡಿದರು.

ಅಗ್ರಿಗೋಲ್ಡ್ ಸಂಸ್ಥೆಯು ಲಕ್ಷಾಂತರ ಜನರಿಗೆ ಉದ್ಯೋಗ ಕಲ್ಪಿಸುತ್ತೇವೆ, ನೂರಾರು ವ್ಯಾಪಾರಗಳನ್ನು ಮಾಡುತ್ತೇವೆ, ಎಂಟು ರಾಜ್ಯಗಳಲ್ಲಿ ಲಕ್ಷಾಂತರ ಕುಟುಂಬಗಳ ಆರ್ಥಿಕ ಅಭಿವೃದ್ಧಿಗೆ ಮುಂದಾಗಿರುವುದಾಗಿ ಜನಸಾಮಾನ್ಯರಲ್ಲಿ ನಂಬಿಕೆ ಹುಟ್ಟಿಸಿ, ಕೇಂದ್ರ, ರಾಜ್ಯ ಸಚಿವರು ಹಾಗೂ ಸಮಾಜದ ಗಣ್ಯ ವ್ಯಕ್ತಿಗಳನ್ನು ತನ್ನ ಸಂಸ್ಥೆಗೆ ಆಹ್ವಾನಿಸುವ ಮೂಲಕ ಗ್ರಾಹಕರನ್ನು ನಂಬಿಸಿತ್ತು ಎಂದು ದೂರಿದರು.

ರಾಜ್ಯ ಸರಕಾರವು ಪ್ರಕರಣವನ್ನು ಸಿಐಡಿಗೆ ಒಪ್ಪಿಸಿದ ನಂತರ ಸಂಸ್ಥೆಯು ರಾಜ್ಯದಲ್ಲಿ ಹೊಂದಿರುವ ಕೆಲ ಸ್ಥಿರ ಚರಾಸ್ಥಿಗಳನ್ನು ಜಪ್ತಿ ಮಾಡಿಸಿತಾದರೂ ಕಳೆದ ನಾಲ್ಕು ವರ್ಷದಿಂದ ಗ್ರಾಹಕರಿಗೆ ಯಾವ ಪರಿಹಾರವು ಇದುವರೆಗೂ ಸಿಕ್ಕಿಲ್ಲ. ರಾಜ್ಯ ಸರಕಾರವು ವಂಚಿತ ಗ್ರಾಹಕರ ನೆರವಿಗೆ ಯಾವುದೇ ಕ್ರಮಗಳನ್ನು ಕೈಗೊಳ್ಳದೇ ಮೌನ ವಹಿಸಿರುವುದು ಖಂಡನೀಯವಾದುದು ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದ ಗ್ರಾಹಕರಿಂದ ಸಂಗ್ರಹಿಸಿದ ಹಣವನ್ನು ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಹೂಡಿಕೆ ಮಾಡಿ ಅಲ್ಲಿ ಹೆಚ್ಚಿನ ಆಸ್ತಿಗಳನ್ನು ಖರೀದಿ ಮಾಡಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಜಪ್ತಿಯಾದ ಅಗ್ರಿಗೋಲ್ಡ್ ಸಂಸ್ಥೆಯ ಎಲ್ಲ ಆಸ್ತಿಗಳನ್ನು ಮಾರಾಟ ಮಾಡಿ, ಎಲ್ಲ ಗ್ರಾಹಕರಿಗೂ ತಮ್ಮ ಠೇವಣಿ ವೌಲ್ಯದ ಆಧಾರದಲ್ಲಿ ಸಮನಾಗಿ ಹಂಚಿಕೆ ಮಾಡಬೇಕಿದೆ. ನ್ಯಾಯಾಲಯವು ಒಂದು ವೇಳೆ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿನ ಆಸ್ತಿಗಳನ್ನು ಮಾತ್ರ ಮಾರಾಟ ಮಾಡಿ ಕೇವಲ ಅಲ್ಲಿನ ಗ್ರಾಹಕರಿಗೆ ಹಂಚಿಕೆ ಮಾಡಿದಲ್ಲಿ ರಾಜ್ಯದ ಗ್ರಾಹಕರಿಗೆ ಅನ್ಯಾಯವಾಗಲಿದೆ ಎಂದು ವಿಷಾದಿಸಿದರು.

ಅಗ್ರಿಗೋಲ್ಡ್ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ ಗ್ರಾಹಕರು ಮತ್ತು ಏಜೆಂಟರು ಬಹುತೇಕ ಬಡ ಕೆಳ ಮಧ್ಯಮ ವರ್ಗದವರಾಗಿದ್ದು, ಅವರ ಪರಿಸ್ಥಿತಿ ದುರ್ಬಲವಾಗಿದೆ. ಅವರಲ್ಲಿ ಕೆಲವರು ಈಗಾಗಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಕುಟುಂಬಗಳಿಗೆ ರಾಜ್ಯ ಸರಕಾರದಿಂದ ಇಲ್ಲಿಯವರೆಗೂ ಯಾವುದೇ ಸಹಾಯವಾಗಲಿ, ನೆರವಾಗಲಿ ಸಿಕ್ಕಿರುವುದಿಲ್ಲ. ರಾಜ್ಯದ 8.5 ಲಕ್ಷ ವಂಚಿತ ಜನರನ್ನೊಳಗೊಂಡ ಈ ವಿಷಯದಲ್ಲಿ ಸರಕಾರವು ಗಮನಹರಿಸಿ ಸೂಕ್ತ ಪರಿಹಾರವನ್ನು ನೀಡಬೇಕೆಂದು ಮನವಿ ಮಾಡಿದರು.

ಹಗರಣದ ಹಿನ್ನೆಲೆ

ಆಂಧ್ರಪ್ರದೇಶದ ಮೂಲದ ಅಗ್ರಿಗೋಲ್ಡ್ ಸಂಸ್ಥೆಯು ವಿಜಯವಾಡವನ್ನು ತನ್ನ ಕೇಂದ್ರ ಕಚೇರಿಯನ್ನಾಗಿಸಿಕೊಂಡು ಗ್ರಾಹಕರಿಗೆ ಠೇವಣಿಗಳನ್ನು ಸಂಗ್ರಹಿಸಿ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿದ್ದು, ಅತಿ ಹೆಚ್ಚು ಸ್ಥಿರಾಸ್ತಿಗಳನ್ನು ಆಂಧ್ರಪ್ರದೇಶದಲ್ಲಿ ಹೊಂದಿದೆ. ರಾಜ್ಯದಲ್ಲಿ 8.5 ಲಕ್ಷದಷ್ಟು ಗ್ರಾಹಕರಿಂದ ಅಂದಾಜು 1,700 ಕೋಟಿ ರೂ. ಹಣ ಠೇವಣಿಯಾಗಿ ಸಂಗ್ರಹಿಸಿದ ಈ ಸಂಸ್ಥೆಯು, ಈ ಎಲ್ಲ ಜನಸಾಮಾನ್ಯರಿಗೆ ವಂಚನೆ ಮಾಡಿದೆ ಎನ್ನಲಾಗಿದೆ.

ಹಕ್ಕೊತ್ತಾಯಗಳು

* ಗ್ರಾಹಕರ ಮೂಲ ಠೇವಣಿ ಹಣ 1,700 ಕೋಟಿ ರೂ. ಪಾವತಿಸಬೇಕು.

* ಆಂಧ್ರ ಹಾಗೂ ರಾಜ್ಯದ ಅಧಿಕಾರಿಗಳ ಸಮನ್ವಯ ಸಮಿತಿ ರಚನೆ.

* ಎಲ್ಲ ಜಿಲ್ಲೆಯಲ್ಲೂ ಬಾಂಡ್ ಪರಿಶೀಲನಾ ಕೇಂದ್ರವನ್ನು ತೆರೆಯಬೇಕು.

* ಅಗ್ರಿಗೋಲ್ಡ್‌ನ ಬೇನಾಮಿ ಆಸ್ತಿ ಸ್ವಾಧೀನಕ್ಕೆ ಪಡೆಯಬೇಕು.

* ಸಂಸ್ಥೆಯ ಆಸ್ತಿ ನಿರ್ವಹಣೆಯ ಆದಾಯ ಬಹಿರಂಗಪಡಿಸಬೇಕು.

* ಸಂಬಂಧಪಟ್ಟ ಎಲ್ಲ ಅಧಿಕಾರಿಗಳ ಸಭೆ ಕರೆಯಬೇಕು.

* ಹಗರಣದಲ್ಲಿ ಪಾಲುದಾರರಿಗೆ ಕಾನೂನು ಕ್ರಮ ಕೈಗೊಳ್ಳಬೇಕು.

ಎಂಟು ರಾಜ್ಯಗಳಲ್ಲಿನ ಸುಮಾರು 32 ಲಕ್ಷ ಖಾತೆಯುಳ್ಳ ಗ್ರಾಹಕರಿಗೆ 6,385 ಕೋಟಿ ರೂ. ಹಣವನ್ನು ಪಾವತಿಸಬೇಕಿದ್ದು, ಗ್ರಾಹಕರಿಗೆ ಕೊಟ್ಟ 700 ಕೋಟಿ ರೂ. ಮೌಲ್ಯದ ಚೆಕ್ ಗಳು ಬೌನ್ಸ್ ಆದನಂತರ 2015ರಲ್ಲಿ ದಿಢಿರನೇ ವಹಿವಾಟನ್ನು ಸ್ಥಗಿತಗೊಳಿಸಿತ್ತು.

-ಕೆ.ನಾಗಭೂಷಣರಾವ್, ಅಗ್ರಿಗೋಲ್ಡ್ ಗ್ರಾಹಕ ಸಂಘದ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News