ಪಕ್ಷೇತರ ಶಾಸಕ ನಾಗೇಶ್‌ರನ್ನು ಅಪಹರಿಸಿ ಮುಂಬೈಗೆ ಕರೆದುಕೊಂಡು ಹೋಗಿದ್ದಾರೆ: ಸಚಿವ ಡಿಕೆಶಿ

Update: 2019-07-08 13:50 GMT

ಬೆಂಗಳೂರು, ಜು.8: ರಾಜ್ಯ ಸರಕಾರಕ್ಕೆ ಏನು ಆಗುವುದಿಲ್ಲ. ಎಲ್ಲ ಸಮಸ್ಯೆಗಳು ಸರಿ ಹೋಗುತ್ತವೆ. ನಮಗೆ ರಾಜೀನಾಮೆ ಕೊಡಿ ಎಂದು ಹೇಳಿದ್ರು, ರಾಜೀನಾಮೆ ಕೊಟ್ಟಿದ್ದೇವೆ. ಸರಕಾರ ಹಾಗೂ ಪಕ್ಷಕ್ಕೆ ಒಳ್ಳೆಯದಾಗಬೇಕು ಅಷ್ಟೇ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬೈಗೆ ಹೋಗಿರುವ ಶಾಸಕರು ವಾಪಸ್ ಬರುತ್ತಾರೆ. ಪಾಪ ಅವರಿಗೂ ಸಚಿವರಾಗಬೇಕೆಂಬ ಆಸೆ ಇದೆ. ಅವಕಾಶಗಳು ಸಿಗಲಿ ಎಂದರು.

ಸರಕಾರಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ. ನನ್ನ ಮೇಲೂ ಯಾವೆಲ್ಲಾ ಕೇಸ್‌ಗಳನ್ನು ಹಾಕಿದ್ದಾರೆ. ಐಟಿ, ಈಡಿ ಎಲ್ಲರೂ ಕೇಸ್ ಹಾಕಿದ್ದಾರೆ. ನಾನೇನು ಹೆದರಿಕೊಂಡಿದ್ದೇನಾ? ಎಲ್ಲವನ್ನೂ ಎದುರಿಸುತ್ತೇನೆ. ಪಾಪ ನಮ್ಮ ಶಾಸಕರನ್ನು ಹೆದರಿಸಲು ನೋಡುತ್ತಿದ್ದಾರೆ ಎಂದು ಶಿವಕುಮಾರ್ ಹೇಳಿದರು.

ಪಕ್ಷೇತರ ಶಾಸಕ ನಾಗೇಶ್‌ರನ್ನು ಅಪಹರಿಸಿ, ರಾಜೀನಾಮೆ ಕೊಡಿಸಿ ಮುಂಬೈಗೆ ಕರೆದುಕೊಂಡು ಹೋಗಿದ್ದಾರೆ. ಯಡಿಯೂರಪ್ಪ ಆಪ್ತ ಸಹಾಯಕ ಸಂತೋಷ್ ಹಾಗೂ ಕೆಲವರು ನನ್ನನ್ನು ಅಪಹರಣ ಮಾಡಿ ಮುಂಬೈಗೆ ಕರೆದುಕೊಂಡು ಹೋಗುತ್ತಿದ್ದಾರೆ ಬೇಗ ಬನ್ನಿ ಎಂದು ಬೇರೊಬ್ಬರ ಫೋನ್ ಮೂಲಕ ನನಗೆ ಕರೆ ಮಾಡಿದ್ದರು ಎಂದು ಶಿವಕುಮಾರ್ ಆರೋಪಿಸಿದರು.

ನಾನು, ನಾರಾಯಣ ಸ್ವಾಮಿ ಹಾಗೂ ವಿ.ಮುನಿಯಪ್ಪ ವಿಮಾನ ನಿಲ್ದಾಣಕ್ಕೆ ಹೋಗುವ ಮುನ್ನವೇ ಅವರು ವಿಶೇಷ ವಿಮಾನದ ಮೂಲಕ ಹೊರಟಿದ್ದರು. ಬಿಜೆಪಿಯವರ ತಂಡ ಯಾವ ರೀತಿ ನಡೆದುಕೊಳ್ಳುತ್ತಿದೆ ಎಂಬುದು ಇದರಿಂದ ಗೊತ್ತಾಗುತ್ತದೆ. ಮುಂಬೈಗೆ ಹೋಗಿರುವವರೆಲ್ಲ ರಾಜೀನಾಮೆ ವಾಪಸ್ ತೆಗೆದುಕೊಳ್ಳುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News