ಮೈತ್ರಿ ಸರಕಾರ ಉಳಿಸಲು ಹರಸಾಹಸ: ಕಾಂಗ್ರೆಸ್-ಜೆಡಿಎಸ್ ಪಕ್ಷದ ಎಲ್ಲ ಸಚಿವರ ರಾಜೀನಾಮೆ

Update: 2019-07-08 14:25 GMT

ಬೆಂಗಳೂರು, ಜು.8: ರಾಜ್ಯದ ಮೈತ್ರಿ ಸರಕಾರವನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು, ಅತೃಪ್ತ ಶಾಸಕರಿಗೆ ಅಧಿಕಾರ ಬಿಟ್ಟುಕೊಡಲು ಮುಂದಾಗಿದ್ದು, ಉಪ ಮುಖ್ಯಮಂತ್ರಿ ಸೇರಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಎಲ್ಲ ಸಚಿವರು ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೂಚನೆಯಂತೆ ಕಾಂಗ್ರೆಸ್ ಪಕ್ಷದ 21 ಸಚಿವರು ಸೋಮವಾರ ಬೆಳಗ್ಗೆ ರಾಜೀನಾಮೆ ನೀಡಿದ್ದಾರೆ. ಇದೇ ಹಾದಿಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಪಕ್ಷದ ಎಲ್ಲ ಸಚಿವರ ರಾಜೀನಾಮೆ ಪಡೆದುಕೊಂಡಿದ್ದಾರೆ.

ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ನಿವಾಸದಲ್ಲಿ ಸೋಮವಾರ ಬೆಳಗ್ಗೆ ನಡೆದ ಉಪಾಹಾರ ಕೂಟದ ಸಭೆಯಲ್ಲಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ರಾಹುಲ್ ಗಾಂಧಿ ಸೂಚನೆಯನ್ನು ಸಚಿವರ ಗಮನಕ್ಕೆ ತಂದರು.

ರಾಜ್ಯ ಸರಕಾರವನ್ನು ಉಳಿಸಿಕೊಳ್ಳಲು ಯಾವುದೇ ಕ್ರಮ ಕೈಗೊಳ್ಳುವಂತೆ, ಎಷ್ಟು ಸಚಿವರ ರಾಜೀನಾಮೆಯನ್ನಾದರೂ ಪಡೆಯುವಂತೆ ರಾಹುಲ್ ಗಾಂಧಿ ಸೂಚಿಸಿರುವುದಾಗಿ ಉಭಯ ನಾಯಕರು ಸಚಿವರಿಗೆ ತಿಳಿಸಿದರು. ಅಲ್ಲದೇ, ಈ ಹಂತದಲ್ಲಿ ಸರಕಾರವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯ ಬಗ್ಗೆಯೂ ಸಚಿವರಿಗೆ ತಿಳಿಸಿದರು.

ಅದರಂತೆ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್, ಕೃಷ್ಣಭೈರೇಗೌಡ, ಯು.ಟಿ.ಖಾದರ್, ಝಮೀರ್ ಅಹ್ಮದ್ ಖಾನ್, ರಹೀಮ್ ಖಾನ್ ಸೇರಿದಂತೆ ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ಸಚಿವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದರು.

ಕಾಂಗ್ರೆಸ್ ಪಕ್ಷದ ಸಚಿವರು ರಾಜೀನಾಮೆ ನೀಡಿದ ಮಾಹಿತಿ ಪಡೆದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ನಗರದ ಖಾಸಗಿ ಹೊಟೇಲ್‌ನಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆದು ಚರ್ಚೆ ನಡೆಸಿದರು. ಅಲ್ಲದೇ, ಇದೇ ವೇಳೆ ಜೆಡಿಎಸ್ ಪಕ್ಷದ ಎಲ್ಲ ಸಚಿವರ ರಾಜೀನಾಮೆಯನ್ನು ಪಡೆದುಕೊಂಡರು.

ತಮ್ಮ ನಿವಾಸದಲ್ಲಿ ನಡೆದ ಉಪಾಹಾರ ಕೂಟದ ಸಭೆಯ ಬಳಿಕ ಕೆಲವು ಸಚಿವರೊಂದಿಗೆ ಕುಮಾರಕೃಪಾ ಅತಿಥಿಗೃಹಕ್ಕೆ ಆಗಮಿಸಿದ ಪರಮೇಶ್ವರ್, ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿ ನಿರ್ಗಮಿಸಿದರು. 

ಕೆಲವು ಶಾಸಕರ ರಾಜೀನಾಮೆಯಿಂದ ಉಂಟಾಗಿರುವ ಬಿಕ್ಕಟ್ಟನ್ನು ಪರಿಹರಿಸಲು ಕಾಂಗ್ರೆಸ್ ಪಕ್ಷದ ಉಪ ಮುಖ್ಯಮಂತ್ರಿ ಸೇರಿದಂತೆ 21 ಸಚಿವರು ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡಿದ್ದಾರೆ. ಎಲ್ಲರಿಗೂ ಪಕ್ಷದ ಭವಿಷ್ಯ ಮುಖ್ಯವೇ ಹೊರತು, ವೈಯಕ್ತಿಕ ಸ್ಥಾನಮಾನ ಮುಖ್ಯವಲ್ಲ ಎಂಬ ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

-ಸಿದ್ದರಾಮಯ್ಯ, ಸಮನ್ವಯ ಸಮಿತಿ ಅಧ್ಯಕ್ಷ

ಕಾಂಗ್ರೆಸ್ ಪಕ್ಷದ 21 ಸಚಿವರು ರಾಜೀನಾಮೆ ಸಲ್ಲಿಸಿರುವ ರೀತಿಯಲ್ಲೇ ಜೆಡಿಎಸ್ ಪಕ್ಷದ ಎಲ್ಲ ಸಚಿವರು ರಾಜೀನಾಮೆ ನೀಡಿದ್ದಾರೆ. ಸಚಿವ ಸಂಪುಟವನ್ನು ಶೀಘ್ರವೇ ಪುನಾರಚಿಸಲಾಗುವುದು.

-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News