ಐಎಂಎ ವಂಚನೆ ಪ್ರಕರಣ: ಬೆಂಗಳೂರು ನಗರ ಜಿಲ್ಲಾಧಿಕಾರಿ ಬಂಧನ

Update: 2019-07-08 14:52 GMT
ಜಿಲ್ಲಾಧಿಕಾರಿ ವಿಜಯ್ ಶಂಕರ್

ಬೆಂಗಳೂರು, ಜು.8: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಲಂಚ ಸ್ವೀಕಾರ ಆರೋಪದಡಿ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯ್ ಶಂಕರ್ ಅವರನ್ನು ಸಿಟ್ ತನಿಖಾಧಿಕಾರಿಗಳು ಬಂಧಿಸಿದ್ದಾರೆ.

ಐಎಂಎ ವಂಚನೆ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಜಿಲ್ಲಾಧಿಕಾರಿ ವಿಜಯ್ ಶಂಕರ್ ಅವರಿಗೆ ಸಿಟ್(ಎಸ್‌ಐಟಿ) ನೋಟಿಸ್ ನೀಡಿತ್ತು. ಅದರಂತೆ, ಸೋಮವಾರ ವಿಚಾರಣೆಗೆ ಹಾಜರಾದ ವಿಜಯಶಂಕರ್ ಅವರನ್ನು ಸಿಟ್ ತನಿಖಾಧಿಕಾರಿ ಎಸ್.ಗಿರೀಶ್ ನೇತೃತ್ವದಲ್ಲಿ ಬಂಧಿಸಲಾಗಿದೆ.

1.5 ಕೋಟಿ ಲಂಚ: ಐಎಂಎ ಸಮೂಹ ಸಂಸ್ಥೆ ವಿರುದ್ಧ ತನಿಖೆ ನಡೆಸುವಂತೆ ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿ ಎಲ್.ಸಿ.ನಾಗರಾಜ್ ಅವರನ್ನು ನೇಮಿಸಿತ್ತು. ಆದರೆ, ಸಂಸ್ಥೆಯ ಮಾಲಕ ಮನ್ಸೂರ್ ಖಾನ್ ನಿಂದ ನಾಗರಾಜ್ 4.5 ಕೋಟಿ ಲಂಚ ಪಡೆದು, ಸರಕಾರಕ್ಕೆ ಸುಳ್ಳು ವರದಿ ಸಲ್ಲಿಸಿದ್ದರು ಎನ್ನಲಾಗಿದ್ದು, ಇದೇ ವಿಚಾರವಾಗಿ ಜು.5ರಂದು ಎಲ್.ಸಿ.ನಾಗರಾಜ್ ಹಾಗೂ ಈತನಿಗೆ ಸಹಾಯ ಮಾಡಿದ ಗ್ರಾಮಲೆಕ್ಕಿಗ ಮಂಜುನಾಥ್‌ನನ್ನು ಬಂಧಿಸಿದ್ದರು.

ಆರೋಪಿ ನಾಗರಾಜ್ ಅನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಜಿಲ್ಲಾಧಿಕಾರಿ ವಿಜಯಶಂಕರ್ ಅವರಿಗೂ 1.5 ಕೋಟಿ ರೂ. ಲಂಚ ನೀಡಿರುವ ಅಂಶ ಬೆಳಕಿಗೆ ಬಂದಿದೆ. ಈ ಸಂಬಂಧ ವಿಜಯಶಂಕರ್ ಅವರನ್ನು ಸಿಟ್ ಬಂಧಿಸಿದೆ ಎಂದು ವರದಿಯಾಗಿದೆ.

ಎಸಿಬಿ ಮೊಕದ್ದಮೆ?

ಐಎಂಎ ವಂಚನೆ ಪ್ರಕರಣ ಸಂಬಂಧ ಆರೋಪಿ ಮನ್ಸೂರ್ ಖಾನ್ ಪರವಾಗಿ ವರದಿ ನೀಡಲು ಲಂಚ ಸ್ವೀಕಾರ ಆರೋಪ ಪ್ರಕರಣ ಸಂಬಂಧ ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿ ಎಲ್.ಸಿ.ನಾಗರಾಜ್ ಹಾಗೂ ಗ್ರಾಮಲೆಕ್ಕಿಗ ಮಂಜುನಾಥ್ ವಿರುದ್ಧ ಎಸಿಬಿ ಮೊಕದ್ದಮೆ ದಾಖಲಿಸಿ ಮುಂದಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News