ಜು.12ಕ್ಕೆ ಆಶಾ ಕಾರ್ಯಕರ್ತೆಯರಿಂದ ‘ವಿಧಾನಸೌಧ ಚಲೋ’

Update: 2019-07-08 16:44 GMT

ಬೆಂಗಳೂರು, ಜು.8: ಆಶಾ ಕಾರ್ಯಕರ್ತೆಯರಿಗೆ 10 ಸಾವಿರ ರೂ. ಸಂಬಳ ನಿಗದಿ, ವೇತನ ತಾರತಮ್ಯ ನಿವಾರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜು.12ರಂದು ‘ವಿಧಾನಸೌಧ ಚಲೋ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಎಸ್.ವರಲಕ್ಷ್ಮೀ, ನೆರೆ ಆಂಧ್ರಪ್ರದೇಶದಲ್ಲಿ ಆಶಾ ಕಾರ್ಯಕರ್ತೆಯರಿಗೆ 10 ಸಾವಿರ ರೂ. ಸಂಬಳ ನಿಗದಿ ಮಾಡಲಾಗಿದ್ದು, ಅದನ್ನು ರಾಜದಲ್ಲಿಯೂ ಜಾರಿಗೊಳಿಸಿ, 45 ಎಎಲ್‌ಸಿ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಬೇಕು ಹಾಗೂ ಆಶಾ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಿ 18 ಸಾವಿರ ರೂ. ಕನಿಷ್ಠ ವೇತನ ನೀಡಬೇಕೆಂದು ಆಗ್ರಹ ಮಾಡಿದರು.

ಸಾಮಾಜಿಕ ಭದ್ರತೆಗೆ ಕನಿಷ್ಠ 3 ಸಾವಿರ ಪಿಂಚಣಿ, ಪಿಎಫ್, ಇಎಸ್‌ಐ ನೀಡುವುದು, ಮಾಸಿಕ ದಿನಾಂಕ ಮತ್ತು ಸಭೆಗಳನ್ನು ಜಿಲ್ಲೆಗಳಲ್ಲಿ ಒಂದೇ ದಿನ ಏರ್ಪಡಿಸಬಾರದು ಹಾಗೂ 8 ತಿಂಗಳಿನಿಂದ ಬಾಕಿಯಿರುವ ಎಂಸಿಪಿಎಸ್ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

ಇನ್ನು, ಸಮಾನ ವೇತನ ನೀಡುವುದು, ಕೆಲಸದ ಅವಧಿಯಲ್ಲಿ ಮರಣ ಹೊಂದಿರುವ ಆಶಾ ಕಾರ್ಯಕರ್ತೆಯರಿಗೆ ಮರಣ ಪರಿಹಾರ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ರೈಲ್ವೆ ನಿಲ್ದಾಣದಿಂದ ಬೃಹತ್ ಮೆರವಣಿಗೆ ಮೂಲಕ ವಿಧಾನಸೌಧ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News