‘ನೀಟ್’ ವಿವಾದ: ಲೋಕಸಭೆಯಲ್ಲಿ ಡಿಎಂಕೆ ಸಭಾತ್ಯಾಗ

Update: 2019-07-08 17:25 GMT

ಹೊಸದಿಲ್ಲಿ, ಜು.8: ತಮಿಳುನಾಡಿಗೆ ‘ನೀಟ್’ ಪರೀಕ್ಷೆಯಿಂದ ವಿನಾಯಿತಿ ನೀಡುವ ಎರಡು ವಿಧೇಯಕಗಳನ್ನು ರಾಷ್ಟ್ರಪತಿ ತಳ್ಳಿಹಾಕಿರುವ ಬಗ್ಗೆ ಕೇಂದ್ರ ಸರಕಾರದ ಉತ್ತರಕ್ಕೆ ಆಗ್ರಹಿಸಿ ಸೋಮವಾರ ಲೋಕಸಭೆಯಲ್ಲಿ ಡಿಎಂಕೆ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದ್ದಾರೆ.

 ಶೂನ್ಯ ಅವಧಿಯಲ್ಲಿ ವಿಷಯ ಪ್ರಸ್ತಾವಿಸಿದ ಡಿಎಂಕೆ ಸಂಸದ ಟಿಆರ್ ಬಾಲು, ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗದ ಹಿನ್ನೆಲೆಯಲ್ಲಿ ರಾಜ್ಯದ ಹಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ . ಈ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ 12ನೇ ತರಗತಿಯ ಅಂಕದ ಆಧಾರದಲ್ಲಿ ವೈದ್ಯಕೀಯ ಪದವಿ ಅಧ್ಯಯನಕ್ಕೆ ದಾಖಲಾತಿ ನಡೆಸಲು ಅವಕಾಶ ನೀಡುವ ಎರಡು ವಿಧೇಯಕಗಳನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿತ್ತು. ನೀಟ್‌ನಿಂದ ತಮಿಳುನಾಡಿಗೆ ವಿನಾಯಿತಿ ನೀಡುವ ವಿಧೇಯಕಗಳನ್ನು 2017ರಲ್ಲಿ ರಾಷ್ಟ್ರಪತಿಯವರು ತಳ್ಳಿಹಾಕಿರುವ ಬಗ್ಗೆ ಸರಕಾರ ಉತ್ತರಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೇಂದ್ರ ಸರಕಾರದ ಉತ್ತರ ಆಗ್ರಹಿಸುವ ಹಕ್ಕು ನಮಗಿದೆ ಎಂದರು. ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ(ನೀಟ್)ಯಿಂದ ತಮಿಳುನಾಡಿಗೆ ವಿನಾಯಿತಿ ನೀಡಬೇಕೆಂಬುದು ರಾಜ್ಯದ ವಿಪಕ್ಷಗಳ ದೀರ್ಘ ಕಾಲದ ಒತ್ತಾಯವಾಗಿದೆ.

ಈ ಸಂದರ್ಭ ಸ್ಪೀಕರ್ ಓಂ ಬಿರ್ಲಾ, ತನ್ನ ವಿಷಯ ಪ್ರಸ್ತಾವಿಸುವಂತೆ ಟಿಎಂಸಿಯ ಸುದೀಪ್ ಬಂದ್ಯೋಪಾಧ್ಯಾಯಗೆ ಸೂಚಿಸಿದಾಗ ವಿರೋಧಿಸಿದ ಬಾಲು, “ನಾವು ಸಭಾತ್ಯಾಗ ಮಾಡುತ್ತೇವೆ ಸರ್” ಎಂದು ಹೇಳಿ ಹೊರನಡೆದರು. ವಿಷಯ ಪ್ರಸ್ತಾವಿಸಿದ ಬಂದ್ಯೋಪಾಧ್ಯಾಯ, 42 ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿರುವ ತನ್ನ ಬಂಡವಾಳದ ಪಾಲನ್ನು ಬೇರೆಡೆ ವಿನಿಯೋಗಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ಟಿಎಂಸಿ ತೀವ್ರವಾಗಿ ವಿರೋಧಿಸುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News