ಬೆಂಗಳೂರು ನಗರ: ಜು.13 ರಿಂದ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

Update: 2019-07-08 18:03 GMT

ಬೆಂಗಳೂರು, ಜು.8: ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜು.13 ಮತ್ತು 14ರಂದು ರವೀಂದ್ರ ಕಲಾಕ್ಷೇತ್ರದಲ್ಲಿ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಮಾಯಣ್ಣ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿನಗಳ ಕಾಲ ನಡೆಯಲಿರುವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ರಂಗನಟ ಎಚ್.ಜಿ.ಸೋಮಶೇಖರ್ ರಾವ್ ಆಯ್ಕೆಯಾಗಿದ್ದಾರೆ. ಸಮ್ಮೇಳನವನ್ನು ನಾಡೋಜ ಬರಗೂರು ರಾಮಚಂದ್ರಪ್ಪ ಉದ್ಘಾಟಿಸಲಿದ್ದು, ರಾಜಕೀಯ ಮುಖಂಡರು, ಕಲಾವಿದರು ಸೇರಿದಂತೆ ನಾಟಕ ರಂಗದ ದಿಗ್ಗಜರು ಭಾಗವಹಿಸಲಿದ್ದಾರೆ. ಅಲ್ಲದೆ ವಿಚಾರಗೋಷ್ಠಿಗಳು, ಕವಿಗೋಷ್ಠಿ, ನಾಲ್ಕು ನಾಟಕಗಳು, ಯಕ್ಷಗಾನ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ವೇದಿಕೆಯ ಮೇಲೆ ಅನಾವರಣಗೊಳ್ಳಲಿವೆ ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸೇವಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಜುಲೈ 13ರಂದು ಬೆಳಗ್ಗೆ ನ್ಯಾಷನಲ್ ಕಾಲೇಜ್, ಮೆಟ್ರೊ ನಿಲ್ದಾಣ, ಕೆ.ಆರ್. ರಸ್ತೆ, ಬಸವನಗುಡಿ ಇಲ್ಲಿನ ಕಸಾಪದ ಹೊಸ ನಿವೇಶನದಲ್ಲಿನ ಭುವನೇಶ್ವರಿ ಪ್ರತಿಮೆಯ ಬಳಿ ಸಂಸದ ತೇಜಸ್ವಿಸೂರ್ಯ ಭವ್ಯ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.

ನಂತರ ಸಮ್ಮೇಳನಾಧ್ಯಕ್ಷರನ್ನು ಸಾರೋಟಿನಲ್ಲಿ ಕಿಮ್ಸ್ ವೃತ್ತದ ಕೆಂಪೇಗೌಡ ಪ್ರತಿಮೆ, ನ್ಯಾಷನಲ್ ಕಾಲೇಜು ವೃತ್ತದ ಬಿ.ಎಂ.ಶ್ರೀ ಪ್ರತಿಮೆ, ಲಾಲ್‌ಬಾಗ್ ಪಶ್ಚಿಮ ದ್ವಾರದ ಕುವೆಂಪು ಪ್ರತಿಮೆ, ಸಜ್ಜನ್‌ರಾವ್ ವೃತ್ತದ ಅನಕೃ ಪ್ರತಿಮೆ ಹಾಗೂ ಮಿನರ್ವಾ ವೃತ್ತ ಹಾಗೂ ಜೆ.ಸಿ ರಸ್ತೆಯ ಮಾರ್ಗವಾಗಿ ಮೆರವಣಿಗೆ ರವೀಂದ್ರ ಕಲಾಕ್ಷೇತ್ರ ತಲುಪಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News