ಜಗ್ಗಾಟದಲ್ಲಿ ಕಡಿಯುತ್ತಿರುವ ಹಗ್ಗ

Update: 2019-07-09 05:49 GMT

ರಾಜ್ಯವನ್ನು ಆಳುತ್ತಿರುವ ಮೈತ್ರಿ ಸರಕಾರ ಅವಸರದಲ್ಲಿ ಹುಟ್ಟಿದ ಮಗು. ಬಿಜೆಪಿ ಇನ್ನೇನು ಜೆಡಿಎಸ್‌ನ್ನು ಸಂಪರ್ಕಿಸಿ ಮೈತ್ರಿ ಸರಕಾರ ರಚನೆಗೆ ಅಣಿಯಾಗಬೇಕು ಎನ್ನುವಷ್ಟರಲ್ಲಿ ಡಿಕೆಶಿ ನೇತೃತ್ವದಲ್ಲಿ ಕಾಂಗ್ರೆಸ್ ಮಿಂಚಿನ ಕಾರ್ಯಾಚರಣೆ ನಡೆಸಿತು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದನ್ನು ನಿಶ್ಶರ್ಥವಾಗಿ ಬೆಂಬಲಿಸುವ ಮೂಲಕ ಜೆಡಿಎಸ್‌ಗೆ ಅಚ್ಚರಿಯ ಕೊಡುಗೆಯನ್ನು ನೀಡಿತು. ಇದರ ಹಿಂದೆ ಎರಡು ಕಾರಣಗಳಿದ್ದವು. ಒಂದು, ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದು. ಆದರೆ ಇದೇ ಸಂದರ್ಭದಲ್ಲಿ, ಕನಿಷ್ಠ ಮುಖ್ಯಮಂತ್ರಿ ಸ್ಥಾನವನ್ನು ಎರಡೂವರೆ ವರ್ಷಗಳಿಗೆ ಹಂಚಿಕೊಳ್ಳುವ ಮಾತುಕತೆ ನಡೆಸಿದಿದ್ದರೆ ಮೈತ್ರಿ ಸರಕಾರಕ್ಕೆ ಇಂದು ಈ ಸ್ಥಿತಿ ಬರುತ್ತಿರಲಿಲ್ಲವೇನೋ? ಬರೇ 37 ಸ್ಥಾನಗಳನ್ನು ಹೊಂದಿರುವ ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರು ನಿಶ್ಶರ್ಥವಾಗಿ ಪೂರ್ಣಾವಧಿ ಮುಖ್ಯಮಂತ್ರಿಯಾಗಲು ಕಾಂಗ್ರೆಸ್ ಒಪ್ಪಿದ್ದು ಅವಸರದ ತೀರ್ಮಾನವಾಗಿತ್ತು. ಕಾಂಗ್ರೆಸ್ ಇಷ್ಟೊಂದು ಅವಸರಪಡುವ ಅನಿವಾರ್ಯ ಏನಿತ್ತು? ಇಷ್ಟಕ್ಕೂ ಬಿಜೆಪಿ ಮತ್ತು ಕಾಂಗ್ರೆಸ್ ಇವೆರಡರಲ್ಲಿ ಆಯ್ಕೆಯ ಪ್ರಶ್ನೆ ಬಂದಾಗ ಜೆಡಿಎಸ್‌ಗೆ ಕಾಂಗ್ರೆಸ್‌ನ್ನು ಆರಿಸುವುದು ರಾಜಕೀಯವಾಗಿ ಅನಿವಾರ್ಯವಾಗಿತ್ತು. ಬಿಜೆಪಿಯೇನೂ ಕುಮಾರಸ್ವಾಮಿಯನ್ನು ಪೂರ್ಣಾವಧಿ ಮುಖ್ಯಮಂತ್ರಿಯನ್ನಾಗಿ ಮಾಡಲು ಒಪ್ಪುತ್ತಿರಲಿಲ್ಲ.

ಬಹುಶಃ ಡಿಕೆಶಿ ಬಳಗ ರಾಜಕೀಯದೊಳಗೊಂದು ರಾಜಕೀಯವನ್ನು ಆಡಿತು. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವುದಷ್ಟೇ ಅಲ್ಲ, ಸಿದ್ದರಾಮಯ್ಯ ಅವರ ಹಿಡಿತದಿಂದ ರಾಜ್ಯ ಕಾಂಗ್ರೆಸ್‌ನ್ನು ಬಿಡಿಸುವುದು ಕೂಡ ಅವರ ಗುರಿಯಾಗಿತ್ತು. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರ ಜನಪ್ರಿಯತೆ, ಕಾಂಗ್ರೆಸ್‌ನ ಹಲವು ನಾಯಕರಿಗೆ ನುಂಗಲಾರದ ತುತ್ತಾಗಿತ್ತು. ಸಿದ್ದರಾಮಯ್ಯ ಇಲ್ಲದೆ ಕಾಂಗ್ರೆಸ್ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸುವುದಕ್ಕೆ ಕಾಂಗ್ರೆಸ್‌ನ ನಾಯಕರೂ ಒಳಗೊಳಗೇ ಕೈ ಜೋಡಿಸಿದ್ದರು. ಆದರೆ ಬಾದಾಮಿಯಲ್ಲಿ ಕೂದಲೆಳೆಯ ಅಂತರದಲ್ಲಿ ಸಿದ್ದರಾಮಯ್ಯ ಗೆದ್ದರು. ಕುಮಾರಸ್ವಾಮಿ ಪೂರ್ಣಾವಧಿ ಮುಖ್ಯಮಂತ್ರಿಯಾಗದೇ ಇದ್ದರೆ, ಕಾಂಗ್ರೆಸ್‌ನೊಳಗಿನ ಮುಖ್ಯಮಂತ್ರಿ ಅಭ್ಯರ್ಥಿ ಯಾರು? ಎನ್ನುವ ಪ್ರಶ್ನೆ ಎದುರಾಗುತ್ತದೆ. ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗುವ ಸಾಧ್ಯತೆಗಳನ್ನು ಮನಗಂಡು, ಅಂತಹದೊಂದು ಪ್ರಶ್ನೆಯೇ ಉದ್ಭವಿಸದಂತೆ ಅವಸರವಸರವಾಗಿ ಕುಮಾರಸ್ವಾಮಿಗೆ ‘ಪೂರ್ಣಾವಧಿ ಮುಖ್ಯಮಂತ್ರಿ’ ಭರವಸೆಯನ್ನು ನೀಡಲಾಯಿತು. ಈ ಮೈತ್ರಿಯಿಂದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅನುಕೂಲವಾಗಬಹುದು ಎಂದು ಭಾವಿಸಲಾಗಿತ್ತು. ಸಣ್ಣ ಪುಟ್ಟ ವೈಮನಸ್ಸುಗಳು ಆಗಾಗ ಸ್ಫೋಟಗೊಳ್ಳುತ್ತಿದ್ದರೂ, ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಲೋಕಸಭಾ ಚುನಾವಣೆಯವರೆಗೆ ಮೈತ್ರಿ ಸರಕಾರವನ್ನು ಸಹಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರ ಹಿಡಿಯುವುದು ಕಷ್ಟ. ಕೇಂದ್ರದಲ್ಲಿ ಯುಪಿಎ ಅಧಿಕಾರ ಹಿಡಿಯಲು ಈ ಮೈತ್ರಿ ತನ್ನ ಕೊಡುಗೆಯನ್ನು ನೀಡಬಹುದು ಎನ್ನುವುದು ದಿಲ್ಲಿಯ ಕಾಂಗ್ರೆಸ್ ವರಿಷ್ಠರ ಲೆಕ್ಕಾಚಾರವಾಗಿತ್ತು. ಆದರೆ ಲೆಕ್ಕಾಚಾರಗಳೆಲ್ಲ ಬುಡಮೇಲಾಯಿತು.

ಲೋಕಸಭಾ ಚುನಾವಣೆಯಲ್ಲಿ ಮೈತ್ರಿಯೇ ಕಾಂಗ್ರೆಸ್‌ಗೆ ಮುಳುವಾಯಿತು. ಕಾಂಗ್ರೆಸ್ ಅಭ್ಯರ್ಥಿ ನಿಂತಲ್ಲಿ ಜೆಡಿಎಸ್ ಕಾರ್ಯಕರ್ತರು ಬಹಿರಂಗವಾಗಿ ಬಿಜೆಪಿಯನ್ನು ಬೆಂಬಲಿಸಿದರು. ಮೈತ್ರಿ ಪಕ್ಷಗಳು ಪರಸ್ಪರ ಬೆನ್ನಿಗೆ ಇರಿದುಕೊಂಡವು. ಇತ್ತ ಕೇಂದ್ರದಲ್ಲಿ ಬಿಜೆಪಿ ಭಾರೀ ಬಹುಮತದೊಂದಿಗೆ ಅಧಿಕಾರ ಹಿಡಿಯಿತು. ಕಳೆದ ಲೋಕಸಭಾ ಚುನಾವಣೆಯಲ್ಲಿ ‘ಜೆಡಿಎಸ್-ಕಾಂಗ್ರೆಸ್ ಮೈತ್ರಿ’ ಮಾಡಿಕೊಳ್ಳಬಾರದಿತ್ತು ಎಂದು ಉಭಯ ಪಕ್ಷಗಳ ನಾಯಕರೂ ಮಾಧ್ಯಮಗಳಲ್ಲಿ ಆಡಿಕೊಂಡರು. ಲೋಕಸಭಾ ಚುನಾವಣೆಯ ಬಳಿಕ, ‘ಯಾವ ರಾಜಕೀಯ ಕಾರಣಕ್ಕಾಗಿ ಜೆಡಿಎಸ್‌ನ್ನು ಬೆಂಬಲಿಸಬೇಕು?’ ಎನ್ನುವ ದೊಡ್ಡ ಪ್ರಶ್ನೆ ಕಾಂಗ್ರೆಸ್‌ಗೆ ಎದುರಾಯಿತು. ಆ ಪ್ರಶ್ನೆಯ ಫಲವೇ ಸದ್ಯದ ಬೆಳವಣಿಗೆಗಳಿಗೆ ಮುಖ್ಯ ಕಾರಣವಾಗಿದೆ. ಮಾತು ಮಾತಿಗೆ ‘ಹುತಾತ್ಮ ಹೇಳಿಕೆ’ಗಳನ್ನು ನೀಡುತ್ತಲೇ ಮುಖ್ಯಮಂತ್ರಿ ಹುದ್ದೆಯನ್ನು ಅನುಭವಿಸುತ್ತಿರುವ ಕುಮಾರಸ್ವಾಮಿ ಹಾಗೂ ಅವರ ತಂದೆ ದೇವೇಗೌಡರು ಈ ಹಿಂದಿನ ಬಿಗಿ ನಿಲುವಿನಿಂದ ಹಿಂದೆ ಸರಿಯದೇ ಇದ್ದರೆ ಮೈತ್ರಿ ಸರಕಾರ ಮುಂದುವರಿಯುವುದು ಕಷ್ಟ. ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳುವವರೆಗೆ ಕಾಂಗ್ರೆಸ್ ಮೇಲೆ ಜೆಡಿಎಸ್‌ನ ನಿಯಂತ್ರಣ ಸಹಜವಾಗಿಯೇ ಇತ್ತು. ಆದರೆ ಲೋಕಸಭಾ ಚುನಾವಣೆಯ ಹೀನಾಯ ಫಲಿತಾಂಶದ ಬಳಿಕವೂ ಜೆಡಿಎಸ್ ಹಗ್ಗ ಸಡಿಲಿಸದೇ ಇರುವುದು ಮೈತ್ರಿಯ ಮೇಲೆ ಸಹಜವಾಗಿಯೇ ಪರಿಣಾಮ ಬೀರಿದೆ. ಇತ್ತ ಜೆಡಿಎಸ್‌ನೊಳಗಿರುವ ಹಲವು ಶಾಸಕರಿಗೆ ಬದ್ಧತೆಯೇ ಇಲ್ಲ.

ಅವರಿಗೆ ಬಿಜೆಪಿ- ಜೆಡಿಎಸ್ ಒಂದೇ. ಅಧಿಕಾರ ಮತ್ತು ಹಣವೇ ಅವರು ನಂಬಿರುವ ಸಿದ್ಧಾಂತ. ಹಿರಿಯ ಮುತ್ಸದ್ದಿ ಅಡಗೂರು ವಿಶ್ವನಾಥ್ ತಮ್ಮ ಮೂಗು ಹೋದರೂ ಚಿಂತೆಯಿಲ್ಲ, ಪ್ರತಿಸ್ಪರ್ಧಿಯ ಬೆರಳು ಕತ್ತರಿಸಿಯೇ ಸಿದ್ಧ ಎನ್ನುವ ಹಟಮಾರಿ. ಜೆಡಿಎಸ್ ಶಾಸಕರ ಬಂಡಾಯ ಶುರುವಾದುದೇ ತಡ, ಕಾಂಗ್ರೆಸ್ ಅದನ್ನು ತನಗೆ ಪೂರಕವಾಗಿ ಬಳಸಿಕೊಂಡಿತು. ಮೈತ್ರಿಯನ್ನು ಮುಗಿಸುವುದು ಅಥವಾ ಹೊಸ ಶರತ್ತುಗಳೊಂದಿಗೆ ಮೈತ್ರಿಯನ್ನು ಮುಂದುವರಿಸುವುದು ಕಾಂಗ್ರೆಸ್‌ನ ತಂತ್ರಗಾರಿಕೆಯಾಗಿದೆ. ಒಂದು ವೇಳೆ, ಮೈತ್ರಿ ಮುರಿದು ಜೆಡಿಎಸ್ ಪಕ್ಷ ಬಿಜೆಪಿಯ ಹಿಂದೆ ಹೋದರೆ ಅದರಿಂದ ಕಾಂಗ್ರೆಸ್‌ಗೇ ಲಾಭ. ಜೊತೆಗೆ ಜೆಡಿಎಸ್‌ನ ಹಲವು ಶಾಸಕರು ಬಿಜೆಪಿಯ ‘ಆಪರೇಷನ್ ಕಮಲ’ಗಳಿಗೆ ಬಲಿಯಾಗುವ ಅಪಾಯವಿದೆ. ಒಂದಂತೂ ಸತ್ಯ. ಈ ಮೈತ್ರಿಯೊಳಗಿನ ಹಗ್ಗ ಜಗ್ಗಾಟ ವಿಪರೀತಕ್ಕೆ ಹೋದರೆ ಅದರ ಸಂಪೂರ್ಣ ಲಾಭ ಬಿಜೆಪಿಗೆ. ಯಡಿಯೂರಪ್ಪ ಅವರಂತೂ ಸರಕಾರ ಬೀಳುವುದನ್ನೇ ಕಾಯುತ್ತಿದ್ದಾರೆ.

ಈ ಸಂದರ್ಭವನ್ನು ಬಳಸಿಕೊಂಡರೆ ಅವರಿಗೆ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಅವಕಾಶವಿದೆ. ಹೊಸದಾಗಿ ರಾಜ್ಯದಲ್ಲಿ ಚುನಾವಣೆ ನಡೆದು ಬಿಜೆಪಿ ಗೆದ್ದರೂ ಯಡಿಯೂರಪ್ಪ ಮುಖ್ಯಮಂತ್ರಿಯಾಗುವ ಸಾಧ್ಯತೆ ಕಡಿಮೆ. ಇದರ ಅರಿವು ಅವರಿಗೂ ಇದೆ. ಜೆಡಿಎಸ್ ಪಕ್ಷವು ಬಿಜೆಪಿಯ ಜೊತೆಗೆ ಕೈ ಜೋಡಿಸಿದರೂ ಅಲ್ಲಿ ಕುಮಾರಸ್ವಾಮಿಯನ್ನಂತೂ ಮುಖ್ಯಮಂತ್ರಿಯಾಗಿಸುವ ಸಾಧ್ಯತೆಗಳಿಲ್ಲ. ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಘೋಷಣೆಯಾಗಿ ಮರು ಚುನಾವಣೆ ನಡೆದರೆ ಬಿಜೆಪಿ ಭಾರೀ ಬಹುಮತದಿಂದ ಅಧಿಕಾರ ಹಿಡಿಯಲಿದೆ. ಮೈತ್ರಿ ಮುಂದುವರಿದು ಸರಕಾರ ಉಳಿದರೆ ಹೆಚ್ಚಿನ ಲಾಭವನ್ನು ತನ್ನದಾಗಿಸಿಕೊಳ್ಳುವುದು ಜೆಡಿಎಸ್ ಪಕ್ಷವೇ ಆಗಿದೆ. ಈ ಕಾರಣದಿಂದ, ನಿಶ್ಶರ್ಥವಾಗಿ ತನ್ನನ್ನು ಮುಖ್ಯಮಂತ್ರಿಯನ್ನಾಗಿಸಿದ ಕಾಂಗ್ರೆಸ್ ಜೊತೆಗೆ ಹೆಚ್ಚು ಸೌಹಾರ್ದವಾಗಿ ವ್ಯವಹರಿಸುವುದೇ ಬುದ್ಧಿವಂತಿಕೆ. ಈ ಹಿನ್ನೆಲೆಯಲ್ಲಿ ಸಂಪುಟವನ್ನು ಹೊಸದಾಗಿ ರಚಿಸುವುದು ಮಾತ್ರವಲ್ಲ, ಮುಖ್ಯಮಂತ್ರಿ ಸ್ಥಾನವನ್ನು ಅರ್ಧ ಅವಧಿಗೆ ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಡಲು ಜೆಡಿಎಸ್ ಪೂರ್ಣ ಮನಸ್ಸಿನಿಂದ ಒಪ್ಪಿದರೆ ಮಾತ್ರ ಸಮಸ್ಯೆ ಪರಿಹಾರವಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News