ರಾಜೀನಾಮೆ ಹಿಂಪಡೆದುಕೊಳ್ಳಿ, ಇಲ್ಲವೇ ಕ್ರಮ ಎದುರಿಸಿ: ಬಂಡಾಯ ಶಾಸಕರಿಗೆ ಸಿದ್ದರಾಮಯ್ಯ ಎಚ್ಚರಿಕೆ

Update: 2019-07-09 12:42 GMT

ಬೆಂಗಳೂರು, ಜು. 9: ‘ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅತೃಪ್ತರೇ ದಯವಿಟ್ಟು ವಾಪಸ್ ಬನ್ನಿ, ಇಲ್ಲದಿದ್ದರೆ ಪಕ್ಷಾಂತರ ನಿಷೇಧ ಕಾಯ್ದೆಯಡಿ ಶಾಸಕ ಸ್ಥಾನದಿಂದ ವಜಾ ಮತ್ತು 6 ವರ್ಷ ಚುನಾವಣಾ ಸ್ಪರ್ಧೆಯಿಂದ ನಿರ್ಬಂಧಗೊಳ್ಳುವ ಶಿಕ್ಷೆ ಅನುಭವಿಸಿ’ ಎಂಬ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ.

ಮಂಗಳವಾರ ವಿಧಾನಸೌಧದ ಮೂರನೆ ಮಹಡಿಯಲ್ಲಿನ ಸಮ್ಮೇಳನ ಸಭಾಂಗಣದಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ 10 ಮಂದಿ ಶಾಸಕರಿಗೆ ಅಂತಿಮ ಎಚ್ಚರಿಕೆ ನೀಡಲಾಗಿದೆ.

ಸಭೆಯ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ರಾಜೀನಾಮೆ ನೀಡಿರುವ ಶಾಸಕರಿಗೆ ಕಾನೂನು ಗೊತ್ತಿದೆಯೋ ಅಥವಾ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ, ಪಕ್ಷಾಂತರ ನಿಷೇಧ ಕಾಯ್ದೆ ಷೆಡ್ಯೂಲ್ 10 ಸ್ಪಷ್ಟವಾಗಿ ಹೇಳುತ್ತದೆ. ಯಾರೇ ಆಗಲಿ, ಯಾವ ಪಕ್ಷದ ಚಿಹ್ನೆಯಿಂದ ಆಯ್ಕೆಯಾಗಿರುವವರು, ರಾಜೀನಾಮೆ ನೀಡಿದರೆ ಅದು ಪಕ್ಷಾಂತರ ಎನಿಸಿಕೊಳ್ಳುತ್ತದೆ, ಆತನ ಸದಸ್ಯತ್ವ ರದ್ದಾಗುತ್ತದೆ ಎಂದು ಎಚ್ಚರಿಸಿದರು.

ರಾಜೀನಾಮೆ ನೀಡಿರುವ ಶಾಸಕರಿಗೆ ಈಗಲೂ ನಾನು ವಾಪಸ್ ಬರುವಂತೆ ಮನವಿ ಮಾಡುತ್ತೇನೆ, ಅಲ್ಲದೆ ರಾಜೀನಾಮೆ ಹಿಂಪಡೆಯಿರಿ ಎಂದು ಕೋರುತ್ತೇನೆ. ಈಗಾಗಲೇ ಪಕ್ಷವು ಸ್ಪಷ್ಟ ನಿಲುವು ತಳೆದಿದೆ. ಕಾನೂನಿನನ್ವಯ ಸದಸ್ಯತ್ವ ರದ್ದುಪಡಿಸಲು ಕೋರಿ ಸ್ಪೀಕರ್‌ಗೆ ಮನವಿ ಸಲ್ಲಿಸಲಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಶಾಸಕರು ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿಲ್ಲ ಎಂದು ಮೇಲುನೋಟಕ್ಕೆ ಗೊತ್ತಾಗುತ್ತದೆ. ರಾಜೀನಾಮೆ ಸ್ವ ಇಚ್ಛೆಯಿಂದ ನೀಡಿದ್ದಾರೆಂದು ಸ್ಪೀಕರ್‌ಗೆ ಮನವರಿಕೆ ಆಗಬೇಕು. ಸ್ಪೀಕರ್ ಅವರಿಗೆ ಪ್ರಜಾಪ್ರತಿನಿಧಿ ಕಾಯ್ದೆ ಅನ್ವಯ ವಿವೇಚನಾಧಿಕಾರವಿದೆ. ಅಲ್ಲದೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಮಾಹಿತಿ ನೀಡಿದರು.

ಸಂಪುಟ ಪುನರಚನೆ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಸಹಿತ ಎಲ್ಲ ಸಚಿವರು ರಾಜೀನಾಮೆ ನೀಡಿದ್ದು, ಕೆಲ ಅರ್ಹ ಹಿರಿಯರಿಗೆ ಹಾಗೂ ಕೆಲ ಹೊಸಬರಿಗೆ ಅವಕಾಶ ಕಲ್ಪಿಸುವ ದೃಷ್ಟಿಯಿಂದ ಸಂಪುಟ ಸಚಿವರು ಸ್ವಂತ ನಿರ್ಧಾರದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ, ರಾಜೀನಾಮೆ ನೀಡಿರುವವರೆಲ್ಲರೂ ಸಂಪುಟದಲ್ಲೆ ಇದ್ದಾರೆ, ಸಂಪುಟ ಇನ್ನೂ ಅಸ್ತಿತ್ವದಲ್ಲಿದೆ ಎಂದರು.

ಅಸ್ಥಿರಕ್ಕೆ ಹುನ್ನಾರ: ಕರ್ನಾಟಕ ಸೇರಿ ಇನ್ನಿತರ ಕಡೆಗಳಲ್ಲಿ ಚುನಾಯಿತ ಸರಕಾರಗಳನ್ನು ಅಸ್ಥಿರಗೊಳಿಸುವ ಮೂಲಕ ಬಿಜೆಪಿ ಪ್ರಜಾಪ್ರಭುತ್ವ ವಿರೋಧಿ ಕೆಲಸದಲ್ಲಿ ತೊಡಗಿದೆ. 2018ರಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನ ಬಂದಿದ್ದರೂ, ಒಟ್ಟಾರೆ ಶೇಕಡವಾರು ಮತಗಳು ನಮ್ಮ ಪಕ್ಷಕ್ಕೆ ಹೆಚ್ಚು ಬಂದಿದೆ ಎಂದರು.

ಆದರೂ, ಬಿಜೆಪಿ ಏಕೈಕ ದೊಡ್ಡಪಕ್ಷ ಎಂದು ಹೇಳಿ ಅವರಿಗೆ ರಾಜ್ಯಪಾಲರು ಸರಕಾರ ರಚನೆಗೆ ಅವಕಾಶ ಕಲ್ಪಿಸಿದ್ದರು. ಆದರೆ, ಯಡಿಯೂರಪ್ಪ ಸಿಎಂ ಆಗಿ ಅಧಿಕಾರ ವಹಿಸಿಕೊಂಡು ಬಹುಮತ ಸಾಬೀತುಪಡಿಸಲು ವಿಫಲವಾದರು. ಅನಂತರ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದಿತು.

ಒಂದು ವರ್ಷದ ಮೈತ್ರಿ ಆಡಳಿತದಲ್ಲಿ ಸತತ ಐದು ಬಾರಿ ಸರಕಾರ ಅಸ್ಥಿರಕ್ಕೆ ಬಿಜೆಪಿ ವಿಫಲ ಯತ್ನ ನಡೆಸಿದ್ದು, ಇದೀಗ ಆರನೆ ಬಾರಿ ಅದೇ ಕೆಲಸಕ್ಕೆ ಕೈ ಹಾಕಿದೆ. ಇದರಲ್ಲಿ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ, ಪ್ರಧಾನಿ ಮೋದಿ ಪಾಲ್ಗೊಂಡಿದ್ದು, ಕಾನೂನು ಬಾಹಿರ ಕೃತ್ಯದಲ್ಲಿ ಬಿಜೆಪಿ ತೊಡಗಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

‘ಮೈತ್ರಿ ಸರಕಾರ ಆಡಳಿತ ಬಂದ ದಿನದಿಂದ ನಿರಂತರವಾಗಿ ಸರಕಾರ ಅಸ್ಥಿರಕ್ಕೆ ಬಿಜೆಪಿ ಪ್ರಯತ್ನ ನಡೆಸಿದ್ದು, ಇದರಲ್ಲಿ ಅವರು ಯಶಸ್ವಿ ಆಗುವುದಿಲ್ಲ. ಆಪರೇಷನ್ ಕಮಲಕ್ಕೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಕುಮ್ಮಕ್ಕು ನೀಡುತ್ತಿದ್ದಾರೆ. ಈ ಕೆಲಸಕ್ಕೆ ಹಣ ಕೊಟ್ಟವರು ಯಾರು ಎಂಬುದನ್ನು ಬಿಜೆಪಿ ಸ್ಪಷ್ಟಪಡಿಸಬೇಕು’

-ಸಿದ್ದರಾಮಯ್ಯ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ

ಕಾಂಗ್ರೆಸ್ ಪಕ್ಷದ 79 ಮಂದಿ ಶಾಸಕರ ಪೈಕಿ ರಾಜೀನಾಮೆ ಸಲ್ಲಿಸಿರುವ 10 ಮಂದಿ ಹಾಗೂ ಕನೀಝ್ ಫಾತಿಮಾ, ಇ.ತುಕರಾಂ, ಎಸ್.ರಾಮಪ್ಪ, ಶಾಮನೂರು ಶಿವಶಂಕರಪ್ಪ, ಡಾ.ಕೆ.ಸುಧಾಕರ್, ಎಂಟಿಬಿ ನಾಗರಾಜ್, ಟಿ.ಡಿ.ರಾಜೇಗೌಡ ಸೇರಿ ಏಳು ಮಂದಿ ಅನುಮತಿ ಪಡೆದು ಸಭೆಗೆ ಗೈರು ಹಾಜರಾಗಿದ್ದು, ಉಳಿದಂತೆ ಬಹುತೇಕ ಎಲ್ಲ ಶಾಸಕರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News