ರೈಲು ವಿಳಂಬ ಬಗ್ಗೆ ತನಿಖೆ ನಡೆಸಿದ್ದಕ್ಕೆ ಉದ್ಯೋಗ ಕಳೆದುಕೊಂಡ ಮ್ಯಾಜಿಸ್ಟ್ರೇಟ್ 12 ವರ್ಷ ಬಳಿಕ ಮರುನೇಮಕ!

Update: 2019-07-10 03:44 GMT

ಹೊಸದಿಲ್ಲಿ, ಜು.10: ಅಂದು 2007ನೇ ಇಸವಿ ಮೇ 5. ಸೀಲ್ದಾ ತಲುಪಲು ಸ್ಥಳೀಯ ರೈಲಿಗಾಗಿ ಕೊಲ್ಕತ್ತಾದ ಲೇಕ್ ಗಾರ್ಡನ್ಸ್ ರೈಲು ನಿಲ್ದಾಣದಲ್ಲಿ ಕಾಯುತ್ತಿದ್ದರು. ಸೀಲ್ದಾ ಮ್ಯಾಜಿಸ್ಟ್ರೇಟ್, ರೈಲ್ವೆಯ ಹೆಚ್ಚುವರಿ ಹೊಣೆಯನ್ನೂ ಹೊಂದಿದ್ದರು. ಆದರೆ ಆ ರೈಲು ಅಂದು ವಿಳಂಬವಾಗಿ ಆಗಮಿಸಿದ್ದು, ಮಲಿಕ್ ಅವರ ಜೀವನವನ್ನೇ ಬದಲಿಸಿತು!

ರೈಲ್ವೆ ಮ್ಯಾಜಿಸ್ಟ್ರೇಟ್ ಆಗಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ನಿರ್ಧರಿಸಿದರು. ಆದರೆ ರೈಲು ಸರಿಯಾದ ಸಮಯಕ್ಕೆ ಓಡುವ ಬದಲು ಅವರ ವಿರುದ್ಧ ಪ್ರತಿಭಟನೆಗೆ ರೈಲ್ವೆ ಸಿಬ್ಬಂದಿ ಮುಂದಾದರು. ಮಲಿಕ್ ಅವರಿಗೆ ಕಡ್ಡಾಯ ನಿವೃತ್ತಿ ಪಡೆಯುವಂತೆ ಸೂಚಿಸಲಾಯಿತು.

ಹನ್ನೆರಡು ವರ್ಷಗಳ ಬಳಿಕ ಕಳೆದ ವಾರ ಕೊಲ್ಕತ್ತಾ ಹೈಕೋರ್ಟ್, ಮಲಿಕ್ ಅವರನ್ನು ಮರು ನೇಮಕ ಮಾಡಿ ಆದೇಶ ಹೊರಡಿಸಿದೆ. ಸೇವೆಯಿಂದ ಅವರನ್ನು ವಜಾಗೊಳಿಸಿರುವುದು ತಪ್ಪು ಎಂದು ತೀರ್ಪು ನೀಡಿದ ಹೈಕೋರ್ಟ್, ತಮ್ಮ ಕಾರ್ಯವ್ಯಾಪ್ತಿಯನ್ನು ಅವರು ಮೀರಿದ್ದರೂ, ಅವರ ಉದ್ದೇಶ ಶ್ಲಾಘನೀಯ ಎಂದು ಅಭಿಪ್ರಾಯಪಟ್ಟಿದೆ.

"ನ್ಯಾಯಾಂಗ ಅಧಿಕಾರಿಯೊಬ್ಬರು ಏಕಾಂಗಿಯಾಗಿ ಕಳ್ಳಸಾಗಣೆ ಮಾಫಿಯಾ ವಿರುದ್ಧ ಹೋರಾಡಬಹುದು ಎಂದು ಯೋಚಿಸಿದ್ದು ಮೂರ್ಖತನ" ಎಂದು ಜುಲೈ 4ರಂದು ನೀಡಿದ ತೀರ್ಪಿನಲ್ಲಿ ಹೈಕೋರ್ಟ್ ಹೇಳಿದೆ. 2007ರಂದು ಹಲವು ಮಂದಿ ರೈಲು ಪ್ರಯಾಣಿಕರ ಜತೆ ಮಾತನಾಡಿದ್ದ ಮಲಿಕ್, ಪ್ರತಿದಿನ ಏಕೆ ರೈಲು ವಿಳಂಬವಾಗುತ್ತಿದೆ ಎಂದು ಪ್ರಶ್ನಿಸಿದ್ದರು. ರೈಲಿನ ಚಾಲಕ ಹಾಗೂ ಗಾರ್ಡ್‌ಗಳು ಕಳ್ಳಸಾಗಣೆದಾರರ ಜತೆ ಕೈಜೋಡಿಸಿ ಅಕ್ರಮವಾಗಿ ರೈಲು ನಿಲ್ಲಿಸಿ ನಿಷೇಧಿತ ವಸ್ತುಗಳನ್ನು ಕೆಳಗಿಳಿಸುತ್ತಾರೆ ಎಂಬ ಮಾಹಿತಿ ದೊರಕಿತ್ತು.

ಈ ಹಿನ್ನೆಲೆಯಲ್ಲಿ ಮಲಿಕ್, ಕಾನೂನುಬಾಹಿರ ಎಂದು ತಿಳಿದಿದ್ದರೂ ಮೋಟರ್‌ಮನ್ ಕ್ಯಾಬಿನ್‌ನಲ್ಲಿ ಕುಳಿತು ಪ್ರಯಾಣಿಸಿದ್ದರು. ರೈಲು ಏಕೆ ವಿಳಂಬವಾಗುತ್ತಿದೆ ಎಂಬ ಬಗ್ಗೆ ತಮ್ಮ ಕೋರ್ಟ್‌ಗೆ ವರದಿ ಸಲ್ಲಿಸುವಂತೆ ಮೋಟರ್‌ಮನ್ ಹಾಗೂ ಗಾರ್ಡ್‌ಗೆ ಮೌಖಿಕ ಸೂಚನೆ ನೀಡಿದ್ದರು. ಪೊಲೀಸರು ಇಬ್ಬರನ್ನೂ ಠಾಣೆಗೆ ಕರೆದೊಯ್ದು ಮಲಿಕ್ ಮುಂದೆ ಹಾಜರುಪಡಿಸಿದರು.

ಇದರಿಂದ ರೊಚ್ಚಿಗೆದ್ದ ರೈಲ್ವೆ ಉದ್ಯೋಗಿಗಳು ಹಿಂಸಾತ್ಮಕ ಪ್ರತಿಭಟನೆ ನಡೆಸಿ ಸಂಜೆವರೆಗೂ ರೈಲು ಸೇವೆ ಅಸ್ತವ್ಯಸ್ತಗೊಂಡಿತ್ತು. ಮಲಿಕ್ ಅವರನ್ನು ತಕ್ಷಣ ಅಮಾನತು ಮಾಡಿ ಶಿಸ್ತು ಕ್ರಮಕ್ಕೆ ವಿಚಾರಣೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು. ಕೊಲ್ಕತ್ತಾ ಹೈಕೋರ್ಟ್, ಮಲಿಕ್ ವಿರುದ್ಧ ತೀರ್ಪು ನೀಡಿತು. ಮಲಿಕ್ ಅವರು ಅನುಮತಿ ಪಡೆಯದೇ ಮೋಟರ್‌ಮನ್ ಕ್ಯಾಬಿನ್‌ನಲ್ಲಿ ಪ್ರಯಾಣಿಸಿದ್ದು ದೃಢಪಟ್ಟಿತು. ಆದ್ದರಿಂದ ಅವರ ಕಡ್ಡಾಯ ನಿವೃತ್ತಿಗೆ ಹೈಕೋರ್ಟ್‌ನ ಆಡಳಿತಾತ್ಮಕ ಸಮಿತಿ ಆದೇಶ ನೀಡಿತ್ತು.

ಈ ಬಗ್ಗೆ ಮಲಿಕ್ ರಾಜ್ಯಪಾಲರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗದೇ, ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದರು. ಏಕಸದಸ್ಯ ಪೀಠ 2017ರಲ್ಲಿ ಮಲಿಕ್ ಅರ್ಜಿಯನ್ನು ತಿರಸ್ಕರಿಸಿತು. ಬಳಿಕ ದ್ವಿಸದಸ್ಯ ಪೀಠದ ಮುಂದೆ ಮಲಿಕ್ ಸ್ವತಃ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News