ಬೆಂಗಳೂರು: ನಿರ್ಮಾಣ ಹಂತದ ಕಟ್ಟಡ ಕುಸಿದು 3 ವರ್ಷದ ಬಾಲಕಿ ಸೇರಿ ಐವರು ಮೃತ್ಯು

Update: 2019-07-10 16:57 GMT

ಬೆಂಗಳೂರು, ಜು.10: ಸಮೀಪದ ಬಹುಮಹಡಿ ಕಟ್ಟಡಗಳು ದಿಢೀರ್ ಕುಸಿದ ಪರಿಣಾಮ ಮೂರು ವರ್ಷದ ಬಾಲಕಿ ಸೇರಿದಂತೆ ಐವರು ಮೃತಪಟ್ಟಿದ್ದು, ಅವಶೇಷಗಳಡಿ ಸಿಲುಕಿ ಹಲವು ಮಂದಿ ಗಾಯಗೊಂಡಿದ್ದಾರೆ.

ಘಟನೆಯಲ್ಲಿ ಮಂಜುದೇವಿ(38), ನಾರಾಯಣ್(35), ಇವರ ಪತ್ನಿ ನಿರ್ಮಲಾ(27) ಹಾಗೂ ಮೂರು ವರ್ಷದ ಅನುಷ್ಕಾ, ಖಗನ್ ಸರ್ಕಾರ್(48) ಮೃತಪಟ್ಟವರು ಎಂದು ತಿಳಿದುಬಂದಿದೆ.

ಕಟ್ಟಡದಡಿ ಸಿಲುಕಿ ಗಾಯಗೊಂಡಿದ್ದ ಕೂಲಿ ಕಾರ್ಮಿಕರಾದ ಉತ್ತಮ್, ಸಂತೋಷ್, ಉಮೇಶ್ ಕುರ್ಮಾ, ಅಮಿರ್, ಬೆತ್ತಾಮ್, ಬಾಲಕ ರಾಮ್ ಹಾಗೂ ಅವರನ್ನು ಬೋರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಉಮೇಶ್ ಕುರ್ಮಾ ಎಂಬುವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಘಟನೆ ವಿವರ: ಬುಧವಾರ ಬೆಳಗಿನ ಜಾವ 2.15 ಗಂಟೆ ಸುಮಾರಿಗೆ ಇಲ್ಲಿನ ಪುಲಿಕೇಶಿನಗರ ಬಳಿಯ ಹಚಿನ್ಸ್ ರಸ್ತೆಯ ಮಾರುತಿ ಸೇವಾ ನಗರದ 4 ಅಂತಸ್ತಿನ ಸಾಯಿ ಆದಿ ಅಂಬಾಲ್ ಅಪಾರ್ಟ್‌ಮೆಂಟ್ ಹಾಗೂ ಇದರ ಪಕ್ಕದ ನಿರ್ಮಾಣ ಹಂತದಲ್ಲಿರುವ ಮೂರಂತಸ್ತಿನ ಕಟ್ಟಡ ಕುಸಿದು ಬಿದ್ದು ಈ ದುರ್ಘಟನೆ ಸಂಭವಿಸಿದೆ. ಈ ಕಟ್ಟಡದಲ್ಲಿ 15ಕ್ಕೂ ಹೆಚ್ಚು ಮಂದಿ ಕಟ್ಟಡದಲ್ಲಿ ಕೂಲಿ ಕಾರ್ಮಿಕರು ವಾಸವಾಗಿದ್ದರು. ಒಂದು ಕಟ್ಟಡದ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದರೆ, ಒಳಾಂಗಣ ವಿನ್ಯಾಸ ನಡೆಸಲಾಗುತ್ತಿತ್ತು. ಮತ್ತೊಂದು ಕಟ್ಟಡದಲ್ಲಿ ಪೇಟಿಂಗ್ ಕೆಲಸ ಮಾಡಲಾಗುತ್ತಿತ್ತು ಎನ್ನಲಾಗಿದೆ.

ಕಟ್ಟಡ ಕುಸಿತದ ಸುದ್ದಿ ತಿಳಿದ ತಕ್ಷಣ ಆಗ್ನಿಶಾಮಕ ದಳ ಸಿಬ್ಬಂದಿ ಹಾಗೂ ರಾಷ್ಟ್ರೀಯ ವಿಪತ್ತು ಪಡೆಯ (ಎನ್‌ಡಿಆರ್‌ಎಫ್) ಧಾವಿಸಿ ರಕ್ಷಣಾ ಕಾರ್ಯ ಕೈಗೊಂಡಿದ್ದು, ಕಟ್ಟಡದ ಅವಶೇಷಗಳನ್ನು ತೆರವುಗೊಳಿಸಿ, ಗಾಯಾಳು ಕಾರ್ಮಿಕರನ್ನು ಶಿವಾಜಿನಗರದ ಬೌರಿಂಗ್ ಆಸ್ಪತ್ರೆಗೆ ರವಾನಿಸಿದರು.

ನೀರಿನಾಂಶ ಕಾರಣ?: ಕಟ್ಟಡ ನಿರ್ಮಾಣದ ಜಾಗದಲ್ಲಿ ನೀರಿನಾಂಶದ ಜೊತೆಗೆ ಕಟ್ಟಡ ನಿರ್ಮಾಣಕ್ಕೆ ಫಿಲ್ಟರ್ ಮರಳು ಬಳಸಿರುವುದು ಅವಘಡಕ್ಕೆ ಕಾರಣ ಎನ್ನಲಾಗುತ್ತಿದೆ. ಎರಡೂ ಕಟ್ಟಡಗಳ ಬೇಸ್‌ಮೆಂಟ್ ಕುಸಿದಿರುವ ಕಾರಣ, ಉಳಿದ ಭಾಗ ಯಾವುದೇ ಕ್ಷಣದಲ್ಲಿ ಉರುಳಿ ಬೀಳುವ ಸಾಧ್ಯತೆ ಇದ್ದು, ಯಾರೊಬ್ಬರೂ ಕಟ್ಟಡಗಳ ಬಳಿ ಸುಳಿಯದಂತೆ ಬಿಗಿಭದ್ರತೆ ಕೈಗೊಳ್ಳಲಾಗಿದೆ.

5 ಲಕ್ಷ ರೂ. ಪರಿಹಾರ

ಕಟ್ಟಡ ದುರಂತ ಪ್ರಕರಣ ಸಂಬಂಧ ಮೃತ ಸಂತ್ರಸ್ತರಿಗೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಪ್ರಕಟಿಸಿದರು.

ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಟ್ಟಡ ದುರಂತದಿಂದ ಮೃತಪಟ್ಟ ಹಾಗೂ ಗಾಯಾಳುಗಳಿಗೆ ಕಟ್ಟಡದ ಮಾಲಕನಿಂದಲೇ ಪರಿಹಾರ ಕೊಡಿಸಲು ಕ್ರಮ ವಹಿಸಲಾಗುವುದು. ಜತೆಗೆ ಅನಧಿಕೃತ ಕಟ್ಟಡಕ್ಕೆ ಅನುಮತಿ ನೀಡಿರುವ ಇಂಜಿನಿಯರ್ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಕಟ್ಟಡ ನಿರ್ಮಾಣ ಮಾಡಿರುವ ಸ್ಥಳದಲ್ಲಿ ಈ ಹಿಂದೆ ನೀರಿನ ಪ್ರದೇಶವಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ತಿಳಿದ್ದಾರೆ. ಆದರೆ, ಕಟ್ಟಡ ಮಾಲಕರು ಅನಧಿಕೃತವಾಗಿ ಒಂದು ಕಟ್ಟಡವನ್ನು ಹೆಚ್ಚಾಗಿ ನಿರ್ಮಾಣ ಮಾಡಿರುವ ಪರಿಣಾಮ ದುರಂತ ಸಂಭವಿಸಿದೆ. ಕಟ್ಟಡವನ್ನು ನೆಲಮಹಡಿ ಸೇರಿ ಮೂರು ಅಂತಸ್ತಿಗೆ ಮಾತ್ರ ಅನುಮತಿ ಕೊಟ್ಟಿದ್ದರೂ ಅನಧಿಕೃತವಾಗಿ ನಾಲ್ಕು ಅಂತಸ್ತನ್ನು ನಿರ್ಮಾಣ ಮಾಡಿಕೊಳ್ಳಲಾಗಿದೆ. ಜತೆಗೆ ಅಡಿಪಾಯದ ಗುಣಮಟ್ಟ ಕಳಪೆಯಾಗಿರುವ ಪರಿಣಾಮ ದುರಂತ ಸಂಭವಿಸಿದೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News