ಸಿಎಂ ಕುಮಾರಸ್ವಾಮಿ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಬಲ ಪ್ರದರ್ಶನ

Update: 2019-07-10 13:02 GMT

ಬೆಂಗಳೂರು, ಜು. 10: ಶಾಸಕರ ರಾಜೀನಾಮೆಯಿಂದ ಮೈತ್ರಿ ಸರಕಾರ ಅಲ್ಪಮತಕ್ಕೆ ಕುಸಿದಿದ್ದು ವಿಧಾನ ಮಂಡಲ ಅಧಿವೇಶನ ನಡೆಸಲು ಸಾಧ್ಯವಿಲ್ಲ. ಸಿಎಂ ಕುಮಾರಸ್ವಾಮಿ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಶಾಸಕರು ವಿಧಾನಸೌಧದಲ್ಲಿನ ಗಾಂಧಿ ಪುತ್ಥಳಿ ಮುಂದೆ ಧರಣಿ ಸತ್ಯಾಗ್ರಹ ನಡೆಸಿದರು.

ಬುಧವಾರ ವಿಪಕ್ಷ ನಾಯಕ ಯಡಿಯೂರಪ್ಪ ನೇತೃತ್ವದಲ್ಲಿ ಸತ್ಯಾಗ್ರಹ ನಡೆಸಿದ ಬಿಜೆಪಿ ಶಾಸಕರು, ಸ್ಪೀಕರ್ ವಿಳಂಬ ನೀತಿ ಸಲ್ಲ. ಶಾಸಕರ ರಾಜೀನಾಮೆಯನ್ನು ಕೂಡಲೇ ಅಂಗೀಕರಿಸಬೇಕು. ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರುವ ನೈತಿಕತೆ ಕಳೆದುಕೊಂಡಿದ್ದಾರೆಂದು ದೂರಿದರು.

ಆ ಬಳಿಕ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಶಾಸಕರು ರಾಜಭವನಕ್ಕೆ ತೆರಳಿ ರಾಜ್ಯಪಾಲ ವಜೂಬಾಯಿ ವಾಲಾ ಅವರನ್ನು ಭೇಟಿ ಮಾಡಿ, ಶಾಸಕರ ರಾಜೀನಾಮೆ ಅಂಗೀಕರಿಸಲು ಸ್ಪೀಕರ್ ವಿಳಂಬ ನೀತಿ ಹಿನ್ನೆಲೆಯಲ್ಲಿ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದರು.

ಬಿಎಸ್‌ವೈ ಹೊಸಬಾಂಬ್: ಮೈತ್ರಿ ಸರಕಾರದ ವಿರುದ್ಧ ಬೇಸತ್ತು ಶಾಸಕರ ರಾಜೀನಾಮೆ ಮುಂದುವರಿದಿದ್ದು, ಇಂದು ಸಂಜೆಯೊಳಗೆ ಇನ್ನೂ ಇಬ್ಬರೂ ಶಾಸಕರ ರಾಜೀನಾಮೆ ನೀಡಲಿದ್ದಾರೆಂದು ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.

ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿದ ಯಡಿಯೂರಪ್ಪ, ಮೈತ್ರಿ ಸರಕಾರದ 14 ಮಂದಿ ಶಾಸಕರು ರಾಜೀನಾಮೆ ನೀಡಿದ್ದು, ಇಬ್ಬರು ಪಕ್ಷೇತರ ಶಾಸಕರು ತಮ್ಮ ಬೆಂಬಲ ಹಿಂಪಡೆದಿದ್ದಾರೆ. ಇದೀಗ ನಾವು ಬಹುಮತ ಹೊಂದಿದ್ದೇವೆ ಎಂಬುದನ್ನು ರಾಜ್ಯಪಾಲರ ಗಮನಕ್ಕೆ ತರಲಾಗಿದೆ ಎಂದರು.

ಸರಕಾರದ ಆಡಳಿತ ವೈಖರಿಯನ್ನು ಖಂಡಿಸಿ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ, ಮೈತ್ರಿ ಮುಖಂಡರು ಬಿಜೆಪಿಯ ಮೇಲೆ ಆರೋಪ ಮಾಡುವುದು ಸರಿಯಲ್ಲ. ಶಾಸಕರು ಮಾತನಾಡುವುದಿಲ್ಲ ಎಂದರೂ ಸಚಿವ ಶಿವಕುಮಾರ್ ಮುಂಬೈ ಹೊಟೇಲ್ ಮುಂದೆ ಧರಣಿ ಕುಳಿತಿರುವುದು ಸಲ್ಲ ಎಂದು ಯಡಿಯೂರಪ್ಪ ಆಕ್ಷೇಪಿಸಿದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರವನ್ನು ಅಸ್ಥಿರಗೊಳಿಸುವ ಯಾವುದೇ ಪ್ರಯತ್ನಕ್ಕೆ ಬಿಜೆಪಿ ಕೈಹಾಕಿಲ್ಲ. ಹಾಕುವುದೂ ಇಲ್ಲ. ನಾವು ಯಾವುದೇ ಕುದುರೆ ವ್ಯಾಪಾರವನ್ನು ನಡೆಸುತ್ತಿಲ್ಲ. ಆದರೂ ನಮ್ಮ ಮೇಲೆ ಆರೋಪ ಮಾಡುವುದು ಅರ್ಥಹೀನ ಎಂದು ಯಡಿಯೂರಪ್ಪ ಹೇಳಿದರು.

ಮಧ್ಯಪ್ರವೇಶಕ್ಕೆ ನಕಾರ: ಶಾಸಕರ ರಾಜೀನಾಮೆ ಅಂಗೀಕರಿಸಲು ಸ್ಪೀಕರ್ ವಿಳಂಬ ಮಾಡುತ್ತಿದ್ದು, ಮಧ್ಯಪ್ರವೇಶಕ್ಕೆ ರಾಜ್ಯಪಾಲ ವಜೂಬಾಯಿ ವಾಲಾ ಅವರು ನಿರಾಕರಿಸಿದ್ದು, ನಿಯಮಗಳ ಅನ್ವಯ ಶಾಸಕರು ರಾಜೀನಾಮೆ ಸಲ್ಲಿಸಬೇಕು ಎಂದು ಸೂಚನೆ ನೀಡಿದ್ದಾರೆಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News