ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಟಿಎಂಸಿಗೆ ಬೆಂಬಲ ನೀಡಿದ ಬಿಜೆಪಿ !

Update: 2019-07-11 03:57 GMT

ಹೊಸದಿಲ್ಲಿ: ಉದ್ಯೋಗಿಗಳ ರಾಜ್ಯ ವಿಮಾ ನಿಗಮ ಆಡಳಿತ ಮಂಡಳಿಯ ಸ್ಥಾನಕ್ಕೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವ ಸಲುವಾಗಿ ಆಡಳಿತಾರೂಢ ಬಿಜೆಪಿ, ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ ಸ್ವಾರಸ್ಯಕರ ಘಟನೆ, ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಪಾಳಯದಲ್ಲಿ ಒಡಕಿಗೆ ಕಾರಣವಾಯಿತು.

ಸಾಮಾನ್ಯವಾಗಿ ಇಎಸ್‌ಐಸಿ ಆಡಳಿತ ಮಂಡಳಿಗೆ ಕಾರ್ಮಿಕ ಸಂಘಟನೆಗಳ ಮತ್ತು ರಾಜ್ಯಗಳ ಪ್ರತಿನಿಧಿಗಳ ಜತೆ ರಾಜ್ಯಸಭಾ ಸದಸ್ಯರು ಆಯ್ಕೆಯಾಗುತ್ತಾರೆ. ಟಿಎಂಸಿಯ ದೇವವ್ರತ ಬಂಡೋಪಾಧ್ಯಾಯ ನಿವೃತ್ತರಾದ ಕಾರಣ ಖಾಲಿಯಾದ ಹುದ್ದೆಗೆ ಕಾಂಗ್ರೆಸ್‌ನ ಹಿರಿಯ ಮುಖಂಡ ಪ್ರದೀಪ್ ಭಟ್ಟಾಚಾರ್ಯ ಕಣದಲ್ಲಿದ್ದರು.

ತೃಣಮೂಲ ಕಾಂಗ್ರೆಸ್ ಪಕ್ಷ ತನ್ನ ಸ್ಥಾನ ಉಳಿಸಿಕೊಳ್ಳುವ ಸಲುವಾಗಿ ದೋಲಾ ಸೇನ್ ಅವರನ್ನು ಕಣಕ್ಕೆ ಇಳಿಸಿತ್ತು. ಸಿಪಿಐಎಂ ವಿರೋಧ ಪಕ್ಷಗಳ ಬೆಂಬಲದೊಂದಿಗೆ ಎಲಮಾರಾಮ್ ಕರೀಮ್ ಅವರನ್ನು ಅಭ್ಯರ್ಥಿ ಎಂದು ಘೋಷಿಸಿತ್ತು.

ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದ ಈ ಹುದ್ದೆಗೆ ಬುಧವಾರ ಮತದಾನ ನಡೆಯಿತು. ರಾಜ್ಯಸಭೆಯಲ್ಲಿ 13 ಸದಸ್ಯರನ್ನು ಹೊಂದಿರುವ ಟಿಎಂಸಿ, ಚಲಾವಣೆಯಾದ 156 ಮತಗಳ ಪೈಕಿ 90 ಮತ ಪಡೆದು ಗೆಲುವು ಸಾಧಿಸಿತು. ಕಾಂಗ್ರೆಸ್ ಪಕ್ಷ 46, ಸಿಪಿಎಂ ಎಂಟು ಮತ ಗಳಿಸಿತು. ರಾಜ್ಯಸಭೆಯಲ್ಲಿ ಕಾಂಗ್ರೆಸ್‌ನ ಸದಸ್ಯ ಬಲ 48 ಆಗಿದ್ದರೆ, ಬಿಜೆಪಿ 78 ಸದಸ್ಯರನ್ನು ಹೊಂದಿದೆ.

ವಿರೋಧ ಪಕ್ಷಗಳ ಅಭ್ಯರ್ಥಿಯನ್ನು ಸೋಲಿಸಲು ಟಿಎಂಸಿ ಬಿಜೆಪಿ, ಎಐಎಡಿಎಂಕೆ ಮತ್ತು ಬಿಜೆಡಿ ನೆರವು ಪಡೆದಿದೆ ಎಂದು ಕಾಂಗ್ರೆಸ್ ಆಪಾದಿಸಿದೆ. ಆ ಸ್ಥಾನವನ್ನು ತಾನು ಬಯಸಿರುವುದಾಗಿ ಟಿಎಂಸಿ ನಮಗೆ ಮಾಹಿತಿ ನೀಡಿರಲಿಲ್ಲ. ಅದು ಬಿಜೆಪಿ ಮತಕ್ಕೆ ಕೈಚಾಚಿತು ಎಂದು ಭಟ್ಟಾಚಾರ್ಯ ಹೇಳಿದರು.

"ಪಶ್ಚಿಮ ಬಂಗಾಳದಲ್ಲಿ 71 ಬಿಜೆಪಿ ಕಾರ್ಯಕರ್ತರನ್ನು ಟಿಎಂಸಿ ಹತ್ಯೆ ಮಾಡಿದೆ. ಇಷ್ಟಾಗಿಯೂ ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ಸಲುವಾಗಿ ಬಿಜೆಪಿ, ಟಿಎಂಸಿಗೆ ಬೆಂಬಲ ನೀಡಿದೆ" ಎಂದು ಅವರು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News