ಪೆಹ್ಲೂ ಖಾನ್ ಹತ್ಯೆ: ಗೋ ಕಳ್ಳತನ ಪ್ರಕರಣದ ಮರು ತನಿಖೆ

Update: 2019-07-12 05:24 GMT
ಪೆಹ್ಲೂ ಖಾನ್ 

ಅಲ್ವಾರ್: ಗೋ ಕಳ್ಳತನ ಪ್ರಕರಣದ ಮರು ತನಿಖೆ ನಡೆಸಲು ರಾಜಸ್ಥಾನ ಪೊಲೀಸರಿಗೆ ಇಲ್ಲಿನ ನ್ಯಾಯಾಲಯ ಅನುಮತಿ ನೀಡಿದೆ. ಇದರೊಂದಿಗೆ ಜೈಪುರ- ದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ 2017ರ ಎ. 1ರಂದು ಗೋರಕ್ಷಕರಿಂದ ಹತ್ಯೆಗೀಡಾಗಿದ್ದ ಪೆಹ್ಲೂಖಾನ್ ಕುಟುಂಬ ನಿರಾಳವಾಗಿದೆ.

ಹತ್ಯೆಗೀಡಾದ ಪೆಹ್ಲೂಖಾನ್ ಹಾಗೂ ಆತನ ಇಬ್ಬರು ಮಕ್ಕಳನ್ನು ಗೋ ಕಳ್ಳತನ ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಿದ ಆರೋಪಪಟ್ಟಿಯನ್ನು ಪರಿಷ್ಕರಿಸಲು ಅನುಮತಿ ನೀಡುವಂತೆ ರಾಜಸ್ಥಾನ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದಾದ ಐದು ದಿನಗಳ ಬಳಿಕ ನ್ಯಾಯಾಲಯ ಅನುಮತಿ ನೀಡಿದೆ.

ಪ್ರಕರಣದ ಬಗ್ಗೆ ಇನ್ನಷ್ಟು ತನಿಖೆ ನಡೆಸಿದ ಬಳಿಕ ಪೂರಕ ಆರೋಪಟ್ಟಿ ಸಲ್ಲಿಸಲಾಗುತ್ತದೆ ಎಂದು ಅಲ್ವಾರ್ ಎಸ್ಪಿ ಪಾರಿಶ್ ದೇಶಮುಖ್ ಹೇಳಿದ್ದಾರೆ. ಪ್ರಕರಣದಲ್ಲಿ ಎರಡು ಎಫ್‌ಐಆರ್ ದಾಖಲಿಸಲಾಗಿತ್ತು. ಹೈನುಗಾರಿಕೆ ಮಾಡುತ್ತಿದ್ದ ಪೆಹ್ಲೂಖಾನ್ ಹತ್ಯೆಗೆ ಸಂಬಂಧಿಸಿದಂತೆ ಎಂಟು ಮಂದಿಯ ವಿರುದ್ಧ ಒಂದು ಪ್ರಕರಣ ದಾಖಲಿಸಿದ್ದರೆ, ಇನ್ನೊಂದು ಪ್ರಕರಣದಲ್ಲಿ ಪೆಹ್ಲೂಖಾನ್ ಹಾಗೂ ಆತನ ಇಬ್ಬರು ಮಕ್ಕಳು ಅನುಮತಿ ಇಲ್ಲದೇ ಜಾನುವಾರು ಕಳ್ಳಸಾಗಣೆ ಮಾಡುತ್ತಿದ್ದರು ಎಂದು ಆಪಾದಿಸಲಾಗಿತ್ತು.

ಆದರೆ ನಾವು ಹಸುಗಳನ್ನು ರಾಜಸ್ಥಾನದಿಂದ ಹೊರಕ್ಕೆ ಒಯ್ಯುತ್ತಿರಲಿಲ್ಲ; ಅಲ್ವರ್‌ನಲ್ಲಿರುವ ಸಂಬಂಧಿಕರ ಮನೆಗೆ ಅವುಗಳನ್ನು ಒಯ್ಯಲಾಗುತ್ತಿತ್ತು ಎಂದು ಸಂತ್ರಸ್ತರ ಕುಟುಂಬದವರು ಇತ್ತೀಚೆಗೆ ರಾಜಸ್ಥಾನ ಪೊಲೀಸರ ಮುಂದೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಅಕ್ರಮ ಜಾನುವಾರು ಸಾಗಾಣಿಕೆ ಪ್ರಕರಣದ ಮರುತನಿಖೆಗೆ ಪೊಲೀಸರು ಮುಂದಾಗಿದ್ದರು.

ಪೆಹ್ಲೂ ಖಾನ್ ಹತ್ಯೆ ಪ್ರಕರಣದಲ್ಲಿ ಎಂಟು ಮಂದಿ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಇತರ ಇಬ್ಬರು ತಲೆ ಮರೆಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News