ಶೇ.10ರಷ್ಟು ಮೀಸಲಾತಿ ಹಿಂದುಳಿದ ವರ್ಗಗಳಿಗೆ ಮಾರಕ: ಎಚ್.ಎಂ.ರೇವಣ್ಣ

Update: 2019-07-14 16:31 GMT

ಬೆಂಗಳೂರು, ಜು.14: ಕೇಂದ್ರ ಸರಕಾರ ಇತ್ತೀಚಿಗೆ ಜಾರಿ ಮಾಡಿದ ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಗಳಿಗೆ ಶೇ.10 ರಷ್ಟು ಮೀಸಲಾತಿಯು ಹಿಂದುಳಿದ ವರ್ಗಗಳಿಗೆ ಮಾರಕವಾದುದಾಗಿದೆ ಎಂದು ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಹೇಳಿದ್ದಾರೆ.

ರವಿವಾರ ನಗರದ ದೇವರಾಜು ಅರಸು ಭವನದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಹಾಗೂ ದೇವರಾಜ ಅರಸು ಸಂಶೋಧನಾ ಸಂಸ್ಥೆ ಜಂಟಿಯಾಗಿ ಆಯೋಜಿಸಿದ್ದ ಮೀಸಲಾತಿ ಕುರಿತ ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೇಂದ್ರ ಸರಕಾರವು ಮೇಲ್ಜಾತಿಗಳ ಹಿತ ಕಾಪಾಡುವ ಉದ್ದೇಶದಿಂದ ಶೇ.10 ರಷ್ಟು ಮೀಸಲಾತಿಯನ್ನು ಚುನಾವಣಾ ಸಂದರ್ಭದಲ್ಲಿ ಜಾರಿ ಮಾಡಿರುವುದು ಸರಿಯಾದ ಕ್ರಮವಲ್ಲ. ಇದರಿಂದ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ಭಾರಿ ಪ್ರಮಾಣದಲ್ಲಿ ಅನ್ಯಾಯವಾಗಲಿದೆ. ಮೇಲ್ಜಾತಿಯವರಿಗೆ ಮೀಸಲಾತಿ ನೀಡುವ ಮಸೂದೆ ತರುವ ಮೊದಲು ಜನಾಭಿಪ್ರಾಯ ಸಂಗ್ರಹಿಸದೇ ಏಕಾಏಕಿ ಜಾರಿ ಮಾಡಿದ್ದಾರೆ ಎಂದು ದೂರಿದರು.

ವಿಶ್ವದ ಹಲವು ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವವಿದ್ದು, ತನ್ನದೇ ಆದ ಸಂವಿಧಾನವನ್ನು ಹೊಂದಿದೆ. ಆದರೆ, ಈ ಎಲ್ಲ ರಾಷ್ಟ್ರಗಳಿಗಿಂತ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ನಮ್ಮ ಭಾರತದ ಸಂವಿಧಾನ ಶ್ರೇಷ್ಟವಾದುದಾಗಿದೆ. ನಮ್ಮ ಸಂವಿಧಾನದಲ್ಲಿ ಎಲ್ಲ ಸಮುದಾಗಳಿಗೂ ಅವಕಾಶ ನೀಡಲಾಗಿದೆ. ಸಮಾನತೆ ಕಲ್ಪಿಸಿದ್ದು, ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಸಾಮಾಜಿಕ ನ್ಯಾಯದ ಅಡಿಯಲ್ಲಿ ಮೀಸಲಾತಿಯನ್ನೂ ನೀಡಲಾಗಿದೆ ಎಂದು ನುಡಿದರು.

ದೇಶದಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ನಂತರ ನಿರಂತರವಾಗಿ ಸಂವಿಧಾನವನ್ನು ಬದಲಿಸಲು ಪ್ರಯತ್ನ ಮಾಡುತ್ತಿದ್ದಾರೆ. ಸಂವಿಧಾನವನ್ನು ಬದಲಿಸಿ, ಶೋಷಿತ, ಅಲ್ಪಸಂಖ್ಯಾತ, ಹಿಂದುಳಿದ, ಸ್ಪೃಶ್ಯ, ಅಸ್ಪೃಶ್ಯ ಸೇರಿದಂತೆ ಎಲ್ಲರ ಹಕ್ಕುಗಳನ್ನು ನಾಶ ಮಾಡಲು ಪಣತೊಟ್ಟಿದ್ದಾರೆ. ಹೀಗಾಗಿ, ಎಲ್ಲರೂ ಒಗ್ಗಟ್ಟಿನಿಂದ ಇದರ ವಿರುದ್ಧ ಹೋರಾಡಲು ಸಜ್ಜಾಗಬೇಕೆಂದು ಕರೆ ನೀಡಿದರು.

ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜು ಮಾತನಾಡಿ, ಕೇಂದ್ರ ಸರಕಾರ ಜಾರಿಗೆ ತಂದಿರುವ ಶೇ.10 ರಷ್ಟು ಮೀಸಲಾತಿಯಿಂದಾಗಿ ಮೇಲ್ಜಾತಿಗಳ ನಡುವೆ ಶಿಕ್ಷಣ, ಉದ್ಯೋಗದಲ್ಲಿ ಸಮಬಲ, ಪೈಪೋಟಿ ಸಾಧಿಸಲು ಕಷ್ಟವಾಗುತ್ತದೆ. ಹೀಗಾಗಿ, ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಲೇಬೇಕಿದೆ ಎಂದರು.

ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ 199 ಜಾತಿ ಹಾಗೂ ಉಪ ಜಾತಿಗಳಿವೆ. ಆದರೆ, ರಾಜ್ಯ ಸರಕಾರ ತಯಾರಿಸಿದ ಒಬಿಸಿ ಪಟ್ಟಿಯಲ್ಲಿ 20 ಜಾತಿ ಮತ್ತು ಉಪ ಜಾತಿಗಳಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರಗಳ ಪಟ್ಟಿಗೆ ತಾಳೆಯಾಗುತ್ತಿಲ್ಲ ಎಂದ ಅವರು, ಮೀಸಲಾತಿಯನ್ನು ಜಾತಿಯ ಆಧಾರದಲ್ಲಿ ನೀಡಬಾರದು, ಆರ್ಥಿಕವಾಗಿ ಹಿಂದುಳಿದವರಿಗೆ ನೀಡಬೇಕೆಂದು ಸಂವಿಧಾನದಲ್ಲಿ ಎಲ್ಲಿಯೂ ಉಲ್ಲೇಖವಿಲ್ಲ ಎಂದು ಹೇಳಿದರು.

ಮೀಸಲಾತಿ ನೀಡುವ ಸಂದರ್ಭದಲ್ಲಿ ಶೇ.50ರಷ್ಟು ಮೀಸಲಾತಿ ಮೀರಬಾರದು ಎಂದು ಎಂಬ ನಿಯಮವಿದೆ. ಆದರೆ, ಅದು ಉಲ್ಲಂಘನೆಯಾಗುತ್ತಿದೆ ಎಂದ ಅವರು, ಮೇಲ್ವರ್ಗದವರಿಗೆ ಮೀಸಲಾತಿ ನೀಡಬಾರದು ಎಂದೇನಿಲ್ಲ. ಆದರೆ, ಯಾವ ಆಧಾರದಲ್ಲಿ ನೀಡಲಾಗುತ್ತಿದೆ ಎಂಬುದು ಮುಖ್ಯವಾಗುತ್ತದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ದೇವರಾಜ ಅರಸು ಸಂಶೋಧನಾ ಸಂಸ್ಥೆಯ ನಿರ್ದೇಶಕ ಪ್ರೊ.ಎನ್.ನರಸಿಂಹಯ್ಯ, ಬಿ.ಕೆ.ರವಿ.ನಳಿನಾಕ್ಷಿ ಸಣ್ಣಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News