ಮೆಟ್ರೊ ಪ್ರಯಾಣಿಕರು ಮರೆತ ವಸ್ತುಗಳ ಹರಾಜಿಗೆ ಬಿಎಂಆರ್‌ಸಿಎಲ್ ತೀರ್ಮಾನ

Update: 2019-07-14 16:37 GMT

ಬೆಂಗಳೂರು, ಜು.14: ಕಳೆದ ಒಂದು ವರ್ಷದಲ್ಲಿ ನಮ್ಮ ಮೆಟ್ರೊದಲ್ಲಿ ಪ್ರಯಾಣಿಸುವವರು ಗಡಿಬಿಡಿಯಲ್ಲಿ 200 ಕ್ಕೂ ಹೆಚ್ಚು ವಿವಿಧ ವಸ್ತುಗಳನ್ನು ನಿಲ್ದಾಣ ಹಾಗೂ ರೈಲಿನಲ್ಲೇ ಬಿಟ್ಟು ಹೋಗಿದ್ದು, ಅವುಗಳನ್ನು ಸಂಗ್ರಹಿಸಿರುವ ಬಿಎಂಆರ್ ಸಿಎಲ್ ಸಾರ್ವಜನಿಕವಾಗಿ ಹರಾಜು ಮಾಡಲು ತೀರ್ಮಾನಿಸಿದೆ.

ಮೆಟ್ರೊದಲ್ಲಿ ಪ್ರಯಾಣಿಸುವವರು ಬೆಲೆ ಬಾಳುವ ವಸ್ತುಗಳು ಕಾಣೆಯಾದರೆ ಕೂಡಲೇ ಮುಂದಿನ ನಿಲ್ದಾಣದಲ್ಲಿ ಇಳಿದು ಸಿಬ್ಬಂದಿಯನ್ನು ಸಂಪರ್ಕಿಸುವ ಪ್ರಯತ್ನ ಮಾಡುತ್ತಾರೆ. ಆದರೆ ಸಾಮಾನ್ಯ ವಸ್ತುಗಳು ಕಾಣೆಯಾಗುವ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿಯೇ ಕಳೆದ ಒಂದು ವರ್ಷದಲ್ಲಿ ಕಾಣೆಯಾದ ವಸ್ತುಗಳು ಬಿಎಂಆರ್‌ಸಿಎಲ್‌ನ ಕಚೇರಿಯಲ್ಲಿ ಕೊಳೆಯುತ್ತಾ ಬಿದ್ದಿವೆ.

ಪ್ರಯಾಣಿಕರು ವಸ್ತುಗಳನ್ನು ಬಿಟ್ಟು ಹೋಗುವುದು ಸಣ್ಣ ವಿಷಯ ಎಂದೆನಿಸಿದರೂ ಇದರಿಂದ ಬಿಎಂಆರ್‌ಸಿಎಲ್‌ಗೆ ಸಮಸ್ಯೆಯಾಗುತ್ತಿದೆ. ನಿಯಮ ಪ್ರಕಾರ ಮೆಟ್ರೊ ನಿಗಮ ಈ ವಸ್ತುಗಳನ್ನು ಶಾಶ್ವತವಾಗಿ ಇಟ್ಟುಕೊಳ್ಳುವಂತಿಲ್ಲ ಹಾಗೂ ಬಳಸುವಂತಿಲ್ಲ. ಆದ್ದರಿಂದ ವಸ್ತುಗಳನ್ನು ಹರಾಜು ಹಾಕಿ ಹೊರಗೆ ಕಳುಹಿಸಬೇಕಾಗುತ್ತದೆ. ಒಮ್ಮೆ ಬಳಕೆಯಾದ ವಸ್ತುಗಳನ್ನು ಖರೀದಿಸುವವರು ಬಹಳ ಅಪರೂಪ. ಇದರಿಂದಾಗಿ ವಸ್ತುಗಳು ಯಶವಂತಪುರ ನಿಲ್ದಾಣದಲ್ಲೆ ಉಳಿದಿದೆ.

2018 ರ ಸೆಪ್ಟೆಂಬರ್‌ನಲ್ಲಿ ಯಶವಂತಪುರ ನಿಲ್ದಾಣದಲ್ಲಿ ವಸ್ತುಗಳ ಹರಾಜು ಪ್ರಕ್ರಿಯೆ ನಡೆದಿತ್ತು. ಕೆಲ ವಸ್ತುಗಳನ್ನು ಸಾರ್ವಜನಿಕರು ಖರೀದಿಸಿದ್ದರು. ಇನ್ನೂ ಕೆಲ ವಸ್ತುಗಳು ಬಾಕಿಯಾಗಿತ್ತು. ಬಾಕಿಯಾದ ಹಾಗೂ ಈ ಒಂದು ವರ್ಷದಲ್ಲಿ ಕಾಣೆಯಾದ ಹೊಸ ವಸ್ತುಗಳನ್ನು ಸೇರಿಸಿ ಒಟ್ಟಿಗೆ ಹರಾಜು ಕರೆಯಲು ತೀರ್ಮಾನಿಸಲಾಗಿದೆ. ಜು.16ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆವರೆಗೆ ಯಶವಂತಪುರ ನಿಲ್ದಾಣದಲ್ಲಿ ವಸ್ತುಗಳನ್ನು ವಿಕ್ಷಿಸಲು ಅವಕಾಶ ಮಾಡಿಕೊಡಲಾಗಿದೆ.

ಲಂಚ್ ಬಾಕ್ಸ್‌ಗಳೇ ಹೆಚ್ಚು: ಬಿಟ್ಟು ಹೋದ ವಸ್ತುಗಳಲ್ಲಿ ಪ್ರಯಾಣಿಕರ ಲಂಚ್ ಬಾಕ್ಸ್‌ಗಳೇ ಹೆಚ್ಚಿನ ಸಂಖ್ಯೆಯಲ್ಲಿದೆ. ಎರಡನೇ ಸ್ಥಾನದಲ್ಲಿ ಹೆಲ್ಮೆಟ್ ಇದೆ. 59 ಲಂಚ್ ಬಾಕ್ಸ್ ಹಾಗೂ 53 ಹೆಲ್ಮೆಟ್‌ಗಳು ನಿಗಮದ ಸಿಬ್ಬಂದಿಗೆ ಸಿಕ್ಕಿದೆ. ಒಂದು ಪರ್ಸ್ ಕೂಡ ಸಿಕ್ಕಿದ್ದು, ಇದರಲ್ಲಿ ವ್ಯಕ್ತಿಯ ವಿಳಾಸ ತಿಳಿಸುವ ದಾಖಲೆಗಳು ಇಲ್ಲದ್ದರಿಂದ ಸಮಸ್ಯೆಯಾಗಿದೆ. ಎಲ್ಲ ವಸ್ತುಗಳನ್ನು ಮೆಟ್ರೊ ಸಿಬ್ಬಂದಿ ಜೋಪಾನವಾಗಿ ಯಶವಂತಪುರ ಮೆಟ್ರೊ ನಿಲ್ದಾಣದ ಕಾಣೆಯಾಗಿ ಸಿಕ್ಕ ವಸ್ತುಗಳ ಕೊಠಡಿಯಲ್ಲಿ ಇರಿಸಿದ್ದಾರೆ.

ಜು.18ರಂದು ಬೆಳಗ್ಗೆ 11 ಗಂಟೆಗೆ ಯಶವಂತಪುರ ನಿಲ್ದಾಣದಲ್ಲಿ ವಸ್ತುಗಳ ಹರಾಜು ನಡೆಯಲಿದೆ. ವಸ್ತುಗಳು ಕಾಣೆಯಾದರೆ ಕೂಡಲೇ ನಿಲ್ದಾಣದಲ್ಲಿ ಸಿಬ್ಬಂದಿಗೆ ತಿಳಿಸಬಹುದು ಅಥವಾ 080-25191091 ಗೆ ಕರೆ ಮಾಡಬಹುದು ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News