ಮಳೆನೀರು ಸಂಗ್ರಹದಿಂದ ಮಾತ್ರ ನೀರಿನ ಅಭಾವ ತಡೆಗಟ್ಟಲು ಸಾಧ್ಯ: ಹಿರಿಯ ರಂಗಕರ್ಮಿ ಪ್ರಸನ್ನ

Update: 2019-07-14 16:42 GMT

ಬೆಂಗಳೂರು, ಜು.14: ಮಳೆ ನೀರಿನ ಪ್ರತಿ ಹನಿಯನ್ನು ಜೋಪಾನವಾಗಿ ಸಂಗ್ರಹಿಸಿಕೊಳ್ಳಲು ಮುಂದಾದರೆ ಮಾತ್ರ ಸದ್ಯ ಹಾಗೂ ಮುಂದಿನ ದಿನಗಳಲ್ಲಿ ಉದ್ಬವಿಸುವಂತಹ ನೀರಿನ ಅಭಾವದಿಂದ ಪಾರಾಗಲು ಸಾಧ್ಯವೆಂದು ಹಿರಿಯ ರಂಗಕರ್ಮಿ ಪ್ರಸನ್ನ ತಿಳಿಸಿದ್ದಾರೆ.

ರವಿವಾರ ಗ್ರಾಮ ಸೇವಾ ಸಂಘ, ಶರಾವತಿ ನದಿ ಉಳಿಸಿ ಹೋರಾಟ ಒಕ್ಕೂಟ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ನಗರ ನೀರಿನ ದಾಹ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚೆಗೆ ಮುಂಬೈನಲ್ಲಿ ಸುರಿದ ಮಳೆ ನೀರನ್ನು ಸರಿಯಾಗಿ ಸಂಗ್ರಹಿಸಿದ್ದರೆ ಮುಂದಿನ ಮೂರು ವರ್ಷ ಬಳಸಬಹುದಾಗಿತ್ತು. ಆದರೆ, ಆ ರೀತಿಯ ಸಂಗ್ರಹಿಸದ ಕಾರಣ ಮಳೆ ನೀರು ವ್ಯರ್ಥ್ಯವಾಗಿ ಚರಂಡಿಗಳಿಗೆ ಹರಿದು ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮ ಮನೆಗಳ ಮೇಲೆ ಬೀಳುವ ಮಳೆ ನೀರಿನ ಬಗ್ಗೆ ಸ್ವಲ್ಪವೂ ಆಸಕ್ತಿ ವಹಿಸುವುದಿಲ್ಲ. ಆದರೆ, ಪಶ್ಚಿಮಘಟ್ಟಗಳಲ್ಲಿ ಹರಿಯುವ ನದಿ ನೀರು ತಂದುಕೊಡಿ ಎಂದು ಸರಕಾರದ ಮೇಲೆ ಒತ್ತಡ ಹಾಕುತ್ತೇವೆ. ಪಶ್ಚಿಮಘಟ್ಟಗಳಲ್ಲಿ ಬೀಳುವ ಮಳೆ ನೀರು ಅಲ್ಲಿನ ನದಿಗಳಿಗೆ, ಪರಿಸರಕ್ಕೆ, ಅಲ್ಲಿನ ಜೀವ ವೈವಿಧ್ಯಕ್ಕೆ ಅಗತ್ಯವಾಗಿರುತ್ತದೆ. ಅದರ ಮೇಲೆ ಹಸ್ತಕ್ಷೇಪ ಮಾಡುವುದಕ್ಕೆ ನಮಗ್ಯಾರಿಗೂ ಹಕ್ಕಿಲ್ಲವೆಂದು ಅವರು ಹೇಳಿದರು.

ಈಗಾಗಲೆ ದಕ್ಷಿಣ ಆಫ್ರಿಕಾದ ಕೇಪ್‌ಟೌನ್ ಹಾಗೂ ನಮ್ಮದೇ ದೇಶದ ಚೆನ್ನೈ ನಗರ ನೀರಿನ ಅಭಾವದಿಂದ ಭಾರೀ ಸಂಕಷ್ಟಕ್ಕೆ ಸಿಲುಕಿದೆ. ನಾವು ಈ ನಗರಗಳಿಂದ ಪಾಠ ಕಲಿಯದೆ ಹೋದರೆ ಮುಂದಿನ ಕೆಲವೆ ವರ್ಷಗಳಲ್ಲಿ ಬೆಂಗಳೂರು, ಮುಂಬೈ, ಕೊಲ್ಕತಾ ಸೇರಿದಂತೆ ಜಗತ್ತಿನ ಹಲವು ನಗರಗಳು ನೀರಿನ ಅಭಾವದಿಂದ ಬರಡಾಗುವ ಅಪಾಯವಿದೆ ಎಂದು ಅವರು ಎಚ್ಚರಿಕೆ ನೀಡಿದರು.

ನಮ್ಮ ಸರಕಾರಗಳು ಗ್ರಾಮಾಂತರದ ಜನತೆಗೆ ಸರಿಯಾದ ರೀತಿಯಲ್ಲಿ ಉದ್ಯೋಗ ಕಲ್ಪಿಸಬೇಕು. ಹಳ್ಳಿಗಳಲ್ಲಿ ಗುಡಿ ಕೈಗಾರಿಕೆ ಸೇರಿದಂತೆ ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಇದರಿಂದ ನಗರಗಳಲ್ಲಿ ಜನಸಂಖ್ಯೆ ಕಡಿಮೆಯಾಗಿ ನಗರದ ನೀರಿನ ದಾಹವನ್ನು ಸ್ವಲ್ಪಮಟ್ಟಿಗೆ ತಣಿಸಬಹುದು. ಹೀಗೆ ಹಲವು ರಚನಾತ್ಮಕ ಕಾರ್ಯಕ್ರಮಗಳಿಂದ ಸುಸ್ಥಿರ ಬದುಕನ್ನು ಕಟ್ಟಿಕೊಳ್ಳುವ ಮೂಲಕ ಶರವಾತಿ, ನೇತ್ರಾವತಿ ನದಿಗಳಿಂದ ನಗರಕ್ಕೆ ನೀರು ತರುವಂತಹ ಅಪಾಯಕಾರಿ ಯೋಜನೆಗಳನ್ನು ತಡೆಬಹುದು ಎಂದು ಅವರು ಅಭಿಪ್ರಾಯಿಸಿದರು.

ಸಾಮಾಜಿಕ ಕಾರ್ಯಕರ್ತ ಜನಾರ್ದನ ಕೆಸರಗದ್ದೆ ಮಾತನಾಡಿ, ನಮ್ಮ ಆಹಾರ ಪದ್ಧತಿ, ಕೃಷಿ ಪದ್ಧತಿಗೂ ಹಾಗೂ ನೀರಿನ ಅಭಾವಕ್ಕೂ ಬಹಳಷ್ಟು ಸಾಮಾನ್ಯತೆ ಇದೆ. ಸದ್ಯ ರಾಜ್ಯದಲ್ಲಿ ಹೆಚ್ಚು ನೀರು ಅಗತ್ಯವಿರುವಂತಹ ಭತ್ತ, ಕಬ್ಬು ಬೆಳೆಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಇದರಿಂದ ನೀರಿನ ಅಭಾವ ತಲೆದೋರಿದೆ ಎನ್ನಬಹುದಾಗಿದೆ ಎಂದು ತಿಳಿಸಿದರು.

ಕೇವಲ ಮಳೆ ನೀರು ಸಂಗ್ರಹಣೆಯಿಂದ ನೀರಿನ ಅಭಾವವನ್ನು ತಡೆಗಟ್ಟಲು ಸಾಧ್ಯವಿಲ್ಲ. ಜನರ ಜೀವನ ಶೈಲಿ ಬದಲಾಗಬೇಕಿದೆ. ಸಾವಯವ ಕೃಷಿ ಬೆಳೆಗಳಿಗೆ ಹೆಚ್ಚಿನ ಒತ್ತ ಕೊಟ್ಟರೆ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಉಳಿಸಿಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು.

ವಿಚಾರ ಸಂಕಿರಣದಲ್ಲಿ ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ, ಎ.ಆರ್.ಶಿವಕುಮಾರ್, ಭಾರ್ಗವಿ ರಾವ್, ಶ್ರೀ ಹರ್ಷ ಹೆಗಡೆ, ಶುಭಾ ರಾಮಚಂದ್ರನ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News