ನೇಪಾಳ: ಭಾರೀ ಮಳೆ, ಭೂಕುಸಿತಕ್ಕೆ ಕನಿಷ್ಠ 50 ಬಲಿ

Update: 2019-07-14 18:38 GMT

ಕಠ್ಮಂಡು,ಜು.14: ನೇಪಾಳದ ವಿವಿಧೆಡೆ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಭಾರೀ ಪ್ರವಾಹ ಹಾಗೂ ಭೂಕುಸಿತಗಳು ಸಂಭವಿಸಿದ್ದು, 18 ಮಹಿಳೆಯರು ಸೇರಿದಂತೆ ಕನಿಷ್ಠ 50 ಮಂದಿ ಸಾವನ್ನಪ್ಪಿದ್ದಾರೆ.

ಭಾರೀ ಮಳೆಯಿಂದಾಗಿ ಹಲವೆಡೆ ವಸತಿಪ್ರದೇಶಗಳು ಜಲಾವೃತವಾಗಿದ್ದು, ಸಂತ್ರಸ್ತರು ಮನೆಗಳನ್ನು ತೊರೆದು ಸುರಕ್ಷಿತ ಪ್ರದೇಶಗಳಿಗೆ ತೆರಳಿದ್ದಾರೆ.

ನೇಪಾಳದ ಪರ್ವತಪ್ರದೇಶಗಳಲ್ಲಿರುವ 25ಕ್ಕೂ ಅಧಿಕ ಜಿಲ್ಲೆಗಳಲ್ಲಿ ಹಾಗೂ ದಕ್ಷಿಣದ ತಪ್ಪಲು ಭೂಮಿಯಲ್ಲಿ ಗುರುವಾರದಿಂದೀಚೆಗೆ ನಿರಂತರ ಮಳೆಯಾಗುತ್ತಿದ್ದು, 10,385ಕ್ಕೂ ಅಧಿಕ ಕುಟುಂಬಗಳು ಸಂಕಷ್ಟಕ್ಕೀಡಾಗಿವೆ.

 ದೇಶಾದ್ಯಂತ ವಿವಿಧ ಮಳೆ ಸಂಬಂಧಿ ದುರಂತಗಳಲ್ಲಿ 1104 ಮಂದಿಯನ್ನು ಪೊಲೀಸರು ರಕ್ಷಿಸಿದ್ದಾರೆ. ಕಠ್ಮಂಡು ಒಂದರಲ್ಲೇ 185 ಮಂದಿಯನ್ನು ಪಾರು ಮಾಡ ಲಾಗಿದೆ.

 ಭೂಕುಸಿತ ಹಾಗೂ ನೆರೆಹಾವಳಿಗೆ ಸಿಕ್ಕಿಹಾಕಿಕೊಂಡವರ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆಗೆ 27,380 ಮಂದಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ನೇಪಾಳದ ಪ್ರಮುಖ ನದಿಗಳಾದ ಬಾಗ್‌ಮತಿ,ಕಮಲಾ, ಸಪ್ತಕೋಶಿ ಹಾಗೂ ಅದರ ಉಪನದಿ ಸುಂಕೋಶಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿದಂಡೆಗಳ ಆಸು ಪಾಸಿನ ಪ್ರದೇಶದಲ್ಲಿ ವಾಸಿಸುವ ಜನರನ್ನು ಕಟ್ಟೆಚ್ಚರದಲ್ಲಿರಿಸಲಾಗಿದೆಯೆಂದು ನೇಪಾಳದ ನೆರೆ ಮುನ್ಸೂಚನೆ ವಿಭಾಗದ ಜಲತಜ್ಞ ಬಿನೋದ್ ಪಾರಾಜುಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News