ಅಮೆರಿಕದ ಎಚ್ಚರಿಕೆ ಕಡೆಗಣಿಸಿ ರಶ್ಯದ ಎಸ್-400 ಕ್ಷಿಪಣಿ ಸ್ವೀಕರಿಸಿದ ಟರ್ಕಿ

Update: 2019-07-14 18:56 GMT

ಅಂಕಾರ (ಟರ್ಕಿ), ಜು.14: ಅಮೆರಿಕದ ಎಚ್ಚರಿಕೆಯನ್ನು ಲೆಕ್ಕಿಸದೆ, ಟರ್ಕಿಯು ರವಿವಾರ ರಶ್ಯದಿಂದ ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಭಾಗಗಳನ್ನು ಸ್ವೀಕರಿಸಿದೆ.

ಈ ಬಗ್ಗೆ ಟರ್ಕಿಯ ರಕ್ಷಣಾ ಇಲಾಖೆಯ ವಕ್ತಾರರು ಹೇಳಿಕೆಯೊಂದನ್ನು ನೀಡಿ, ರಶ್ಯದಿಂದ ಎಸ್-400 ದೀರ್ಘವ್ಯಾಪ್ತಿಯ ವಾಯು ಹಾಗೂ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳ ಪೂರೈಕೆಯು ಇಂದು ಪುನಾರಂಭಗೊಂಡಿದೆ’’ ಎಂದು ತಿಳಿಸಿದೆ.

   ಎಸ್-400 ಕ್ಷಿಪಣಿ ಭಾಗಗಳನ್ನು ಒಯ್ಯುತ್ತಿರುವ ರಶ್ಯದ ನಾಲ್ಕನೆ ವಿಮಾನವು ರವಿವಾರ ಅಂಕಾರದ ಹೊರವಲಯದ ಅಂಕಾರದಲ್ಲಿರುವ ಮುರ್ಟೆಡ್ ವಿಮಾನನಿಲ್ದಾಣದಲ್ಲಿ ಬಂದಿಳಿದಿದೆ ಎಂದು ಅದು ಹೇಳಿದೆ.

   ಒಂದು ವೇಳೆ ಟರ್ಕಿಯು ಎಸ್-400 ಕ್ಷಿಪಣಿಯನ್ನು ತನ್ನ ರಕ್ಷಣಾ ಪಡೆಯಲ್ಲಿ ಅಳವಡಿಸಿಕೊಂಡಲ್ಲಿ , ಆ ದೇಶಕ್ಕೆ ತಾನು ಪೂರೈಸಿರುವ ಎಫ್-35 ಫೈಟರ್ ಜೆಟ್ ವಿಮಾನದ ಸೂಕ್ಷ್ಮ ಮಾಹಿತಿಗಳು ರಶ್ಯನ್ನರಿಗೆ ಸೋರಿಕೆಯಾಗುವ ಸಾಧ್ಯತೆಯಿದೆಯೆಂದು ಅಮೆರಿಕ ಹೆದರಿದೆ. ಎಸ್-400 ಕ್ಷಿಪಣಿಯನ್ನು ಟರ್ಕಿಯು ಪಡೆದುಕೊಂಡಲ್ಲಿ, ತಾನು ಟರ್ಕಿಗೆ ಎಫ್-35 ಹೊಂಚುದಾಳಿ ವಿಮಾನವನ್ನು ದೊರೆಯದಂತೆ ಮಾಡುವುದಾಗಿ ಅಮೆರಿಕ ಎಚ್ಚರಿಕೆ ನೀಡಿದೆ.

ಪಾಶ್ಚಾತ್ಯ ರಾಷ್ಟ್ರಗಳ ಸೇನಾಮೈತ್ರಿಕೂಟದಲ್ಲಿ ಟರ್ಕಿ ಕೂಡಾ ಪಾಲುದಾರನಾಗಿದೆ. ರಶ್ಯದಿಂದ ಎಸ್-400 ಕ್ಷಿಪಣಿ ವ್ಯವಸ್ಥೆಯ ಖರೀದಿಯಿಂದ ಉಂಟಾಗಬಹುದಾದ ಸಂಂಭಾವ್ಯ ಪರಿಣಾಮಗಳ ಬಗ್ಗೆ ತಾನು ತೀವ್ರ ಆತಂಕಹೊಂದಿರುವುದಾಗಿ ನ್ಯಾಟೊ ಕೂಡಾ ಪ್ರತಿಕ್ರಿಯಿಸಿದೆ.

ರಶ್ಯದಿಂದ ಎಸ್-400 ಕ್ಷಿಪಣಿಯನ್ನು ಟರ್ಕಿ ಖರೀದಿಸುವುದಕ್ಕೆ ಅಮೆರಿಕದ ಕಾಂಗ್ರೆಸ್‌ನಿಂದಲೂ ತೀವ್ರ ವಿರೋಧ ವ್ಯಕ್ತವಾಗಿದೆ ಹಾಗೂ ಆ ದೇಶದ ವಿರುದ್ಧ ನಿರ್ಬಂಧಗಳನ್ನು ಹೇರುವುದಾಗಿ ಅದು ಬೆದರಿಕೆ ಹಾಕಿದೆ.

 ಆದರೆ ಅಮೆರಿಕದ ಎಚ್ಚರಿಕೆಯನ್ನು ಟರ್ಕಿ ತಿರಸ್ಕರಿಸಿದೆ. ರಶ್ಯದಿಂದ ಎಸ್-400 ಕ್ಷಿಪಣಿ ಖರೀದಿಯು, ಮೊದಲೇ ಏರ್ಪಡಿಸಿಕೊಂಡ ಒಪ್ಪಂದವಾಗಿದೆ. ಈ ಪ್ರಕ್ರಿಯೆ ಮುಂದುವರಿಯಲಿದೆ’’ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News