‘24 ಗಂಟೆಗಳೊಳಗೆ ಭಾರತಕ್ಕೆ ಬರುತ್ತೇನೆ’: ಐಎಂಎ ಹಗರಣದ ಆರೋಪಿ ಮನ್ಸೂರ್ ಖಾನ್ ಪ್ರತ್ಯಕ್ಷ

Update: 2019-07-15 12:09 GMT

ಬೆಂಗಳೂರು, ಜು.15: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಮನ್ಸೂರ್ ಖಾನ್, ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಂದು ವಿಡಿಯೊ ಹರಿಬಿಟ್ಟಿದ್ದು, 24 ಗಂಟೆಯೊಳಗೆ ಭಾರತಕ್ಕೆ ವಾಪಸ್ಸಾಗಿ, ಕಾನೂನು ತನಿಖೆಗೆ ಸಹಕಾರ ನೀಡುವುದಾಗಿ ಪ್ರಕಟಿಸಿದ್ದಾರೆ.

ಸೋಮವಾರ ಮಧ್ಯಾಹ್ನ ಯ್ಯೂಟ್ಯೂಬ್‌ನ ಐಎಂಎ ಗ್ರೂಪ್ ಪುಟದಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿರುವ ಮನ್ಸೂರ್ ಖಾನ್, ದೇಶದ ಕಾನೂನು ವ್ಯವಸ್ಥೆ ಹಾಗೂ ತನಿಖಾ ಸಂಸ್ಥೆಗಳ ಮೇಲೆ ಸಂಪೂರ್ಣ ನಂಬಿಕೆ ಇದೆ. ಹಾಗಾಗಿ, ಭಾರತಕ್ಕೆ ಬರುತ್ತೇನೆ. ಜೊತೆಗೆ ಹೂಡಿಕೆದಾರರ ಹಣವನ್ನು ಹಿಂತಿರುಗಿಸಲು ಬದ್ಧನಾಗಿದ್ದೇನೆ ಎಂದು ತಿಳಿಸಿದ್ದಾರೆ.

ವಿಡಿಯೊದಲ್ಲಿ ಏನಿದೆ?: ಎಲ್ಲರಿಗೂ ನಮಸ್ಕಾರ. ತಿಂಗಳಿನಿಂದಲೇ ಭಾರತಕ್ಕೆ ಬರಲು ಪ್ರಯತ್ನಿಸುತ್ತಿದ್ದೇನೆ. ಆದರೆ, ಮಧುಮೇಹ ಕಾಯಿಲೆಯ ಪ್ರಮಾಣ ಹೆಚ್ಚಿರುವ ಕಾರಣ, ಮನೆಯ ಹಾಸಿಗೆಯಲ್ಲೇ ಮಲಗಿ ವಿಶ್ರಾಂತಿ ಪಡೆಯುತ್ತಿದ್ದೇನೆ. ಆದರೂ, 24 ಗಂಟೆಯೊಳಗೆ ತಾಯ್ನಾಡಿಗೆ ಬರುತ್ತೇನೆ ಎಂದು ಹೇಳಿದ್ದಾರೆ.

ಸಮಾಜ ವಿರೋಧಿಗಳ ಮತ್ತು ಕೆಲ ರಾಜಕಾರಣಿಗಳ ಒತ್ತಡದ ಕಾರಣದಿಂದಾಗಿಯೇ ಭಾರತ ಬಿಟ್ಟು ಬಂದಿದ್ದು ಬಹುದೊಡ್ಡ ತಪ್ಪು. ಆದರೆ, ಈ ಮಾರ್ಗ ಬಿಟ್ಟರೆ, ನನಗೆ ಬೇರೆ ಯಾವ ಅವಕಾಶವೂ ಇರಲಿಲ್ಲ ಎಂದಿದ್ದಾರೆ. ನನ್ನಿಂದ ಸಾಲ ಪಡೆದವರು ಹಾಗೂ ಲಂಚ ಪಡೆದವರ ಪಟ್ಟಿಯನ್ನು ಸಿದ್ಧಪಡಿಸಿದ್ದೇನೆ. ಆ ಪಟ್ಟಿಯನ್ನು ನೇರವಾಗಿ ನ್ಯಾಯಾಲಯಕ್ಕೆ ನೀಡಲಿದ್ದೇನೆ. ಪೊಲೀಸರ ಜೊತೆಗೂ ಹಂಚಿಕೊಳ್ಳಲಿದ್ದೇನೆ. ಅದರ, ಜೊತೆ ಎಲ್ಲ ದಾಖಲೆಗಳನ್ನೂ ಕೊಡುತ್ತೇನೆ. ಪ್ರಕರಣದ ತನಿಖೆಗೆ ನ್ಯಾಯಾಲಯ ಹಾಗೂ ಪೊಲೀಸರಿಗೆ ಎಲ್ಲ ಸಹಕಾರ ನೀಡಲು ಸಿದ್ಧನಾಗಿದ್ದೇನೆ ಎಂದು ಮನ್ಸೂರ್ ನುಡಿದಿದ್ದಾರೆ.

ಹಣ ವಾಪಸ್: ಹೂಡಿಕೆದಾರರ ಹಣ ಸಂಗ್ರಹಿಸುವ ಎಲ್ಲ ಮಾರ್ಗಗಳು ನನಗೆ ಗೊತ್ತಿದೆ. ಎಲ್ಲರ ಹಣವೂ ಬ್ಯಾಂಕ್ ಖಾತೆಗಳಿಗೆ ರವಾನಿಸುವ ಜವಾಬ್ದಾರಿ ನನ್ನದು. ಈ ಬಗ್ಗೆ ಯಾರು ಆತಂಕ ಅಥವಾ ಆಕ್ರೋಶ ವ್ಯಕ್ತಪಡಿಸುವ ಅವಶ್ಯಕತೆ ಇಲ್ಲ. ಕಂಪೆನಿಯ ಗ್ರಾಹಕರೆಲ್ಲರೂ ನನ್ನ ಮೇಲೆ ನಂಬಿಕೆ ಇಡಬೇಕು. ಕಂಪೆನಿಯ ಆಸ್ತಿ ಹಾಗೂ ಹಣ ಎಲ್ಲಿದೆ ಎಂಬುದನ್ನು ಪಟ್ಟಿ ಮಾಡಿದ್ದೇನೆ. ಅದನ್ನು ಪೊಲೀಸರಿಂದ ಜಪ್ತಿ ಮಾಡಿಸಿ, ಗ್ರಾಹಕರ ಬ್ಯಾಂಕ್ ಖಾತೆಗಳಿಗೆ ಹಣವನ್ನು ಜಮೆ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚಿಕಿತ್ಸೆಗೂ ಹಣವಿಲ್ಲ

ನನ್ನ ಹೃದಯದಲ್ಲಿ ಮೂರು ರಂಧ್ರಗಳಿರುವುದಾಗಿ ವೈದ್ಯರು ಹೇಳಿದ್ದು, ಚಿಕಿತ್ಸೆ ಪಡೆಯಲೂ ಹಣವಿಲ್ಲದಂತಾಗಿದೆ. ಅಷ್ಟೇ ಅಲ್ಲದೆ, ನನ್ನ ಪರ ವಾದ ಮಾಡಲು ವಕೀಲರು ಯಾರು ಇಲ್ಲ. ಇನ್ನು ನನ್ನ ಕುಟುಂಬಸ್ಥರ ಸಂಪರ್ಕವೇ ಇಲ್ಲದಂತೆ ಆಗಿದೆ, ಒಬ್ಬಂಟಿಯಾಗಿದ್ದೇನೆ ಎಂದು ಮನ್ಸೂರ್ ವಿಡಿಯೊದಲ್ಲಿ ತಿಳಿಸಿದ್ದಾರೆ.

ಕಣ್ಣೀರುಗರೆದ ಮನ್ಸೂರ್

ವಿಡಿಯೊದಲ್ಲಿ ಕಣ್ಣೀರು ಸುರಿಸಿರುವ ಮನ್ಸೂರ್ ಖಾನ್, ದೇಶದ ಕಾನೂನು ವ್ಯವಸ್ಥೆ ಮೇಲೆ ನಂಬಿಕೆ ಇದೆ. ಹಾಗಾಗಿಯೇ ಬರುತ್ತೇನೆ. ಹೂಡಿಕೆದಾರರ ಹಣವನ್ನೂ ವಾಪಸ್ಸು ನೀಡುತ್ತೇನೆ ಎಂದಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News