ರೆಸಾರ್ಟ್-ಹೊಟೇಲ್‌ಗಳಿಂದ ಬಸ್‌ಗಳಲ್ಲಿ ಅಧಿವೇಶನಕ್ಕೆ ಬಂದ ಶಾಸಕರು

Update: 2019-07-15 12:39 GMT

ಬೆಂಗಳೂರು, ಜು. 15: ಶಾಸಕರ ರಾಜೀನಾಮೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಉದ್ದೇಶದಿಂದ ರೆಸಾರ್ಟ್ ಹಾಗೂ ಖಾಸಗಿ ಹೊಟೇಲ್‌ಗಳಲ್ಲಿ ಬೀಡುಬಿಟ್ಟಿದ್ದ ಶಾಸಕರು ಅಲ್ಲಿಂದ ನೇರವಾಗಿ ವಿಶೇಷ ಬಸುಗಳಲ್ಲಿ ವಿಧಾನಸೌಧಕ್ಕೆ ಆಗಮಿಸಿದರು

ಇಲ್ಲಿನ ಯಶವಂತಪುರದ ಬಳಿಯ ಖಾಸಗಿ ಹೊಟೇಲ್ನಲ್ಲಿ ತಂಗಿದ್ದ್ದ ಕಾಂಗ್ರೆಸ್ ಶಾಸಕರು ಪಕ್ಷದ ನಾಯಕ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯ ನಂತರ ಎಲ್ಲರೂಲ್ಲಿ ಒಟ್ಟಾಗಿ ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೊಳ್ಳಲು ಆಗಮಿಸಿದರು.

ಅದೇ ರೀತಿ ಬೆಂಗಳೂರು ಹೊರವಲಯದ ರಾಜಾನುಕುಂಟೆ ಬಳಿಯ ರೆಸಾರ್ಟ್‌ನಲ್ಲಿದ್ದ ಬಿಜೆಪಿ ಶಾಸಕರು ಹಾಗೂ ದೇವನಹಳ್ಳಿ ಬಳಿಯ ರೆಸಾರ್ಟ್‌ನಲ್ಲಿದ್ದ ಜೆಡಿಎಸ್ ಶಾಸಕರು ಅಲ್ಲಿಂದಲೇ ಪ್ರತ್ಯೇಕವಾಗಿ ಹವಾನಿಯಂತ್ರಿತ ಬಸ್ಸುಗಳಲ್ಲಿ ವಿಧಾನಸೌಧಕ್ಕೆ ಬಂದರು. ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್ ಮತ್ತು ವಿಪಕ್ಷ ಬಿಜೆಪಿ ಸೇರಿ ಮೂರೂ ರಾಜಕೀಯ ಪಕ್ಷದ ಶಾಸಕರು ಒಟ್ಟಿಗೆ ಬಸ್‌ಗಳ ಮೂಲಕ ಆಗಮಿಸಿ ವಿಧಾನಸಭೆ ಅಧಿವೇಶನ ಕಲಾಪದಲ್ಲಿ ಭಾಗವಹಿಸಿದರು. 

ಆಪರೇಷನ್ ಕಮಲ’ದ ಭೀತಿಯಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಪ್ರತ್ಯೇಕವಾಗಿ ಸೇರಿಸಿ ಒಗ್ಗಟ್ಟು ಕಾಯ್ದುಕೊಳ್ಳಲಾಗಿದೆ. ಅದೇ ರೀತಿ ಮತ್ತೊಂದು ಕಡೆ ಆಪರೇಷನ್ ಹಸ್ತದ ಭೀತಿ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರನ್ನು ರೆಸಾರ್ಟ್‌ನಲ್ಲಿ ಇರಿಸಲಾಗಿತ್ತು. ಶುಕ್ರವಾರದಿಂದಲೇ ರೆಸಾರ್ಟ್‌ನಲ್ಲಿದ್ದ ಶಾಸಕರು ಇಂದು ಅಧಿವೇಶನಕ್ಕೆ ಆಗಮಿಸಿದರು. ಆ ಬಳಿಕ ಪುನಃ ಹೊಟೇಲ್, ರೆಸಾರ್ಟ್‌ಗಳತ್ತ ಶಾಸಕರು ಬಸ್‌ಗಳಲ್ಲಿ ತೆರಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News