ಜು.18ರಂದು ಮುಖ್ಯಮಂತ್ರಿ ವಿಶ್ವಾಸಮತ ಯಾಚನೆ: ಸ್ಪೀಕರ್ ರಮೇಶ್ ಕುಮಾರ್

Update: 2019-07-15 13:05 GMT

ಬೆಂಗಳೂರು, ಜು.15: ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜು.12ರಂದು ಸ್ವಯಂಪ್ರೇರಿತ ಹೇಳಿಕೆ ನೀಡಿದ ಬೆನ್ನಲ್ಲೆ, ಇಂದು ನಡೆದ ಕಲಾಪ ಸಲಹಾ ಸಮಿತಿಯಲ್ಲಿ ವಿಶ್ವಾಸಮತ ಯಾಚನೆಗೆ ಸಮಯ ನಿಗದಿಗೊಳಿಸುವ ಸಂಬಂಧ ಸುದೀರ್ಘ ಚರ್ಚೆ ನಡೆಯಿತು. ಈ ಹಿನ್ನೆಲೆಯಲ್ಲಿ ಮಧ್ಯಾಹ್ನ 12.30ಕ್ಕೆ ಸಮಾವೇಶಗೊಳ್ಳಬೇಕಿದ್ದ ಸದನವು ಮಧ್ಯಾಹ್ನ 2.30ಕ್ಕೆ ಸೇರಿತು.

ಸದನ ಸೇರುತ್ತಿದ್ದಂತೆ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಮಾತನಾಡಿ, ಜು.12ರಂದು ವಿಧಾನಸಭೆಯ ಕಲಾಪ ಆರಂಭಗೊಂಡು ಸಂತಾಪ ಸೂಚಕದ ನಿರ್ಣಯದ ಮೇಲೆ ಚರ್ಚೆ ಆರಂಭಿಸುವ ಸಂದರ್ಭದಲ್ಲಿ ಸಭಾನಾಯಕ ಎಚ್.ಡಿ.ಕುಮಾರಸ್ವಾಮಿ, ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಉದ್ಭವಿಸಿರುವ ರಾಜಕೀಯ ಪರಿಸ್ಥಿತಿಯ ಕಾರಣದಿಂದಾಗಿ ಸಭೆಯ ವಿಶ್ವಾಸಮತ ಯಾಚಿಸಲು ಇಚ್ಛಿಸುವುದಾಗಿ ಹೇಳಿಕೆ ನೀಡಿದ್ದರು ಎಂದರು.

ಅಂದು ಸದನ ಮುಂದೂಡಿದ ಬಳಿಕ ಸಭಾ ನಾಯಕರ ಮನವಿಯ ಹಿನ್ನೆಲೆಯಲ್ಲಿ ವಿಶ್ವಾಸಮತ ಯಾಚನೆಗೆ ಸಮಯ ನಿಗದಿಗೊಳಿಸಲು ಕಲಾಪ ಸಲಹಾ ಸಮಿತಿಯ ಸಭೆಯನ್ನು ಕರೆಯಲಾಗಿತ್ತು. ಆದರೆ, ದುರಾದೃಷ್ಟವಶಾತ್ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅಥವಾ ಅವರ ಪಕ್ಷದ ಯಾವ ನಾಯಕರು ಅಂದಿನ ಸಭೆಯಲ್ಲಿ ಭಾಗವಹಿಸಿರಲಿಲ್ಲ ಎಂದು ರಮೇಶ್ ಕುಮಾರ್ ಹೇಳಿದರು.

ವಿರೋಧ ಪಕ್ಷದ ನಾಯಕರ ಅನುಪಸ್ಥಿತಿಯಲ್ಲಿ ವಿಶ್ವಾಸಮತ ಯಾಚನೆಗೆ ಸಮಯ ನಿಗದಿಗೊಳಿಸುವ ಕುರಿತು ಸಭೆಯಲ್ಲಿ ಏಕಪಕ್ಷೀಯ ತೀರ್ಮಾನ ಕೈಗೊಳ್ಳುವುದು ಸರಿಯಲ್ಲ ಎಂದು, ಇವತ್ತು ಮತ್ತೊಂದು ಸಭೆಯನ್ನು ಕರೆಯಲಾಗಿತ್ತು ಎಂದು ಅವರು ತಿಳಿಸಿದರು.

ಇವತ್ತಿನ ಕಲಾಪ ಸಲಹಾ ಸಮಿತಿಯ ಸಭೆ ಆರಂಭಗೊಳ್ಳುವ ಮುನ್ನ ಬಿಜೆಪಿ ಸದಸ್ಯರಾದ ಜೆ.ಸಿ.ಮಾಧುಸ್ವಾಮಿ, ಸಿ.ಎಂ.ಉದಾಸಿ, ಬಸವರಾಜ ಬೊಮ್ಮಾಯಿ ನನ್ನನ್ನು ಭೇಟಿ ಮಾಡಿ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ಅವಕಾಶ ಕಲ್ಪಿಸಿಕೊಡುವಂತೆ ಮನವಿ ಮಾಡಿದ್ದರು ಎಂದು ರಮೇಶ್ ಕುಮಾರ್ ಹೇಳಿದರು.

ಈ ಸದನದಲ್ಲಿ ನಾವೇ ಮಾಡಿಕೊಂಡಿರುವ ನಿಯಮಾವಳಿಗಳ ಪ್ರಕಾರ ವಿಶ್ವಾಸ ಮತಯಾಚನೆಗೆ ಸಭಾನಾಯಕರು ಮಾಡಿರುವ ಮನವಿ ಹಾಗೂ ಪ್ರತಿಪಕ್ಷದ ನಾಯಕರು ನೀಡಿರುವ ಸೂಚನೆಯ ವಿಷಯಗಳು ಒಂದೇ ಆಗಿವೆ. ಇದಕ್ಕೆ ಏಕಾಏಕಿ ಸಮಯ ನಿಗದಿ ಮಾಡಲು ಸಾಧ್ಯವಿಲ್ಲದೆ ಇರುವುದರಿಂದ, ಇವತ್ತು ಸಭೆ ಕರೆದು ಸುದೀರ್ಘವಾಗಿ ಚರ್ಚೆ ನಡೆಸಲಾಗಿದೆ ಎಂದು ಸ್ಪೀಕರ್ ಹೇಳಿದರು.

ಸಂಸತ್ತಿನ ನಡಾವಳಿಗಳ ಸಂಪ್ರದಾಯದ ಪ್ರಕಾರ ಅವಿಶ್ವಾಸ ನಿರ್ಣಯದ ಸೂಚನೆ ಕಳುಹಿಸಿದ 10 ದಿನಗಳ ಒಳಗೆ ಈ ಸಂಬಂಧ ಚರ್ಚೆಗೆ ಅವಕಾಶ ಕಲ್ಪಿಸಿಕೊಡಬೇಕು. ಆದರೆ, ವಿಧಾನಸಭೆಯಲ್ಲಿ ನಾವು ನಾಲ್ಕು ದಿನ ಕಾಯುವುದು ಬೇಡ, ಗುರುವಾರ ಬೆಳಗ್ಗೆ 11 ಗಂಟೆಗೆ ಸಭಾನಾಯಕರು ವಿಶ್ವಾಸ ಮತಯಾಚನೆ ಮಾಡಲಿ, ಈ ಬಗ್ಗೆ ಆನಂತರ ಚರ್ಚೆಯಾಗಲಿ ಎಂದು ಸಭೆಯಲ್ಲಿ ನಿರ್ಧರಿಸಿರುವುದನ್ನು ರಮೇಶ್ ಕುಮಾರ್, ಸದನದ ಗಮನಕ್ಕೆ ತಂದರು. ಆದರೆ, ಈ ಮಧ್ಯೆ ಗುರುವಾರದವರೆಗೆ ಕಲಾಪವನ್ನು ನಡೆಸಬೇಕೇ ಅಥವಾ ಬೇಡವೇ ಎಂಬ ವಿಚಾರದ ಕುರಿತು ಚರ್ಚೆ ನಡೆಯಿತು. ಸಂಸತ್ತಿನ ಸಂಪ್ರದಾಯ ಹಾಗೂ ನಿಯಮಗಳನ್ನು ಪರಿಶೀಲಿಸಿದಾಗ, ಜೊತೆಗೆ ನಮ್ಮ ಸದನದಲ್ಲಿ ಈ ಹಿಂದೆ ಅವಿಶ್ವಾಸ ಮತದ ಸೂಚನೆ ಸಲ್ಲಿಕೆಯಾದ ಸಂದರ್ಭಗಳಲ್ಲಿ ಯಾವ ರೀತಿಯ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂಬುದನ್ನು ಗಮನಿಸಿದ್ದೇನೆ ಎಂದು ಅವರು ಹೇಳಿದರು.

ಸರಕಾರ ಕಲಾಪ ನಡೆಸಬಹುದು ಎಂದು ವಾದ ಮಾಡಿದೆ. ಆದರೆ, ಇದಕ್ಕೆ ಪ್ರತಿಪಕ್ಷ ವಿರೋಧ ವ್ಯಕ್ತಪಡಿಸಿದೆ. ಈ ವೇಳೆ ವಿರೋಧ ಪಕ್ಷದ ನಾಯಕರು ನೀವು ಕಲಾಪ ನಡೆಸಬಹುದಾದರೆ ನಡೆಸಿಕೊಳ್ಳಿ, ನಾವು ಅದರಲ್ಲಿ ಪಾಲ್ಗೊಳ್ಳುವುದಿಲ್ಲವೆಂದು ಹೇಳಿದ್ದಾರೆ. ಇದು ನನ್ನ ನಿರ್ಣಯ ಸರಿಯೋ, ತಪ್ಪೋ ಎಂಬುದನ್ನು ಕಾಲವೇ ಉತ್ತರಿಸಬೇಕು ಎಂದು ಸ್ಪೀಕರ್ ಹೇಳಿದರು.

ಅವಿಶ್ವಾಸ ನಿರ್ಣಯ ಮಂಡನೆಯಾದ ಬಳಿಕ ಸರಕಾರ ಅಸ್ತಿತ್ವದಲ್ಲಿ ಇರುವುದಿಲ್ಲ ಎಂದು ವಿರೋಧ ಪಕ್ಷದ ನಾಯಕರು ವಾದ ಮಂಡಿಸಿದ್ದಾರೆ. ಆಡಳಿತ ಪಕ್ಷ ಅವರ ವಾದವನ್ನು ತಳ್ಳಿ ಹಾಕಿದೆ. ಪ್ರತಿಪಕ್ಷದ ಸದಸ್ಯರು ಭಾಗವಹಿಸದೇ ಅವರನ್ನು ಹೊರಗಿಟ್ಟು ಸದನ ನಡೆಸುವುದು ಸಮಾಧಾನಕರವಲ್ಲ ಅನ್ನೋದು ನನ್ನ ಅಭಿಪ್ರಾಯ ಎಂದು ಅವರು ಹೇಳಿದರು.

ರಾಜಕೀಯ ಚದುರಂಗದಾಟದಲ್ಲಿ ನೀವು ಗೆದ್ದಿಲ್ಲ, ಅವರು ಸೋತಿಲ್ಲ. ಹಾಗೆಯೇ ಅವರು ಗೆದ್ದಿಲ್ಲ, ನೀವೂ ಸೋತಿಲ್ಲ. ನಾಳೆ ನೀವು ಗೆಲ್ಲುತ್ತೀರೋ, ಸೋಲುತ್ತೀರೋ ಅದು ನನಗೆ ಸಂಬಂಧಿಸಿದ್ದಲ್ಲ. ಸದನದ ಕಲಾಪ ಹಳಿ ತಪ್ಪದಂತೆ ನೋಡಿಕೊಳ್ಳುವುದು. ಜನರ ಆಶಯಗಳು ಮತ್ತು ನಿರೀಕ್ಷೆಗೆ ತಕ್ಕಂತೆ ನಡೆಯುವುದು ನನ್ನ ಜವಾಬ್ದಾರಿ ಎಂದು ರಮೇಶ್ ಕುಮಾರ್ ತಿಳಿಸಿದರು.

ನಾನು ಅಸಹಾಯಕನಲ್ಲ, ನನ್ನ ಬಗ್ಗೆ ಕೇಳಿ ಬರುವ ಎಲ್ಲ ಟೀಕೆ ಟಿಪ್ಪಣಿಗಳಿಗೆ ತಕ್ಕ ಉತ್ತರ ನೀಡುವಷ್ಟು ಸಾಮರ್ಥ್ಯವಿದೆ. ಆದರೆ, ನನ್ನ ಸ್ಥಾನದಲ್ಲಿ ಕೂತು ಮಾತನಾಡಬಾರದೆಂದು ಸುಮ್ಮನಿದ್ದೇನೆ ಎಂದು ಅವರು ಹೇಳಿದರು.

ಪ್ರತಿಪಕ್ಷಗಳ ಗೈರು ಹಾಜರಿಯಲ್ಲಿ ಸದನ ನಡೆಸುವುದು ಸೂಕ್ತವಲ್ಲ ಎಂದು ಭಾವಿಸಿ, ಗುರವಾರ ಬೆಳಗ್ಗೆ 11 ಗಂಟೆಯವರೆಗೆ ಸದನವನ್ನು ಮುಂದೂಡುತ್ತಿರುವುದಾಗಿ ರಮೇಶ್ ಕುಮಾರ್ ಹೇಳುವ ಮೂಲಕ, ಸೋಮವಾರದ ಕಲಾಪವನ್ನು ಪೂರ್ಣಗೊಳಿಸಿದರು. ಈ ನಡುವೆ ಸದನದ ಕಾರ್ಯಕಲಾಪಗಳ ಪಟ್ಟಿಯಲ್ಲಿದ್ದ ಪ್ರಶ್ನೋತ್ತರ, ವಿತ್ತೀಯ ಕಾರ್ಯಕಲಾಪಗಳು, ಶಾಸನ ರಚನೆ, ವರದಿಗಳ ಮಂಡನೆ ಸೇರಿದಂತೆ ಯಾವುದೂ ನಡೆಯಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News