ಮುಖ್ಯಮಂತ್ರಿ ಕೂಡಲೇ ರಾಜೀನಾಮೆ ನೀಡಬೇಕಿತ್ತು: ಬಿಜೆಪಿ ಮುಖಂಡ ಈಶ್ವರಪ್ಪ

Update: 2019-07-15 14:20 GMT

ಬೆಂಗಳೂರು, ಜು.15: ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಮರ್ಯಾದೆ ಇದ್ದಿದ್ದರೆ ಗುರುವಾರದವರೆಗೂ ಕಾಯದೆ ಕೂಡಲೇ ರಾಜೀನಾಮೆ ನೀಡಬೇಕಿತ್ತು ಎಂದು ಬಿಜೆಪಿ ಶಾಸಕರ ಕೆ.ಎಸ್.ಈಶ್ವರಪ್ಪ ಇಂದಿಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ಸೋಮವಾರ ವಿಧಾನಸಭೆ ಮೊಗಸಾಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಅತೃಪ್ತ ಶಾಸಕರಿಗೆ ಆಸೆ, ಅಮಿಷ ತೋರಿಸಿ, ಮಂತ್ರಿ ಸ್ಥಾನ ಕೊಡಲು ಚಿತಾವಣೆ ನಡೆಸುತ್ತಿದ್ದು, ಮೈತ್ರಿ ಸರಕಾರ ಉಳಿಸಿಕೊಳ್ಳಲು ಇನ್ನೂ ವಿಫಲ ಯತ್ನ ನಡೆಸುತ್ತಿದ್ದಾರೆ ಎಂದು ದೂರಿದರು.

ನಾವು ಆಪರೇಷನ್ ಕಮಲ ಮಾಡುತ್ತಿದ್ದೇವೆಂಬ ಆರೋಪ ಮಾಡುತ್ತಿದ್ದಾರೆ. ಅದನ್ನು ಅವರು ಸಾಬೀತು ಮಾಡಿ ತೋರಿಸಲಿ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ರಾಜ್ಯದ ಜನತೆಯ ಬಹಿರಂಗ ಕ್ಷಮೆ ಕೇಳಬೇಕು ಎಂದು ಈಶ್ವರಪ್ಪ ಇದೇ ವೇಳೆ ಆಗ್ರಹಿಸಿದರು.

ಎಲ್ಲ ಶಾಸಕರು ನಮ್ಮ ಸ್ನೇಹಿತರೇ, ಎಲ್ಲರೂ ರೆಸಾರ್ಟ್ ರಾಜಕೀಯ ಮಾಡುತ್ತಿದ್ದಾರೆ. ಈ ಸರಕಾರದಲ್ಲಿ ಅಭಿವೃದ್ಧಿ ಆಗಿಲ್ಲ. ಸಿಎಂ, ಲೋಕೋಪಯೋಗಿ ಸಚಿವರು ನಮಗೆ ಮರ್ಯಾದೆ ನೀಡುತ್ತಿಲ್ಲವೆಂದು ಅವರ ಪಕ್ಷದ ಶಾಸಕರೇ ಆರೋಪ ಮಾಡುತ್ತಿದ್ದಾರೆಂದು ಟೀಕಿಸಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಶಕ್ತಿ ಇಲ್ಲದ ಪಕ್ಷದ ಅಧ್ಯಕ್ಷ. ಅವರು ಒಂದು ರೀತಿಯಲ್ಲಿ ಪೇಪರ್ ಟೈಗರ್ ಇದ್ದಂತೆ. ಬಿಜೆಪಿ ವಿರುದ್ಧ ಅವರು ಮನಸೋ ಇಚ್ಛೆ ಮಾತನಾಡುತ್ತಿದ್ದಾರೆ. ಈ ಬಗ್ಗೆ ನಾನೇನು ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಈಶ್ವರಪ್ಪ ಲೇವಡಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News