ಜಾಹೀರಾತುಗಳ ಪ್ರದರ್ಶನಕ್ಕೆ ಸೀಮಿತವಾದ ಬೆಂಗಳೂರಿನ ಮೇಲ್ಸೇತುವೆಗಳು

Update: 2019-07-15 14:41 GMT

ಬೆಂಗಳೂರು, ಜು.15: ನಗರದಲ್ಲಿ ಬಿಬಿಎಂಪಿಯಿಂದ ನಿರ್ಮಾಣ ಮಾಡಿರುವ ಪಾದಚಾರಿ ಮೇಲ್ಸೇತುವೆಗಳು ಕೇವಲ ಜಾಹೀರಾತುಗಳ ಪ್ರದರ್ಶನಕ್ಕೆ ಅಷ್ಟೇ ಸೀಮಿತವಾಗಿವೆ.

ಸಂಚಾರ ದಟ್ಟಣೆಯಿಂದಾಗಿ ಸಾರ್ವಜನಿಕರು ರಸ್ತೆಗಳನ್ನು ದಾಟಲು ಪರಿತಪಿಸಬೇಕಾಗುತ್ತದೆಂಬ ಹಿನ್ನೆಲೆಯಲ್ಲಿ ಪಾಲಿಕೆಯಿಂದ ನಗರದ ಹಲವೆಡೆ ಪಾದಚಾರಿ ಮೇಲ್ಸೇತುವೆಗಳನ್ನು ನಿರ್ಮಾಣ ಮಾಡಿದ್ದರೂ, ಅವುಗಳು ಬಳಕೆಯಿಂದ ದೂರವುಳಿದಿವೆ.

ಸದಾ ದಟ್ಟಣೆ ಕಂಡು ಬರುವ ಸ್ಥಳಗಳಲ್ಲೂ ಸಾರ್ವಜನಿಕರು ರಸ್ತೆ ಮಧ್ಯದಿಂದಲೇ ಸಾಗಬೇಕಿತ್ತು. ಇದನ್ನು ತಪ್ಪಿಸಲು ಅತ್ಯಾಧುನಿಕ ರೀತಿಯಲ್ಲಿ ಲಿಫ್ಟ್‌ಗಳನ್ನು ಒಳಗೊಂಡಂತೆ ನೂರಕ್ಕೂ ಅಧಿಕ ಪಾದಚಾರಿ ಮೇಲ್ಸೇತುವೆಗಳನ್ನು ನಿರ್ಮಾಣ ಮಾಡಲು ಪಾಲಿಕೆ ನಿರ್ಧರಿಸಿದೆ. ಅದರಲ್ಲಿ ಈಗಾಗಲೇ ಹಲವು ನಿರ್ಮಾಣಗೊಂಡಿದ್ದು, ಮತ್ತಷ್ಟು ನಿರ್ಮಾಣದ ಅಂತಿಮ ಹಂತದಲ್ಲಿವೆ.

ಈಗಾಗಲೇ ನಿರ್ಮಾಣಗೊಂಡಿರುವ ಅನೇಕ ಮೇಲ್ಸೇತುವೆಗಳಲ್ಲಿ ಸಾರ್ವಜನಿಕರಿಗೆ ಪ್ರವೇಶವೇ ಇಲ್ಲದಂತಾಗಿದೆ. ಕೆಲವು ಕಡೆಗಳಲ್ಲಿ ಮೇಲ್ಸೇತುವೆ ಹತ್ತಿ ಇಳಿಯಲು ಪ್ರಯಾಸಪಟ್ಟರೆ, ಕೆಲವು ಕಡೆಗಳಲ್ಲಿ ಇದುವರೆಗೂ ಬಳಕೆಗೆ ಮುಕ್ತವಾಗಿಲ್ಲ. ಇನ್ನು ಕೆಲವು ಸ್ಥಳಗಳಲ್ಲಿ ಅಗತ್ಯವಿಲ್ಲದ ಕಡೆ ಮೇಲ್ಸೇತುವೆ ನಿರ್ಮಾಣ ಮಾಡಲಾಗಿದೆ ಎಂದು ಆರೋಪಗಳೂ ಇವೆ.

ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಪ್ರತಿದಿನ ನೂರಾರು ಜನರು ಆಗಮಿಸುತ್ತಿರುತ್ತಾರೆ. ಅಲ್ಲದೆ, ಬಸ್ ನಿಲ್ದಾಣದ ಬಳಿ ಜನರು ಓಡಾಡಲು ಕಷ್ಟಪಡಬೇಕಾಗಿದೆ. ಇಲ್ಲಿ ಮೇಲ್ಸೇತುವೆ ಅಗತ್ಯವಿದ್ದರೂ ನಿರ್ಮಾಣ ಮಾಡಿಲ್ಲ. ಕೋರಮಂಗಲದ ಕ್ರೈಸ್ಟ್ ವಿವಿ, ಬಳ್ಳಾರಿ ರಸ್ತೆ ಸೇರಿ ಇನ್ನೂ ಕೆಲವೆಡೆ ನಿರ್ಮಿಸಿರುವ ಸ್ಕೈವಾಕ್‌ಗಳು ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುತ್ತಿವೆ. ಆದರೆ, ಬಹುತೇಕ ಕಡೆಗಳಲ್ಲಿ ಇದಕ್ಕೆ ವ್ಯತಿರಿಕ್ತ ಪರಿಸ್ಥಿತಿಯಿದೆ. ಜನರಿಗೆ ಅವಶ್ಯಕತೆ ಇರುವ ಸ್ಥಳ ಆಯ್ದುಕೊಂಡು ನಂತರದಲ್ಲಿ ಪಾಲಿಕೆ ಮೇಲ್ಸೇತುವೆ ನಿರ್ಮಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಜಾಹೀರಾತು ಕಂಪನಿಗಳ ಒತ್ತಡ: ನಗರದಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಮೇಲ್ಸೇತುವೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಅನೇಕ ಕಡೆಗಳಲ್ಲಿ ಮೇಲ್ಸೇತುವೆಗಳ ನಿರ್ಮಾಣಕ್ಕೆ ಖಾಸಗಿ ಕಂಪನಿಗಳು ಬಂಡವಾಳ ಹಾಕುತ್ತಿರುವುದರಿಂದ ಅವರಿಗೆ ಅಗತ್ಯವಿರುವ ಕಡೆ ನಿರ್ಮಾಣ ಮಾಡುವಂತೆ ಒತ್ತಡ ಹಾಕಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News