ಸ್ಪೀಕರ್ ಕ್ಷಮೆಯಾಚನೆಗೆ ಸಂಸದೆ ಶೋಭಾ ಆಗ್ರಹ

Update: 2019-07-15 14:45 GMT

ಬೆಂಗಳೂರು, ಜು.15: ನೃತ್ಯಗಾತಿಯರಾದ ಹೆಣ್ಣುಮಕ್ಕಳ ಬಗ್ಗೆ ಹಗುರವಾಗಿ ಮಾತನಾಡಿರುವ ಸಭಾಧ್ಯಕ್ಷ ರಮೇಶ್ ಕುಮಾರ್ ಕೂಡಲೇ ಕ್ಷಮೆಯಾಚಿಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಾನು ನೃತ್ಯಗಾರನಲ್ಲ ಎಂದು ಸಭಾಧ್ಯಕ್ಷ ಪೀಠದಲ್ಲಿ ಕುಳಿತುಕೊಂಡು ರಮೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ. ಎರಡು ಮೂರು ಬಾರಿ ಅವರು ಅಸಾಂವಿಧಾನಾತ್ಮಕವಾಗಿ ಮಾತಾಡಿದ್ದಾರೆ. ಹಿಂದೆ ಅದೇ ಪೀಠದಲ್ಲಿ ಕೂತು ವೇಶ್ಯೆಯರ ಬಗ್ಗೆ ಮಾತಾಡಿದ್ದರು. ಈಗ ನೃತ್ಯಗಾರರ ಬಗ್ಗೆ ಮಾತಾಡಿದ್ದಾರೆ ಎಂದು ದೂರಿದರು.

ವಿಧಾನಸಭೆಯ ಸಭಾಧ್ಯಕ್ಷರ ತಲೆಯ ಮೇಲೆ ನಮ್ಮ ದೇಶದ ಲಾಂಛನವಿದ್ದು, ಗೌರವಯುತವಾದ ಸ್ಥಾನದಲ್ಲಿ ಕುಳಿತುಕೊಂಡು ಇಂತಹ ಹೇಳಿಕೆ ನೀಡುವುದು ಸರಿಯಲ್ಲ. ದೇಶದಲ್ಲಿ ಭರತನಾಟ್ಯ, ಯಕ್ಷಗಾನ, ಕಥಕ್ಕಳಿ ಮೂಲಕ ದೇವರನ್ನು ಒಲಿಸಿಕೊಂಡ ಕಲಾವಿದರಿದ್ದಾರೆ ಎಂದು ಹೇಳಿದರು.

ನೃತ್ಯದ ಬಗ್ಗೆ ಅವಹೇಳನಕಾರಿಯಾಗಿ ಆ ಪೀಠದಲ್ಲಿ ಕೂತು ಮಾತಾಡುತ್ತಿರುವುದು ಅವರ ಮಾನಸಿಕತೆಯನ್ನು ತೋರಿಸುತ್ತದೆ. ಅವರು ಕೇವಲ ಕಾಂಗ್ರೆಸ್ ಏಜೆಂಟರಂತೆ ಮಾತಾಡುತ್ತಿದ್ದು, ಕೂಡಲೇ ಅವರು ನೃತ್ಯಗಾರರ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News