ಚಂದ್ರಯಾನ-2 ಉಡಾವಣೆ ಮುಂದೂಡಿಕೆ: ಇಸ್ರೋ ನಿರ್ಧಾರಕ್ಕೆ ನೆಟ್ಟಿಗರಿಂದ ಸ್ವಾಗತ

Update: 2019-07-15 15:04 GMT

ಬೆಂಗಳೂರು, ಜು.15: ಬಹುನಿರೀಕ್ಷಿತ ಬಾಹುಬಲಿ ಚಂದ್ರಯಾನ-2 ಉಡಾವಣೆ ತಾಂತ್ರಿಕ ದೋಷಗಳಿಂದ ಕೊನೆಗಳಿಗೆಯಲ್ಲಿ ಮುಂದೂಡಿದ್ದು, ಇಸ್ರೋ ನಿರ್ಧಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಸ್ವಾಗತಿಸಿದ್ದಾರೆ.

ರವಿವಾರ ನಸುಕಿನಲ್ಲಿ ಚಂದ್ರಯಾನ-2 ಉಪಕರಣಗಳನ್ನು ಹೊತ್ತ ಬಾಹ್ಯಾಕಾಶ ವಾಹನ ವ್ಯವಸ್ಥೆಯಲ್ಲಿ ಉಡ್ಡಯನಕ್ಕೆ ಒಂದು ತಾಸು ಮೊದಲು ತಾಂತ್ರಿಕ ಸಮಸ್ಯೆಯೊಂದು ಪತ್ತೆಯಾಯಿತು. ಹೀಗಾಗಿ, ಕೂಡಲೇ ಅದನ್ನು ರದ್ದು ಮಾಡಲಾಗಿದೆ.

ಇಂತಹ ಗಟ್ಟಿಯಾದ ನಿರ್ಧಾರವನ್ನು ಕೈಗೊಂಡ ಇಸ್ರೋಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ವಿಜ್ಞಾನಿಗಳ ಸಾಮರ್ಥ್ಯದ ಮೇಲೆ ನಮಗೆ ನಂಬಿಕೆಯಿದೆ. ಇಂದು ಆಗದಿರಬಹುದು, ಆದರೆ ನಾಳೆ ಸಾಧನೆ ಮಾಡಿಯೇ ತಿರುತ್ತೇವೆ ಎಂಬ ವಿಶ್ವಾಸವಿದೆ. ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಟ್ವಿಟರ್, ಪೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ತಾಂತ್ರಿಕ ತಂಡವು ದೊಡ್ಡ ಕೆಲಸ ಮಾಡಿದೆ. ಸಕಾಲದಲ್ಲಿ ಲೋಪ ಪತ್ತೆ ಹಚ್ಚಿದ್ದರಿಂದ ಒಳ್ಳೆಯದೇ ಆಯಿತು. ಇಸ್ರೋ ತಂಡ ಅದನ್ನು ಶೀಘ್ರ ಪರಿಹರಿಸಲಿದೆ ಎನ್ನುವುದು ನನ್ನ ಆಶಯ. ಉಡ್ಡಯನದ ಹೊಸ ದಿನಾಂಕ ಮತ್ತು ಸಮಯದ ಘೋಷಣೆಗಾಗಿ ಕಾತರದಿಂದ ಕಾಯುತ್ತಿದ್ದೇನೆ ಎಂದು ಟ್ವಿಟರಿಗರೊಬ್ಬರು ಟ್ವೀಟ್ ಮಾಡಿದ್ದಾರೆ. ಮತ್ತೊಬ್ಬರು ಇಸ್ರೋಗೆ ಒಳ್ಳೆಯದಾಗಲಿ. ಕಾರ್ಯರೂಪಕ್ಕೆ ಬರುವುದು ತಡವಾದರೂ ಪರವಾಗಿಲ್ಲ, ಉತ್ತಮ ಕೆಲಸ ಮಾಡಲಿ ಎಂದು ಹಾರೈಸಿದ್ದಾರೆ.

ನೀವು ವಿಶ್ವದ ಅತ್ಯುತ್ತಮ ವಿಜ್ಞಾನಿಗಳು. ನಿಮ್ಮ ನಿರ್ಧಾರದ ಮೇಲೆ ನಮಗೆ ಭರವಸೆ ಇದೆ. ಕೊನೆಯ ಗಳಿಗೆಯಲ್ಲಿ ಉಡ್ಡಯನ ಮುಂದೂಡುವುದು ಸಾಮಾನ್ಯ ನಿರ್ಧಾರವಲ್ಲ. ಇಷ್ಟು ವರ್ಷಗಳ ಪರಿಶ್ರಮ ಹಾಳಾಗುವುದರ ಬದಲು ಮುಂದೂಡಿರುವುದು ಉತ್ತಮ ನಿರ್ಧಾರವಾಗಿದೆ. ಮುಂದಿನ ದಿನಕ್ಕಾಗಿ ಕಾತುರದಿಂದ ಕಾಯುತ್ತಿದ್ದೇವೆ ಎಂದು ಟ್ವಿಟರ್ ಹಾಗೂ ಪೇಸ್‌ಬುಕ್‌ಗಳಲ್ಲಿ ಬರೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News